ಮೋದಕ ಪ್ರಿಯ ಗಣೇಶನಿಗೆ ಪ್ರಿಯವಾದ ನೈವೇದ್ಯ ಮೋದಕ ಮಾಡುವ ವಿಧಾನ

0
2482

ಗಣೇಶ ಹಬ್ಬದ ಸಂದರ್ಭದಲ್ಲಿ ಹಲವಾರು ಅಡುಗೆಗಳನ್ನು ಮತ್ತು ಖಾದ್ಯಗಳನ್ನು ಮಾಡಲಾಗುತ್ತದೆ. ಆದರೂ ಗಣಪತಿಯ ಪ್ರಿಯ ಪದಾರ್ಥವಾದ ಮೋದಕಕ್ಕೆ ಈ ಹಬ್ಬದಲ್ಲಿ ಹೆಚ್ಚಿನ ಪ್ರಾಧಾನ್ಯತೆ ಇರುತ್ತದೆ. ಇದು ಗಣಪತಿಯ ನೆಚ್ಚಿನ ತಿಂಡಿ. ಆದ್ದರಿಂದ ಇದನ್ನು ತಪ್ಪದೆ ಮಾಡಲಾಗುತ್ತದೆ. ಹಾಗಾದರೆ ಬನ್ನಿ ಮೋದಕ ಮಾಡುವ ವಿಧಾನವನ್ನು ಇಲ್ಲಿ ಹೇಳಿಕೊಡುತ್ತೇವೆ.

ಬೇಕಾಗುವ ಸಾಮಗ್ರಿಗಳು

  • ಗೋಧಿ ಹಿಟ್ಟು 2 ಬಟ್ಟಲು
  • ಮೈದಾ ಹಿಟ್ಟು 1 ಸ್ಪೂನಿನಷ್ಟು
  • ಬೆಲ್ಲ 1 ಬಟ್ಟಲು
  • ತುರಿದ ಕೊಬ್ಬರಿ 1 ಬಟ್ಟಲು
  • ಏಲಕ್ಕಿ ಪುಡಿ ಚಿಟಿಕೆಯಷ್ಟು
  • ತುಪ್ಪ ಅಥವಾ ಕುಕಿಂಗ್ ಮೀಡಿಯಂ

ಮಾಡುವ ವಿಧಾನ

ಮೊದಲಿಗೆ ಪುಡಿ ಮಾಡಿದ ಬೆಲ್ಲ ಮತ್ತು ತುರಿದ ಹಸಿ ಕೊಬ್ಬರಿಯನ್ನು ಒಟ್ಟಿಗೆ ಸೇರಿಸಿ ಬಾಣಲೆಯಲ್ಲಿ ಹಾಕಿ ಮಂದ ಉರಿಯಲ್ಲಿ ಬಿಸಿ ಮಾಡಬೇಕು.

ಇದರಲ್ಲೇ ಏಲಕ್ಕಿ ಪುಡಿ ಹಾಕಿದರೆ ಉತ್ತಮ. ಸತತ ಕೈಯಾಡಿಸುತ್ತ ಬೆಲ್ಲ ಕಾದು ನೀರಾಗಿ ಬೆಲ್ಲ ಮತ್ತು ಕೊಬ್ಬರಿಯ ಹೂರಣ ತಾರಾಗುತ್ತದೆ. ಎರಡೂ ಸಮನಾಗಿ ಮಿಶ್ರಣವಾದನಂತರ ಸ್ಟೌ ಆರಿಸಿ ಕೆಳಗಿಳಿಸಿಕೊಳ್ಳಬೇಕು.

ನಂತರ ಗೋಧಿ ಹಿಟ್ಟನ್ನು ಮೈದಾ ಹಿಟ್ಟಿನ ಜೊತೆ ಸೇರಿಸಿ ಸ್ವಲ್ಪ ಗಟ್ಟಿಯಿರುವಂತೆ ತುಪ್ಪ ಮತ್ತು ನೀರಿನೊಡನೆ ನಾದಿಕೊಳ್ಳಬೇಕು.

ಹುದು ಚಪಾತಿ ಹಿಟ್ಟಿನಷ್ಟು ಗಟ್ಟಿಯಾಗಿರಬೇಕು. ಆಗಲೇ ಹುದುವನ್ನು ಹಿಟ್ಟು ಗಟ್ಟಿಯಾಗಿ ಹಿಡಿದುಕೊಳ್ಳುತ್ತದೆ. ಈಗ, ಹಿಟ್ಟನ್ನು ಕೈಯಲ್ಲಿ ಒಂದು ಉಂಡೆಯಷ್ಟು ತೆಗೆದುಕೊಂಡು ಪೂರಿಯ ಗಾತ್ರದಲ್ಲಿ ತಟ್ಟಿ ಅದರಲ್ಲಿ ಬೆಲ್ಲ ಕೊಬ್ಬರಿ ಹೂರಣವನ್ನು ತುಂಬಿ ಬೆಳ್ಳುಳ್ಳಿ ಕಾಣುವಂತೆ ಮೇಲ್ತುದಿಯನ್ನು ಮುಚ್ಚಬೇಕು.

ಮೋದಕ ವಿಪರೀತ ಸಿಹಿಯಾಗದಂತೆ ಮತ್ತು ಮುಚ್ಚಿದಾಗ ಹಿಟ್ಟು ಹರಿಯದಂತೆ ಮಾಡಲು ಹೂರಣ ಸ್ವಲ್ಪ ಕಡಿಮೆ ಹಾಕುವುದು ಒಳಿತು. ಒಂದೆಡೆ ಎಂಟ್ಹತ್ತು ಮೋದಕಗಳನ್ನು ರೆಡಿಯಾಗಿಟ್ಟುಕೊಂಡು ರಿಫೈನ್ಡ್ ಎಣ್ಣೆಯಲ್ಲಿ ಕಂದುಬಣ್ಣ ಬರುವವರೆಗೆ ಕರಿಯಿರಿ.