ವಿಡಿಯೋ ಎಡಿಟಿಂಗ್… ಜೀವನ ರೂಪಿಸುವ ಕ್ಷೇತ್ರ!!!

0
1748

ತಂತ್ರಗಳನ್ನು ಅರ್ಥೈಸಿಕೊಂಡು ಅವುಗಳ ಮೌಲ್ಯವರ್ಧನೆ ಮಾಡುವ ಕ್ರಿಯಾಶೀಲ ವ್ಯಕ್ತಿತ್ವ ಇರುವವರಿಗೆ ವಿಡಿಯೋ ಎಡಿಟಿಂಗ್ ಕ್ಷೇತ್ರದಲ್ಲಿ ಹೇರಳ ಅವಕಾಶಗಳು ಲಭ್ಯವಿವೆ. ನಾನ್ ಲಿನಿಯರ್ ಎಡಿಟಿಂಗ್ ತರಬೇತಿ ಪಡೆದವರು ವಿಡಿಯೋ ಎಡಿಟಿಂಗ್ ಉದ್ಯೋಗದಲ್ಲಿ ಜೀವನ ನಿರ್ಮಿಸಿಕೊಳ್ಳಲು ಸಾಧ್ಯವಿದೆ. ಇತ್ತೀಚಿನ ದಿನಗಳಲ್ಲಿ ಚಿತ್ರಗಳನ್ನು ಸುಂದರಗೊಳಿಸಲು ಸಹಕಾರಿಯಾದ ಅನೇಕ ತಂತ್ರಜ್ಞಾನ ಅವಿಷ್ಕಾರ ಆಗಿರುವುದರಿಂದ ವಿಡಿಯೋ ಎಡಿಟಿಂಗ್ ಕ್ಷೇತ್ರದಲ್ಲಿ ಸಂಕಲನಕಾರರಿಗೆ ಬೇಡಿಕೆ ಹೆಚ್ಚುತ್ತಲೇ ಇದೆ. ಚಿತ್ರ ಸಂಕಲನ ತರಬೇತಿ ಪಡೆದವರಿಗೆ ಕೇವಲ ಚಲನಚಿತ್ರಗಳಲ್ಲಿ ಮಾತ್ರವಲ್ಲ ಟಿ.ವಿ. ಧಾರವಾಹಿಗಳು, ಜಾಹೀರಾತು ನಿರ್ಮಾಣ ಕ್ಷೇತ್ರದಲ್ಲಿಯೂ ಅವಕಾಶಗಳಿವೆ. ಚಿತ್ರ ಸಂಕಲನಕಾರರ ಹೊರತಾಗಿ ಚಿತ್ರಗಳ ಮೌಲ್ಯವರ್ಧನೆ ಅಸಾಧ್ಯ ಎನ್ನುವ ಸ್ಥಿತಿ ಈ ಕ್ಷೇತ್ರದಲ್ಲಿ ನಿರ್ಮಾಣವಾಗಿದೆ. ಈ ಕ್ಷೇತ್ರಕ್ಕೆ ಸಂಬಂಧಿಸಿದ ತರಬೇತಿ ಪಡೆದವರಿಗೆ ಕೆಲಸದ ಅವಕಾಶಗಳು ವಿಪುಲವಾಗಿವೆ. ಒಂದು ಅಂದಾಜಿನ ಪ್ರಕಾರ ವಿಡಿಯೋ ಎಡಿಟಿಂಗ್ ತಂತ್ರಾಂಶ ಆಧರಿಸಿ ವಿಡಿಯೋ ಚಿತ್ರಗಳ ಮೌಲ್ಯವರ್ಧನೆ ಮಾಡಲು ಸಮರ್ಥರಾದ ಒಂದು ಲಕ್ಷಕ್ಕೂ ಹೆಚ್ಚು ಕುಶಲಕರ್ಮಿಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆಯಿದೆ.

ಹೇಗಿರುತ್ತದೆ ಕೆಲಸ

ಮೊದಲೆಲ್ಲ ಸಂಕಲನಕಾರರು ಲಿನಿಯರ್ ತಾಂತ್ರಿಕತೆಯನ್ನು ಬಳಸಿ ಕಾರ್ಯನಿರ್ವಹಿಸುತ್ತಿದ್ದರು. ಇಂದು ನಾನ್ ಲಿನಿಯರ್ ಸಂಕಲನ ತಾಂತ್ರಿಕತೆ ಬಳಸಿ ಚಿತ್ರಗಳನ್ನು ಸಂಕಲನ ಮಾಡಲಾಗುತ್ತಿದೆ. ಕ್ಯಾಮೆರಾಮನ್‍ಗಳು ಗಂಟೆಗಳ ಕಾಲ ಕಷ್ಟಪಟ್ಟು ಸೆರೆಹಿಡಿದು ತಯಾರಿಸುತ್ತಿದ್ದ ಚಿತ್ರಗಳನ್ನು ಈಗ ಚಿತ್ರ ಸಂಕಲನಕಾರರು ಕಂಪ್ಯೂಟರ್‍ಗಳ ಸಹಾಯದಿಂದ ಕೆಲವೇ ನಿಮಿಷಗಳಲ್ಲಿ ನಿರ್ಮಿಸಿ ಕೊಡುತ್ತಾರೆ. ಸೆರೆಹಿಡಿದ ಚಿತ್ರಗಳ ಮೌಲ್ಯವರ್ಧನೆಯನ್ನು ಕೆಲವೇ ನಿಮಿಷಗಳಲ್ಲಿ ಮಾಡಿ ಮುಗಿಸುತ್ತಾರೆ ನಾನ್ ಲಿನಿಯರ್ ತಾಂತ್ರಿಕತೆಯಲ್ಲಿ ನುರಿತ ಕೆಲಸಗಾರರು.

ವ್ಯಕ್ತಿಗತ ಅರ್ಹತೆ

ಯಶಸ್ವಿ ಚಿತ್ರ ಸಂಕಲನಕಾರ ಎನ್ನಿಸಿಕೊಳ್ಳಲು ಕಷ್ಟಪಟ್ಟು ದುಡಿಯುವ ಗುಣದೊಂದಿಗೆ ಇರಲೇಬೇಕಾದ ಅರ್ಹತೆ ಎಂದರೆ ಚಿತ್ರವನ್ನು ಅರ್ಥೈಸಿಕೊಂಡು ಸಂದರ್ಭಕ್ಕೆ ತಕ್ಕುದಾಗಿ ಸಂಕಲನ ಮಾಡಿ ಸೂಕ್ತ ಸಂಗೀತ ಮತ್ತು ಧ್ವನಿ ನೀಡುವ ಸಾಮಥ್ರ್ಯ. ಇದಲ್ಲದೇ ಚಿತ್ರ ಸಂಕಲನ ಕ್ಷೇತ್ರದಲ್ಲಿ ಬಳಕೆಯಾಗುತ್ತಿರುವ ನವೀನ ತಾಂತ್ರಿಕತೆ ಪರಿಚಯ ಮತ್ತು ಅಳವಡಿಸಿಕೊಳ್ಳುವ ಗುಣ ಮುಖ್ಯ. ಇದರೊಂದಿಗೆ ಮತ್ತೊಬ್ಬರ ಸಾಮಥ್ರ್ಯ ಮತ್ತು ವಿಶೇಷಗಳನ್ನು ಅರ್ಥ ಮಾಡಿಕೊಂಡು ತಂಡದೊಡನೆ ಕೆಲಸ ಮಾಡುವುದೂ ಅತ್ಯಂತ ಮಹತ್ವ.

 

ಯಾವ್ಯಾವ ತರಬೇತಿಗಳಿವೆ

ಸರ್ಟಿಫಿಕೆಟ್ ಕೋರ್ಸ್ ಇನ್ ನಾನ್ ಲಿನಿಯರ್ ಎಡಿಟಿಂಗ್, ಡಿಪ್ಲೋಮಾ ಇನ್ ವಿಡಿಯೋ ಎಡಿಟಿಂಗ್ ಅ್ಯಂಡ್ ಸೌಂಡ್ ರಿಕಾರ್ಡಿಂಗ್, ಡಿಪ್ಲೋಮಾ ಇನ್ ಪೋಸ್ಟ್ ಪ್ರೊಡಕ್ಷನ್ ಅ್ಯಂಡ್ ವಿಡಿಯೋ ಎಡಿಟಿಂಗ್ ಎಂಬ ಮೂರು ವಿಧದ ತರಬೇತಿಗಳಿವೆ. ಈ ತರಬೇತಿಗಳು ಒಂದೂವರೆ ತಿಂಗಳಿಂದ ಮೂರು ವರ್ಷಗಳ ವರೆಗಿನದ್ದಾಗಿವೆ. ಚುರುಕು ಬುದ್ಧಿಯವರಿಗಾಗಿ ಒಂದೂವರೆಯಿಂದ ಮೂರು ತಿಂಗಳ ಅಲ್ಪಾವಧಿ ತರಬೇತಿಗಳೂ ಇವೆ. ಇಂತಹ ತರಬೇತಿಗಳನ್ನು ಪಡೆದು ಯಶಸ್ವಿ ಚಿತ್ರ ಸಂಕಲನಕಾರರಾಗಿ ರೂಪುಗೊಳ್ಳಬಹುದು.

ಶೈಕ್ಷಣಿಕ ಅರ್ಹತೆ

ಸರ್ಟಿಫಿಕೆಟ್ ತರಬೇತಿ ಪಡೆಯಲು ಪಿಯುಸಿವರೆಗಿನ ಶಿಕ್ಷಣವಿದ್ದರೆ ಸಾಕು. ಪದವಿ ಅಥವಾ ಡಿಪ್ಲೋಮಾ ಶಿಕ್ಷಣ ಪಡೆಯಬೇಕಿದ್ದರೆ ಯಾವುದಾದರೂ ವಿಷಯದಲ್ಲಿ ಪದವಿ ಗಳಿಸಿರುವುದು ಅಗತ್ಯ. ಇದರಲ್ಲಿ ಅಲ್ಪಾವಧಿ ತರಬೇತಿಗಳೂ ಇವೆ. ಯಾವುದಾದರೂ ವಾಹಿನಿಯಲ್ಲಿ ಕೆಲಸಕ್ಕೆ ಸೇರಬೇಕಿದ್ದರೆ ಪದವಿ ಪಡೆದಿರುವುದು ಮುಖ್ಯ. ಹೀಗಿದ್ದೂ ಶೈಕ್ಷಣಿಕ ಅರ್ಹತೆಗಿಂತ ಅನುಭವಕ್ಕೆ ಹೆಚ್ಚಿನ ಮಹತ್ವವಿದೆ. ಹಾಗಾಗಿ ಲಭ್ಯವಿರುವ ಎಲ್ಲ ತಂತ್ರಾಂಶಗಳನ್ನು ಬಳಸಿ ಕೆಲಸ ಮಾಡುವ ಸಾಮಥ್ರ್ಯ ಇರುವುದು ಹೆಚ್ಚು ಉಪಯುಕ್ತ.

ಸಂಭಾವ್ಯ ಅವಕಾಶಗಳು

ವಿಡಿಯೋ ಸಂಕಲನಕಾರರ ತರಬೇತಿ ನಂತರ ಸುದ್ದಿ, ಮನರಂಜನೆ, ಚಲನ ಚಿತ್ರ ಉತ್ಪಾದನಾ ಸಂಸ್ಥೆಗಳು, ವೆಬ್ ಡಿಸೈನಿಂಗ್ ಕಂಪನಿ, ಮ್ಯೂಜಿಕ್ ಸಂಕಲನ ಕ್ಷೇತ್ರ (ಮನರಂಜನಾ ಚಲನಚಿತ್ರ ಮತ್ತು ಜಾಹೀರಾತು ಚಿತ್ರಗಳು), ಬಿಪಿಒ ಮತ್ತಿತರ ಕ್ಷೇತ್ರಗಳಲ್ಲಿ ಉದ್ಯೋಗ ಲಭ್ಯವಿವೆ. ಈ ಕ್ಷೇತ್ರದಲ್ಲಿ ಹವ್ಯಾಸಿಗಳಾಗಿ ಕೆಲಸ ಮಾಡುವವರಿಗೆ ಹೇರಳ ಅವಕಾಶಗಳುಂಟು. ಪೋಸ್ಟ್ ಪ್ರೊಡಕ್ಷನ್ ಸ್ಟುಡಿಯೋ, ಟೆಲಿವಿಝನ್ ಕಂಪನಿಗಳಲ್ಲಿ ಅಲ್ಪಾವಧಿ ಗುತ್ತಿಗೆಯನ್ವಯ ಕೆಲಸ ಮಾಡಲು ಅವಕಾಶಗಳು ಇವೆ. ಸಂಕಲನ ಕಾರ್ಯದಲ್ಲಿ ಆಸಕ್ತರಾದ ಸೃಜನಶೀಲರಿಗೆ ನಾನ್ ಲಿನಿಯರ್ ಎಡಿಟಿಂಗ್ ಉದ್ಯೋಗ ಅತ್ಯಂತ ಆಕರ್ಷಕವಾಗಿದೆ. ಮನರಂಜನೆ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಲು ಆಸಕ್ತರಾದವರಿಗೆ ನಾನ್ ಲಿನಿಯರ್ ವಿಡಿಯೋ ಎಡಿಟಿಂಗ್ ಉದ್ಯೋಗಗಳಲ್ಲಿ ಸಾಕಷ್ಟು ಅವಕಾಶಗಳು ಇವೆ.

ನಾನ್ ಲಿನಿಯರ್ ಎಡಿಟರ್

ನಾನ್ ಲಿನಿಯರ್ ಎಡಿಟಿಂಗ್ ಎಂಬುದು ಒಂದು ತಾಂತ್ರಿಕತೆ. ತರಬೇತಿ ಸಮಯದಲ್ಲಿ ಸಂಕಲನ ಪರಿಕಲ್ಪನೆ ಮತ್ತು ತಾಂತ್ರಿಕತೆ ಆಧರಿಸಿ ಮಾಡಬೇಕಾದ ಕೆಲಸಗಳನ್ನು ಹೇಳಿಕೊಡಲಾಗುತ್ತದೆ. ಚಿತ್ರಗಳನ್ನು ಸೆರೆಹಿಡಿಯುವುದು, ಸೆರೆಹಿಡಿದ ಚಿತ್ರಗಳ ಸಂಕಲನ ಸೇರಿದಂತೆ ಚಿತ್ರ ಎಲ್ಲಿ ಹೊಂದಿಕೆಯಾಗುತ್ತದೆ, ಸಂಗೀತ ಮತ್ತು ಧ್ವನಿಯನ್ನು ಹೇಗೆ ಸಂಕಲನ ಮಾಡಬೇಕು ಎಂಬೆಲ್ಲ ಅಂಶಗಳು ನಾನ್ ಲಿನಿಯರ್ ಕಾರ್ಯದಲ್ಲಿ ಸೇರಿರುತ್ತವೆ. ಈ ಕಾರ್ಯವನ್ನು ನುರಿತ ಸಂಕಲನಕಾರರು ಮಾತ್ರ ನಡೆಸಲು ಸಾಧ್ಯ.