ರಾಜ್ಯ ಸರ್ಕಾರ ಕೋವಿಡ್ ಪರಿಸ್ಥಿತಿ ನಿಭಾಯಿಸಲು ವಿಫಲವಾಗಿರುವಾಗಿದ್ದಾರೆ. ಕೊರೋನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸರ್ಕಾರದಲ್ಲಿ ಪ್ಲಾನಿಂಗ್ ಇಲ್ಲ, ಯಡಿಯೂರಪ್ಪ ನೇತೃತ್ವದ ಸರ್ಕಾರಕ್ಕೆ ಸರಿಯಾಗಿ ಆಡಳಿತ ನಡೆಸೋದಕ್ಕೆ ಆಗ್ತಿಲ್ಲ. ಇದರಿಂದ ಜನರಲ್ಲಿ ಆತಂಕ ಹಾಗೂ ಗೊಂದಲ ಹೆಚ್ಚಾಗಿದೆ. ಹೀಗಾಗಿ ಅವರು ಬೆಂಗಳೂರು ತೊರೆದು ಹಳ್ಳಿಗಳತ್ತ ಸಾಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆರೋಪಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಮತ್ತೆ ಲಾಕ್ ಡೌನ್ ಮಾಡುತ್ತಿರುವ ವಿಚಾರದ ಬಗ್ಗೆ ನಾವು ಮಾತನಾಡುವುದಿಲ್ಲ. ಸರ್ಕಾರದ ಆಡಳಿತ ಕಾರ್ಯದಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ. ಈ ಸರ್ಕಾರ ಜನರಿಗೆ ಸರಿಯಾದ ಭರವಸೆ ನೀಡುತ್ತಿಲ್ಲ. ಬೆಂಗಳೂರಿಗೆ ಮಾತ್ರ ಅಲ್ಲ ಇಡೀ ರಾಜ್ಯಕ್ಕೆ ಇದರಿಂದ ತೊಂದ್ರೆಯಾಗ್ತಿದೆ. ನಾವೆಲ್ಲರೂ ಸೇರಿ ರಕ್ಷಣೆ ಮಾಡಬೇಕಿದೆ . ಕೋವಿಡ್ ಪಿಡುಗನ್ನು ಪಕ್ಷಾತೀತವಾಗಿ ಎದುರಿಸಬೇಕು ಎಂದು ನಾವು ಆರಂಭದಿಂದಲೂ ಹೇಳುತ್ತಲೇ ಬಂದಿದ್ದೇವೆ. ಪಕ್ಷಾತೀತವಾಗಿ ನಾವು ಕೊರೋನಾವನ್ನು ನಿಯಂತ್ರಣ ಮಾಡಬೇಕಿದೆ. ನಮ್ಮ ಪಕ್ಷದ ಕಾರ್ಯಕರ್ತರು ಸೇವೆ ಮಾಡಲು ಬದ್ಧರಾಗಿದ್ದಾರೆ. ಆದ್ರೆ ಬಿಜೆಪಿಯವರು ಅವರ ಅಜೆಂಡಾ ಮಾಡಿಕೊಂಡಿದ್ದಾರೆ ಎಂದು ಶಿವಕುಮಾರ್ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ರಾಜ್ಯ ಸಚಿವರ ಮಾತುಗಳನ್ನು ನಾವು ಗಮನಿಸುತ್ತಿದ್ದೇವೆ. ಉಪಮುಖ್ಯಮಂತ್ರಿಗಳು ತಮ್ಮ ಪಕ್ಷದ ಕಾರ್ಯಕರ್ತರನ್ನು ಸ್ವಯಂ ಸೇವಕರಾಗಿ ನೇಮಿಸಿಕೊಳ್ಳುವುದಾಗಿ ತಿಳಿಸಿದ್ದಾರೆ. ಕಾಂಗ್ರೆಸ್ ಕೂಡ ರಾಜಕೀಯಕ್ಕಿಂತ ಜನಪರ ಕೆಲಸಗಳಿಗೆ ಆದ್ಯತೆ ನೀಡುತ್ತದೆ. ಹೀಗಾಗಿ ಪಕ್ಷದ ಕಾರ್ಯಕರ್ತರನ್ನು ಲಾಕ್ಡೌನ್ ಅವಧಿಯಲ್ಲಿ ಕೊರೋನಾ ನಿಯಂತ್ರಣ ಹಾಗೂ ಸಾರ್ವಜನಿಕರ ಸೇವೆಗೆ ಸ್ವಯಂ ಸೇವಕರಾಗಿ ಕೆಲಸ ಮಾಡಲು ತಯಾರಿದ್ದು, ಅವರನ್ನು ನೇಮಿಸಿಕೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದೇನೆ ಎಂದು ಡಿಕೆಶಿ ತಿಳಿಸಿದರು.
ಸರ್ಕಾರದಲ್ಲಿ ಅನೇಕ ಗೊಂದಲಗಳಿವೆ. ಅವರು ಯಾರನ್ನು ನಂಬುವ ಪರಿಸ್ಥಿತಿಯಲ್ಲಿ ಇಲ್ಲ. ಮೊದಲು ಆರೋಗ್ಯ ಸಚಿವರು, ನಂತರ ವೈದ್ಯಕೀಯ ಶಿಕ್ಷಣ ಸಚಿವರು, ನಂತರ ಶಿಕ್ಷಣ ಸಚಿವರನ್ನು ಉಸ್ತುವಾರಿಯಾಗಿ ನೇಮಿಸಿದರು. ಆಮೇಲೆ ಬೆಂಗಳೂರಿನಲ್ಲೇ ನಾಲ್ಕೈದು ಸಚಿವರಿಗೆ ಹೊಣೆ ನೀಡಿದ್ದಾರೆ. ರಾಜಕೀಯ ಕಾರ್ಯದರ್ಶಿಗಳು ಕೂಡ ಈಗ ಮಂತ್ರಿಗಳ ಕೆಲಸ ಮಾಡುತ್ತಿದ್ದಾರೆ. ಅಧಿಕಾರಿಗಳನ್ನೂ ನಂಬುವ ಪರಿಸ್ಥಿತಿಯಲ್ಲಿ ಇಲ್ಲ. ಸರ್ಕಾರ ಗೊಂದಲ ಹಾಗೂ ವೈಫಲ್ಯಗಳಿಂದ ಕೂಡಿದ್ದು ಜನರಿಗೆ ಸರಿಯಾದ ಭರವಸೆ ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಜನ ಬೇಸತ್ತು ತಮ್ಮ ಊರಿಗೆ ವಾಪಸ್ ಹೋಗುತ್ತಿದ್ದಾರೆ ಎಂದರು.