ಗಂಗಾನದಿಯ ಬಗ್ಗೆ ನಿಮಗೆ ಗೊತ್ತಿರದ ಚಾರಿತ್ರಿಕ ಹಿನ್ನೆಲೆ ಇಲ್ಲಿದೆ ನೋಡಿ…!

0
905

ಶ್ರೀಹರಿಯ (ವಿಷ್ಣು) ಪಾದದಿಂದ ಉದ್ಭವಿಸಿದ ಈ “ದೇವಗಂಗೆಯು ಭೂಮಿಗಿಳಿದು ಬಂದ ಬಗ್ಗೆ ಬಹು ಸೊಗಸಾದ ಚಾರಿತ್ರಿಕ ಹಿನ್ನೆಲೆಯೊಂದಿದೆ. ಬಹು ಹಿಂದೆ ಇಕ್ಷ್ವಾಕು ವಂಶದ ಸಗರ ಚಕ್ರವರ್ತಿಯು ತನ್ನ ಈರ್ವರೂ ಪತ್ನಿಯರಾದ ವೈದರ್ಭಿ, ಶೈಭ್ಯರೊಂದಿಗೆ ಸಂತಾನ ಪ್ರಾಪ್ತಿಗಾಗಿ ಶಿವನನ್ನು ಕುರಿತು ಹಿಮಾಯಲಯದಲ್ಲಿ ಘೋರ ತಪಸ್ಸನ್ನಾಚರಿಸಲು ಶಿವನು ಅವನ ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷನಾದನು. ಸಗರನ ಸಂತಾನದ ಬಯಕೆಯನ್ನು ತಿಳಿದ ಶಿವನು ಅವನನ್ನು ಕುರಿತು ವೈದರ್ಭಿಯ ಗರ್ಭದಿಂದ ಅರವತ್ತು ಸಹಸ್ರ ಮಕ್ಕಳು ಜನಿಸುವರು. ಶೂರರೂ ಮದಾಂಧರಾದ ಇವರು ಮುಂದೆ ಲೋಕ ಕಂಟಕರಾಗಿ ಮೆರೆದು ಎಲ್ಲರೂ ಏಕ ಕಾಲದಲ್ಲಿ ಮರಣ ಹೊಂದುವರು ಆದರೆ ಶೈಭ್ಯಳ ಗರ್ಭದಿಂದಾಗುವ ಸಂತಾನದಲ್ಲಿ ಭಗೀರಥನೆಂಬವನು ಪುನಃ ನಿನ್ನ ವಂಶಾಭಿವೃದ್ಧಿಯನ್ನು ಮಾಡುವನು ಎಂದು ವರಪ್ರದಾನ ಮಾಡಿ ಮಾಯವಾದನು.

Image result for ganga nadi

ವೈದರ್ಭಿಯ ಗರ್ಭದಿಂದ ಜನಿಸಿದ ಅರವತ್ತು ಸಹಸ್ರ ಮಕ್ಕಳು ಲೋಕ ಕಂಟಕರಾಗಿ ಮೆರೆಯತೊಡಗಿದರು ಇದೇ ಸಂದರ್ಭದಲ್ಲಿ ಸಗರನು ಅಶ್ವÀಮೇಧ ಯಾಗವನ್ನು ಮಾಡಲು ಸಿದ್ಧನಾಗಿ ಆ ಪ್ರಯುಕ್ತ ಕುದುರೆಯನ್ನು ಬಿಟ್ಟನು ಮತ್ತು ಈ ಅರವತ್ತು ಸಹಸ್ರ ಪುತ್ರರಿಗೆ ಆ ಅಶ್ವವನ್ನು ಕಾವಲು ಮಾಡುವಂತೆ ಆಜ್ಞಾಪಿಸಿದ್ದನು. ಆ ಅಶ್ವವು ಸಂಚರಿಸುತ್ತಾ ಸಮುದ್ರ ತೀರಕ್ಕೆ ಬಂದು ಅಲ್ಲಿ ಭೂಗತವಾಯಿತು. ಕುದುರೆಯನ್ನು ಕಾಯುತ್ತಲಿದ್ದ ಸಗರ ಪುತ್ರರು ತಂದೆಗೆ ಈ ಸಂಗತಿಯನ್ನು ತಿಳಿಸಲು ಸಗರನು ಆ ಅಶ್ವವನ್ನು ಪತ್ತೆ ಹಚ್ಚದೆ ನನಗೆ ನಿಮ್ಮ ಮುಖವನ್ನು ತೋರಿಸಕೂಡದೆಂದು ಆಜ್ಞಾಪಿಸಲು ತಂದೆಯ ಆಜ್ಞಾನುಸಾರ ಆ ಕುದುರೆಯನ್ನು ಹುಡುಕುತ್ತಾ ಸಾಗಿರುವಾಗ ಒಂದೆಡೆ ಭೂಮಿಯು ಇಬ್ಭಾಗವಾದುದನ್ನು ಕಂಡು ಅಲ್ಲಿ ಅಗೆಯತೊಡಗಿದರು ಹೀಗೆ ಅಗೆಯುತ್ತಾ ಪಾತಾಳದ ವರೆಗೆ ಅಗೆಯಲು ಪಾತಾಳದಲ್ಲಿ ಸೂರ್ಯನಂತಹ ತೇಜಸ್ವಿಯಾದ ಕಪಿಲ ಮಹರ್ಷಿಯ ಆಶ್ರಮದಲ್ಲಿ ಅಶ್ವವು ತಿರುಗುತ್ತಿರುವುದನ್ನು ಕಂಡು ಆ ಕುದುರೆಯನ್ನು ಹಿಡಿಯಲು ಹೋದರು.

Image result for ganga nadi

ಆಗ ಕುಪಿತರಾದ ತಪೋನಿಷ್ಠರಾದ ಕಪಿಲ ಮಹರ್ಷಿಗಳು ಈ ಸಗರ ಪುತ್ರರ ಮೇಲೆ ತಮ್ಮ ತಪೋತೇಜವನ್ನು ಪ್ರಯೋಗಿಸಲು ಆಗ ಈ ಅರವತ್ತು ಸಹಸ್ರ ಸಗರ ಪುತ್ರರು ಸುಟ್ಟು ಬೂದಿಯಾದರು. ಮುಂದೆ ಸಗರ ವಂಶದ ಕುಡಿಯಾದ ಭಗೀರಥನು ತನ್ನ ತಾಯಿಯಿಂದ ಈ ದಾರುಣವಾದ ಸಮಾಚಾರವನ್ನು ತಿಳಿದು ಬಲು ನೊಂದನು. ಇದಕ್ಕೆ ತಕ್ಕ ಪರಿಹಾರವೇನೆಂದು ತಾಯಿಯನ್ನು ಕೇಳಲು ದೇವಲೋಕದಿಂದ ದೇವಗಂಗೆಯು ಸಾಗಿ ಬಂದು ಭಸ್ಮವಾದ ಬೂದಿಯ ಮೇಲೆ ಹರಿದು ಹೋದರೆ ಅವರಿಗೆ ಸದ್ಗತಿಯಾಗುವುದೆಂದು ತಾಯಿ ಹೇಳಲು ಭಗೀರಥನು ಮೊದಲು ಬ್ರಹ್ಮನನ್ನು ಕುರಿತು ದೀರ್ಘಕಾಲ ತಪಸ್ಸು ಮಾಡಲು ಪ್ರತ್ಯಕ್ಷನಾದ ಬ್ರಹ್ಮನು ದೇವಗಂಗೆಯನ್ನು ಭೂಮಿಗೆ ಕಳುಹಿಸಲು ಒಪ್ಪಿದನು. ಆದರೆ ಈ ದೇವಗಂಗೆಯು ಗಗನ ಮಾರ್ಗದಿಂದ ನೇರವಾಗಿ ಭೂಮಿಗೆ ಧುಮುಕಿದರೆ ಅವಳ ರಭಸಕ್ಕೆ ಭೂಮಿಯು ಇಬ್ಬಾಗವಾಗುವುದು. ಆದ್ದರಿಂದ ಅವಳ ಆ ಪ್ರಚಂಡವಾದ ಶಕ್ತಿಯನ್ನು ತಡೆಯುವುದು ಪರಶಿವನನ್ನುಳಿದು ಬೇರೆ ಯಾರಿಂದಲೂ ಸಾಧ್ಯವಿಲ್ಲವೆಂದನು.

Image result for ganga nadi

ಆಗ ಭಗೀರಥನು ಶಿವನನ್ನು ಕುರಿತು ಘೋರ ತಪಸನ್ನು ಮಾಡಲು ಅವನ ತಪಸ್ಸಿಗೆ ಮೆಚ್ಚಿದ ಶಿವನು ದೇವಗಂಗೆಯನ್ನು ತನ್ನ ಶಿರದಲ್ಲಿ ಧಾರಣ ಮಾಡಲು ಒಪ್ಪಿಕೊಂಡನು. ಆಗ ಭಗೀರಥನು ಬ್ರಹ್ಮದೇವನನ್ನು ಕುರಿತು ದೇವಗಂಗೆಯನ್ನು ಭೂಮಿಗೆ ಕಳುಹಿಸುವಂತೆ ಪ್ರಾರ್ಥಿಸಲು ಆಗ ಗಂಗೆಯು ಗಗನ ಮಾರ್ಗದಿಂದ ಶಿವನ ಮುಡಿಗೆ ಧುಮುಕಿದಳು. ಶಿವನಿಗೂ ಅವಳ ಪ್ರಚಂಡ ಶಕ್ತಿಯ ಅರಿವಾಯಿತು. ಆದ್ದರಿಂದ ಪರಶಿವನು ತನ್ನನ್ನೇ ಕೊಚ್ಚಿಕೊಂಡು ಹೋಗಬಹುದೆಂದು ದೇವಗಂಗೆಯನ್ನು ತನ್ನ ಜಟಾಜೂಟದಿಂದ ಬಂಧಿಸಿ ಕೇವಲ ಒಂದು ಜಲಧಾರೆಯನ್ನು ಮಾತ್ರ ಭೂಮಿಗೆ ಬಿಡಲು ಆ ಜಲಧಾರೆಯು ಭಗೀರಥನನ್ನು ಹಿಂಬಾಲಿಸಿ ಜುಹ್ನು-ಋಷಿಯ ಆಶ್ರಮವನ್ನು ಪ್ರವೇಶ ಮಾಡಲು ಆಗ ಕುಪಿತನಾದ ಋಷಿಯು ಜಲಧಾರೆಯನ್ನು ಒಂದೇ ಆಪೋಶನದಿಂದ ತನ್ನ ಉದರ ಸೇರುವಂತೆ ಮಾಡಿದನು. ಆಗ ಕಂಗಾಲಾದ ಭಗೀರಥನು ಋಷಿಯನ್ನು ಮೊರೆಹೊಕ್ಕು ಬಹು ಕಾಲ ಪ್ರಾರ್ಥಿಸಲು ಋಷಿಯ ಮನವು ಕರಗಿತು ಪುನಃ ಆ ಜಲಧಾರೆಯನ್ನು ತನ್ನ ಕಿವಿಗಳ ಮೂಲಕ ಹೊರಬಿಟ್ಟು ಭಗೀರಥನನ್ನು ಹಿಂಬಾಲಿಸುವಂತೆ ಮಾಡಿದನು.

Related image

ಇದರಿಂದ ದೇವಗಂಗೆಗೆ ಜಾಹ್ನವಿ ಎಂಬ ಹೆಸರು ಬಂದಿರುತ್ತದೆ. ಕೊನೆಗೆ ತನ್ನ ಪೂರ್ವಜರು ಸುಟ್ಟು ಬೂದಿಯಾದ ಸ್ಥಳಕ್ಕೆ ಬರಲು ಆ ಜಲಧಾರೆಯು ಬೂದಿಯ ಮೇಲೆ ಹರಿದು ಹೋಗಲು ಉದ್ಧಾರವಾದ ಸಗರ ಪುತ್ರರಿಗೆ ಸದ್ಗತಿ ಉಂಟಾಯಿತೆಂದು ತಿಳಿದು ಬಂದಿರುತ್ತದೆ. ಭಗೀರಥ ಮಹರ್ಷಿಯಿಂದಾಗಿ ಧರೆಗಿಳಿದು ಹರಿದು ಆತನ ವಂಶೋದ್ಧಾರ ಮಾಡಿದ್ದರಿಂದ ಭಾಗೀರಥಿ ಎನಿಸಿದ್ದಾಳೆ. ಈ ಜಲಧಾರೆಯೇ ಲೋಕ ಪ್ರಸಿದ್ದಿಯಾದ ಗಂಗಾನದಿಯಾಗಿದೆ.