ಕೇರಳದ ಕಣ್ಣೂರಿನಲ್ಲಿ ಬಂಧಿತನಾಗಿರುವ ಪಿ.ಎ. ಸಲೀಂ ಅಲಿಯಾಸ್ ರೈಸಲ್ನಿಂದ ಹಲವು ಸ್ಪೋಟಕ ಮಾಹಿತಿಗಳು ಹೊರ ಬಂದಿವೆ. ಕರ್ನಾಟಕ ಮತ್ತು ದೇಶದ ಹಲವು ಪೊಲೀಸರಿಗೆ ಬೇಕಾಗಿರುವ ಏಳು ಉಗ್ರಗಾಮಿಗಳು ದೇಶಾದ್ಯಂತ ಮತ್ತೆ ಭಯೋತ್ಪಾದನಾ ಚಟುವಟಿಕೆ ನಡೆಸಲು ಸಂಚು ನಡೆಸಿರುವ ಸ್ಫೋಟಕ ಮಾಹಿತಿ ಸಲೀಂ ಬಾಯ್ಬಿಟ್ಟಿದ್ದಾನೆ.

ಉಗ್ರ ಸಲೀಂ ಬಾಯ್ಬಿಟ್ಟ ಸ್ಫೋಟಕ ಸುದ್ದಿಗಳು..!
ಈ ಏಳು ಮಂದಿ ಉಗ್ರರೂ ಹಿಂದೆ ಬೆಂಗಳೂರಿನಲ್ಲಿ ನಡೆದ ಸರಣಿ ಸ್ಫೋಟಗಳಿಗೆ ಸಹಕರಿಸಿದವರಾಗಿದ್ದು, ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನಗಳಲ್ಲಿ ಉಗ್ರಗಾಮಿ ಸಂಘಟನೆಗಳಲ್ಲಿ ತೊಡಗಿಸಿಕೊಂಡವರು ಎಂದು ತನಿಖಾಧಿಕಾರಿ ತಿಳಿಸಿದ್ದಾರೆ. ಪಾಕಿಸ್ತಾನದಲ್ಲಿ ನೆಲೆಸಿರುವ ಲಷ್ಕರೆ-ಇ-ತೊಯ್ಬಾ ಸಂಘಟನೆ ಕಮಾಂಡರ್ ವಲೀ ಅಲಿಯಾಸ್ ರೆಹಾನ್ ಅಲಿಯಾಸ್ ರಷೀದ್ ಓಬೇದುಲ್ಲಾ ಮತ್ತು ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಮುಖ್ಯಸ್ಥ ರಿಯಾಜ್ ಭಟ್ಕಳ್ ಜತೆ ನೇರ ಸಂಪರ್ಕದಲ್ಲಿದ್ದಾರೆ. ಪ್ರಾಥಮಿಕ ವಿಚಾರಣೆ ಸಂದರ್ಭದಲ್ಲಿ ಸಲೀಂ ಕೆಲ ಮಾಹಿತಿ ನೀಡಿದ್ದು, ಮುಂದಿನ ಕೆಲ ದಿನಗಳಲ್ಲಿ ಕರ್ನಾಟಕ ಹಾಗೂ ಕೇರಳದಲ್ಲಿ ಸಂಘಟನೆಯನ್ನು ಚುರುಕುಗೊಳಿಸುವ ಜತೆಗೆ ಕೆಲವೆಡೆ ಬಾಂಬ್ ಬ್ಲಾಸ್ಟ್’ಗೆ ಸಿದ್ಧತೆ ನಡೆಸಲು ಎಲ್ಇಟಿ ಕಮಾಂಡರ್ ವಲೀ ಅಲಿಯಾಸ್ ರೆಹಾನ್ ಅಲಿಯಾಸ್ ರಷೀದ್ ಓಬೇದುಲ್ಲ ಸೂಚಿಸಿದ್ದ ಬಗ್ಗೆಯೂ ಸಲೀಂ ಹೇಳಿದ್ದಾನೆ.
ಈ ಕೃತ್ಯಕ್ಕೆ ಈಗಾಗಲೇ ಪಾಕಿಸ್ತಾನ ಫೈಸಲಾಬಾದ್ ಗುಲಿಸ್ತಾನ್ಲ್ಲಿರುವ ಎಲ್ಇಟಿ ಕಮಾಂಡರ್ ವಲೀ ಜತೆ ಅಲ್ಲೇ ಕೆಲಕಾಲ ತರಬೇತಿ ಪಡೆದಿರುವ ಬಗ್ಗೆ ಪೊಲೀಸರು ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಇದರ ಜತೆಗೆ, ಅಫ್ಘಾನಿಸ್ತಾನದಲ್ಲಿ ತಲೆಮರೆಸಿಕೊಂಡಿರುವ ಕೇರಳದ ಕಣ್ಣೂರಿನ ಮರಕ್ಕಾರಂಡಿ ನಿವಾಸಿ ಅಯೂಬ್ ಅಲಿಯಾಸ್ ಕೆ.ಪಿ. ಶಾಬೀರ್, ಪಾಕಿಸ್ತಾನದ ಕರಾಚಿಯ ಸಲೀಂ ಅಲಿಯಾಸ್ ಮುಬಷೀರ್ ಶಾಹೀದ್ ಅಲಿಯಾಸ್ ಯಾಹ್ಯಾ ಜತೆಗೂ ನಿಕಟ ಸಂಪರ್ಕದಲ್ಲಿದ್ದ ಎಂಬ ಮಾಹಿತಿ ತನಿಖೆಯಿಂದ ಗೊತ್ತಾಗಿದೆ. ಬಾಂಗ್ಲಾದೇಶದ ಹಮಾರಿಯಾದ ಜಾಹೀದ್, ಕೇರಳದ ಪಾಪಿಂಚಿರಿ ಕೊಂಡಂತ್ ಶೋಹೇಬ್ ಅಲಿಯಾಸ್ ಫೈಸಲ್ ಅವರೂ ಬಂಧಿತ ಆರೋಪಿಯ ಸಂಪರ್ಕದಲ್ಲಿದ್ದರು ಹಾಗೂ ವಿದೇಶಗಳಲ್ಲಿ ತಲೆಮರೆಸಿಕೊಂಡಿದ್ದಾರೆ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಲೀಂ, 2008ರ ಜುಲೈ 25ರ ಸರಣಿ ಬಾಂಬ್ ಸ್ಫೋಟದ ಬಳಿಕ ಕೆಲ ವರ್ಷಗಳ ಕಾಲ ಗಲ್ಫ್ ದೇಶಗಳಲ್ಲಿ ತಲೆಮರೆಸಿಕೊಂಡಿದ್ದ. ಈಗಾಗಲೇ ಬಂಧನಕ್ಕೊಳಗಾಗಿರುವ ಅಬ್ದುಲ್ ಜಬ್ಟಾರ್ ಅಲಿಯಾಸ್ ಸತ್ತಾರ್ ವಿಚಾರಣೆ ವೇಳೆ ಆರೋಪಿ ಸಲೀಂ ಮತ್ತೆ ಸಂಘಟನೆಯಲ್ಲಿ ಸಕ್ರಿಯವಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಜತೆಗೆ ಈತನ ಚಟುವಟಿಕೆಗಳ ಮೇಲೆ ರಾಷ್ಟ್ರೀಯ ತನಿಖಾ ದಳ ಮತ್ತು ಕೇಂದ್ರ ಗುಪ್ತಚರ ದಳ ಹಾಗೂ “ರಾ’ ಕಣ್ಣಿಟ್ಟಿದ್ದು, ಅವುಗಳ ಮಾಹಿತಿ ಆಧಾರದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ ಸಿಸಿಬಿ ಆರೋಪಿಯನ್ನು ಬಂಧಿಸಿದೆ.