ಕೊರೊನಾ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ ಸೋಂಕಿತರಿಗೆ ಬಳಸಿದ ಹಾಸಿಗೆಗಳನ್ನು ಹಾಸ್ಟೆಲ್’ಗೆ ಬಳಸಲು ಚಿಂತನೆ: ಸರ್ಕಾರದ ನಡೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಕಿಡಿ..

0
163

ಕೊರೋನಾ ವಿಚಾರದಲ್ಲಿ ಸರ್ಕಾರ ಅದೆಷ್ಡು ನಿರ್ಲಕ್ಷ್ಯ ತೋರುತ್ತಿದೆ ಅನ್ನೋದಕ್ಕೆ ನೂರಾರು ಉದಾಹರಣೆಗಳು ಬೆಂಗಳೂರಿನಲ್ಲೇ ನಮಗೆ ಸಿಕ್ಕಿವೆ. ಇಷ್ಟು ಸಾಲದು ಎನ್ನುವಂತೆ ಈಗ ಅದೇ ಕೊರೋನಾ ಸೋಂಕಿತರ ಚಿಕಿತ್ಸೆಗೆ ಬಳಸಿದ್ದ 20 ಸಾವಿರ ಹಾಸಿಗೆಗಳನ್ನು ಹಾಸ್ಟೆಲ್ ವಿದ್ಯಾರ್ಥಿಗಳಿಗೆ ನೀಡಲು ಮುಂದಾಗಿದೆ. ಸರ್ಕಾರದ ಈ ಹೊಣೆಗೇಡಿ ನಿರ್ಧಾರವೀಗ ವಿಪಕ್ಷ ಕಾಂಗ್ರೆಸ್ ಗೆ ಹೋರಾಟದ ಅಸ್ತ್ರವಾಗಿ ಸಿಕ್ಕಿದೆ.

ಈ ಬಗ್ಗೆ ಧ್ವನಿ ಎತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು, ಫೇಸ್’ಬುಕ್’ನಲ್ಲಿ ಮಾತನಾಡಿದ್ದಾರೆ. ಕೋವಿಡ್ ರೋಗಿಗಳು ಬಳಸುವ ಹಾಸಿಗೆಗಳನ್ನು ಸರ್ಕಾರಿ ಹಾಸ್ಟೆಲ್ಗಳಿಗೆ ವಿತರಿಸುವ ಸರ್ಕಾರದ ನಡೆ ಅಮಾನವೀಯ. ಸರ್ಕಾರ ಈ ಹಾಸಿಗೆಗಳನ್ನು ಮಂತ್ರಿಗಳು, ಶಾಸಕರು, ಅಧಿಕಾರಿಗಳಿಗೆ ನೀಡಲಿ ಎಂದು ಡಿಕೆ ಶಿವಕುಮಾರ್ ಅವರು ಕಿಡಿಕಾರಿದ್ದಾರೆ.

ನಾವು ಸರ್ಕಾರದ ಈ ಕ್ರಮದ ವಿರುದ್ಧ ಹೋರಾಟ ರೂಪಿಸುತ್ತೇವೆ. ಪೋಷಕರು, ವಿದ್ಯಾರ್ಥಿಗಳು ಯುವಕರಿಗೂ ಸಹ ಧ್ವನಿ ಎತ್ತಲು ಮನವಿ ಮಾಡುತ್ತೇನೆ ಎಂದು ಯುವಕರಿಗೆ ಡಿಕೆ ಶಿವಕುಮಾರ್ ಅವರು ಕರೆ ನೀಡಿದ್ದಾರೆ.

ಇದೇ ವಿಚಾರವನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ದ ಸಮರ ಸಾರಲು ಮುಂದಾಗಿದೆ.ಈ ಸಲುವಾಗಿ ಇಂದು ಕೆಪಿಸಿಸಿ ಅದ್ಯಕ್ಷರ ನೇತೃತ್ವದಲ್ಲಿ ಸಭೆ ಸೇರಿದ ಕಾಂಗ್ರೆಸ್ ಮುಖಂಡರು. ಈ ವಿಚಾರ ಮುಂದಿಟ್ಟುಕೊಂಡು ಜನರ ಬಳಿ ತೆರಳಿ ಸರ್ಕಾರದ ದುರಾಡಳಿತ ಬಗ್ಗೆ ಅರಿವು ಮೂಡಿಸಲು ಸಿದ್ದವಾಗಿದೆ.

ಸೋಂಕಿನ ತೀವ್ರತೆ ಅರಿವಿದ್ದರೂ ಅದನ್ನ ಮಕ್ಕಳಿಗೆ ಕೊಡಲು ಮುಂದಾಗಿರುವ ಸರ್ಕಾರದ ನಿರ್ಧಾರ ಬೇಜವಾಬ್ದಾರಿಯದ್ದು ಎನ್ನುವುದನ್ನು ತೋರಿಸಲು ನಿರ್ಧರಿಸಿರುವ ಕಾಂಗ್ರೆಸ್ ಲಾಕ್ ಡೌನ್ ಬಳಿಕ ಹೋರಾಟದ ರೂಪುರೇಷೆ ಸಿದ್ದಗೊಳಿಸಿ ಸರ್ಕಾರದ ವಿರುದ್ದ ಬೀದಿಗಿಳಿಯಲಿದೆ.

ಇನ್ನು ಕೋವಿಡ್ ಆರೈಕೆ ಕೇಂದ್ರಗಳಿಗೆ ಬೇಕಾಗಿರುವ ಹಾಸಿಗೆಗಳನ್ನು ಖರೀದಿ ಮಾಡಲು ಮುಂದಾಗಿರುವ ಸರ್ಕಾರ, ಬೆಂಗಳೂರು ಹೊರವಲಯದ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರ ಸೇರಿದಂತೆ ಒಟ್ಟು 20 ಸಾವಿರ ಹಾಸಿಗೆಗಳ ಕೋವಿಡ್ ಆರೈಕೆ ಕೇಂದ್ರಗಳು ಸ್ಥಾಪನೆಯಾಗುತ್ತಿವೆ. BIECರಲ್ಲಿ ಈಗಾಗಲೇ 10,100 ಹಾಸಿಗೆಗಳ ಕೋವಿಡ್ ಆರೈಕೆ ಕೇಂದ್ರ ಸ್ಥಾಪಿಸಲಾಗಿದೆ. ಆದರೆ BIEC ಕೋವಿಡ್ ಆರೈಕೆ ಕೇಂದ್ರದಲ್ಲಿ ಬಳಕೆ ಮಾಡಿರುವ ಹಾಸಿಗೆಗಳನ್ನು ಖರೀದಿ ಬದಲು ಬಾಡಿಗೆ ರೂಪದಲ್ಲಿ ಪಡೆಯಲು ಸರ್ಕಾರ ಈ ಹಿಂದೆ ತೀರ್ಮಾನ ಮಾಡಿತ್ತು. ಆದರೆ ಸಾರ್ವಜನಿಕವಾಗಿ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇದೀಗ ಬಾಡಿಗೆ ಬದಲು ಹಾಸಿಗೆಗಳನ್ನು ಖರೀದಿ ಮಾಡಲು ಸರ್ಕಾರ ಮುಂದಾಗಿದೆ. ಈ ಹಾಸಿಗೆಗಳನ್ನು ಹಾಸ್ಟೆಲ್’ಗಳಲ್ಲಿ ಮರು ಬಳಕೆ ಮಾಡಲು ತೀರ್ಮಾನಿಸಿರುವ ಸರ್ಕಾರದ ನಡೆಗೆ ಈಗ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತ ಪಡಿಸಿದೆ.