ಆಧುನಿಕ ವೈದ್ಯಶಾಸ್ತ್ರದ ವಿಸ್ಮಯಕಾರಿ ಸತ್ಯ!!!

0
1123

ವೈದ್ಯ ವಿಜ್ಞಾನವನ್ನು ಅಭ್ಯಾಸಿಸುವವರು ತಪ್ಪದೇ ಮಾನವ ಅಂಗರಚನಶಾಸ್ತ್ರದ ಅಧ್ಯಯನ ಮಾಡಲೇಬೇಕಾಗುತ್ತದೆ. ಕ್ರಿ.ಶ. ಒಂದನೇ ಶತಮಾನದ ಗ್ರೀಸ್-ರೋಮ್ ರಾಜ್ಯಗಳಲ್ಲಿ ಶವಛೇದನಕ್ಕೆ ಅವಕಾಶವಿರಲಿಲ್ಲ. ಅಂದಿನ ಕಾನೂನು ಶವಛೇದನವನ್ನು ನಿಷೇಧಿಸಿತ್ತು. ಆದರೆ ಗ್ರೀಕ್-ರೋಮನ್ ವೈದ್ಯರು ಶರೀರ ರಚನೆಯ ಅರಿವನ್ನು ಹೆಚ್ಚಿಸಕೊಳ್ಳಲು ಎರಡು ಮೂಲಗಳನ್ನು ಅವಲಂಭಿಸಿದ್ದರು.

ಮೊದಲನೇಯಾದಾಗಿ ಪ್ರಾಣಿಗಳ ಅಂಗರಚನಾ ಅಧ್ಯಯನ ಹಾಗೂ ಅದನ್ನು ಮಾನವ ಶರೀರದೊಡನೆ ಸಮೀಕರಿಸುವುದು. 2ನೇಯದು ಮನುಷ್ಯರಿಗೆ ಗಾಯಗಳಾದಾಗ ಅವರ ಒಳಾಂಗಗಳನ್ನು ಅಧ್ಯಯನ ಮಾಡಿ ಹೆಚ್ಚಿನ ಮಾಹಿತಿಯನ್ನು ತಿಳಿಯುವುದು. ಹೀಗೆ ಮಾಡುವಾಗ ಅನೇಕ ಸಲ ಅವರು ಮಾಹಿತಿಯನ್ನು ತಪ್ಪಾಗಿ ಗ್ರಹಿಸುದುಂಟು. ಆ ತಪ್ಪು ಗ್ರಹಿಕೆಗಳು ಹಾಗೆಯೇ ಅವರ ಶಿಷ್ಯರ ಮೂಲಕ ಮುಂದವರೆಯುತ್ತಿತ್ತು. ಹೀಗೆ ಸುಮಾರು 1500 ವರ್ಷಗಳ ಕಾಲ ವೈದ್ಯಕೀಯ ಚಿಕಿತ್ಸಾ ಲೋಕ, ತಪ್ಪನ್ನೇ ನಿಜವೆಂದು ನಂಬಿ, ಕೊನೆಗೆ ಉತ್ತಮ ವೈದ್ಯಶಾಸ್ತ್ರವನ್ನು ಈ ಲೋಕಕ್ಕೆ ನೀಡಿದೆ.

ಗ್ಯಾಲನ್ ಎಂಬ ವೈದ್ಯ

ಇಂದಿನ ಟರ್ಕಿಯಲ್ಲಿ ಬರ್ಗಮಾನ ಎಂಬ ಸ್ಥಳವಿದೆ. ಹಿಂದೆ ಅದು ಗ್ರೀಕರ ಆಡಳಿತದಲ್ಲಿತ್ತು. ಆಗ ಅದನ್ನು ಪೆರ್ಗಮಂ ಎಂದು ಕರೆಯುತ್ತಿದ್ದರು. ಅಲ್ಲಿ `ಕ್ಲಾಡಿಯಸ್ ಗ್ಯಾಲೆನಿಯಸ್’ ಎಂಬ ವೈದ್ಯನಿದ್ದನು. ಈತನನ್ನು ಇತಿಹಾಸವು ಗ್ಯಾಲನ್ ಎಂಬ ಹೆಸರಿನಿಂದ ಹೆಚ್ಚು ಗುರುತಿಸಿದೆ. ಈತ ತನ್ನ ಕಾಲದ ಪ್ರತಿಭಾವಂತ ವೈದ್ಯನಾಗಿದ್ದನು. ಈತನು ಹಿಪ್ಪೊಕ್ರೇಟಸ್ ವೈದ್ಯ ಪರಂಪರೆಯನ್ನು ಮುಂದುವರೆಸಿದನು. ಗಿಡಮೂಲಕೆಗಳನ್ನು ಬಳಸಿ ತನ್ನದೇ ಆದ ಔಷಧಿಗಳನ್ನು ರೂಪಿಸಿದನು.

ಶಸ್ತ್ರವೈದ್ಯಕೀಯವನ್ನು ಅಭಿವೃದ್ಧಿ ಪಡಿಸಿ, ಅದರಿಂದ ಸಾಧ್ಯವಾದಷ್ಟು ವೈದ್ಯ ಪದ್ಧತಿಯನ್ನು ಪರಿಚಯಿಸಿದನು. ಹಳೆ ಮಾದರಿಯ ವೈದ್ಯಕೀಯ ಉಪಕರಣಗಳನ್ನು ನವೀಕರಿಸಿದನು. ಗ್ರೀಕರು ರಕ್ತನಾಳದಲ್ಲಿ ಗಾಳಿಯಿರುತ್ತದೆ ಎಂದು ನಂಬಿದ್ದರು. ಈತನು ರಕ್ತನಾಳದಲ್ಲಿ ಗಾಳಿಯಲ್ಲ ರಕ್ತ ಹರಿಯುತ್ತದೆ ಎಂಬುದನ್ನು ತೋರಿಸಿಕೊಟ್ಟನು. ಈತ ಒಂದೊಂದು ಅವಿಷ್ಕಾರ ನಿಜಕ್ಕೂ ಮಾನವ ವೈದ್ಯಕೀಯದ ಅರಿವನ್ನು ಹೆಚ್ಚಿಸದನು.

ಗ್ಯಾಲನ್ ಹಲವು ತಪ್ಪುಗಳನ್ನೂ ಮಾಡಿದನು. ಇವನ ದಿನಗಳ ಮಾನವ ದೇಹವನ್ನು ಛೇದಿಸಲು ಅವಕಾಶವಿರಲಿಲ್ಲ. ಹಾಗಾಗಿ ಇವನು `ಬಾರ್ಬರಿ ಕೋತಿ’ಗಳ ದೇಹವನ್ನು ಛೇದಿಸಿ ಅವುಗಳ ದೇಹರಚನೆಯಂತೆಯೇ ಮಾನವ ದೇಹದ ರಚನೆಯೂ ಆಗಿದೆ ಎಂದನು. ಗ್ರೀಕರು ದೇಹದಲ್ಲಿ ನಾಲ್ಕು ರಸಗಳು ಹರಿಯುತ್ತವೆ ಎಂದು ಹೇಳಿದ ಸಿದ್ಧಾಂತವನ್ನೂ ಈತನೂ ನಂಬಿದ್ದನು. ಈ ರಸಗಳು ಏರುಪೇರಾದಾಗ ಅವನ್ನು ಸರಿಪಡಿಸಲು ರಕ್ತನಾಳವನ್ನು ಛೇದಿಸಿ ರಕ್ತವನ್ನು ಹೊರಹರಿಯಬಿಡುತ್ತಿದ್ದನು. ಗಾಯದಲ್ಲಿ ಕೀವು ಸಂಗ್ರವಾದಾಗ ರೋಗಿಯ ಒಳ್ಳೆಯದಕ್ಕೆ ಎಂದು ಭಾವಿಸಿದ್ದನು. ಹೃದಯದಲ್ಲಿರುವ ನಡುತಡಿಕೆಯ ಮೂಲಕ ರಕ್ತ ಎರಡೂ ಕಡೆ ಹರಿಯುತ್ತದೆ ಎಂದು ಹೇಳಿದನು. ಹೀಗೆ ಇವನು ಮಾಡಿದ ಅನೇಕ ತಪ್ಪುಗಳನ್ನು ಪರಮಸತ್ಯವೆಂದು ವೈದ್ಯರು ಭಾವಿಸಿದ್ದರು.

ಹೀಗೆಯೇ 1500 ವರ್ಷಗಳು ಕಳೆದು ಹೋದವು. ಗ್ಯಾಲನ್ ಬರೆದಿರುವುದು ತಪ್ಪು ಎಂದು ವೈದ್ಯರಿಗೆ ಅನಿಸಿದರೂ ಅದನ್ನು ಅವರು ಬಾಯಿ ಬಿಟ್ಟು ಹೇಳುವ ಹಾಗಿರಲಿಲ್ಲ. ಏಕೆಂದರೆ ಗ್ಯಾಲನ್ ಹೇಳಿದ್ದನ್ನು ಅಲ್ಲಗಳೆಯುವವರು ಧರ್ಮದ್ರೋಹಿಗಳು ಎಂದು ಚರ್ಚ್ ಭಾವಿಸುತ್ತಿತ್ತು. ಅವರಿಗೆ ಕಠಿಣ ಶಿಕ್ಷೆಯನ್ನು ಕೊಡುತಿತ್ತು. ಹಾಗಾಗಿ ಯಾವ ವೈದ್ಯನೂ ಗ್ಯಾಲನ್ನನ ಬರಹವನ್ನು ಅಲ್ಲಗೆಯುವ ಧೈರ್ಯ ಮಾಡಲಿಲ್ಲ. ಹೀಗೆ 1500 ವರ್ಷಗಳು ಕತ್ತಲಿಲ್ಲ ಕಳೆದು ಹೋದವು!