ದಲಿತರಿಗೆ ನೀರು ದಕ್ಕಬಾರದೆಂದು ಕುಡಿವ ನೀರಿನ ಬಾವಿಗೆ ವಿಷವಿಕ್ಕಿದ ಸವರ್ಣೀಯರು:

0
1076

ಅಸ್ಪೃಷ್ಯತೆ ಇನ್ನೂ ಈ ದೇಶದಲ್ಲಿ ತಾಂಡವವಾಡುತ್ತಿದೆ ಅನ್ನುವುದಕ್ಕೆ ಸ್ಪಷ್ಟ ನಿದರ್ಶನವೊಂದು ದೊರೆತಿದೆ. ಗ್ರಾಮೀಣ ಭಾರದತದ ಹಲವು ಕಡೆ ಇಂತಹ ಅನಿಷ್ಠ ಪರಂಪರೆ ಇನ್ನೂ ಉಸಿರಾಡುತ್ತಿದೆ ಅನ್ನುವ ಸಾಮಾಜಿಕ ಆತಂಕ ಎದುರಾಗಿದೆ.

ಕರ್ನಾಟಕದ ಗ್ರಾಮವೊಂದರಲ್ಲಿ ದಲಿತರನ್ನು ಅಮಾನವೀಯವಾಗಿ, ನಿಕೃಷ್ಟವಾಗಿ ನಡೆಸಿಕೊಂಡ ಘಟನೆ ನಡೆದಿದೆ. ಕಲ್ಬುರ್ಗಿ ಜಿಲ್ಲೆಯ ಚನ್ನೂರು ಗ್ರಾಮದಲ್ಲಿ ಇಂದಿಗೂ ದಲಿತರು ಮಾನಸಿಕವಾಗಿ ಹಾಗೂ ದೈಹಿಕವಾಗಿ ಮೇಲ್ವರ್ಗದವರಿಂದ ನಿತ್ಯ ಕಿರುಕುಳ ಅನುಭವಿಸುತ್ತಿದ್ದಾರೆ. ಇತ್ತೀಚೆಗಷ್ಟೆ ಇಲ್ಲಿನ ಕುಡಿಯುವ ನೀರಿನ ಭಾವಿಗೆ ವಿಷಪ್ರಾಶನ ಮಾಡಿ ನೀರು ಕಡಿಯದಂತೆ ಮಾಡುವ ಮೂಲಕ ಗ್ರಾಮದ ಸವರ್ಣೀಯರು ಪಾಶವಿಕೃತ್ಯವೆಸಗಿದ್ದಾರೆ.

ಚೆನ್ನೂರು ಗ್ರಾಮದಲ್ಲಿ ಸುಮಾರು ಏಳು ಕುಡಿಯುವ ನೀರಿನ ಬಾವಿಗಳಿವೆ. ಆದರೆ ದಲಿತ ಸಮುದಾಯ ತಮ್ಮ ಅಗತ್ಯಕ್ಕೆ ಬಳಸಿಕೊಳ್ಳುತ್ತಿದ್ದಿದ್ದು, ತಮ್ಮ ಗ್ರಾಮದ ಗಡಿಯಿಂದ ಸುಮಾರು 200 ಕಿಮಿ ದೂರದಲ್ಲಿದ್ದ ಬಾವಿಯನ್ನು. ಸವರ್ಣೀಯರು ಬಳಸಿಕೊಳ್ಳುವ ಬಾವಿಗಳು ಊರಿನ ಮಧ್ಯೆ ಇದ್ದರೆ, ದಲಿತರ ಉಪಭೋಗದ ಬಾವಿ ಮಾತ್ರ ಊರಿಂದ ಹೊರಗಿತ್ತು.


ನಾಲ್ಕು ವರ್ಷದ ಹಿಂದೆ ಬಾವಿ ಇದ್ದ ಸಮೀಪದ ಹೊಲ ದಲಿತನೊಬ್ಬನಿಗೆ ಸೇರಿತ್ತು. ಬಳಿಕ ಆ ಜಾಗವನ್ನು ದಲಿತನಿಂದ ಪಡೆದುಕೊಂಡ ಮೇಲ್ವರ್ಗದ ವ್ಯಕ್ತಿ ಬಾವಿಯ ಒಡೆತನದ ಹಕ್ಕು ಸಾಧಿಸಲು ಮುಂದಾದ. ಗೊಲ್ಲಲಪ್ಪ ಗೌಡ ಕಲ್ಲಪ್ಪ ಗೌಡ ಕೂಕನೂರು ಅನ್ನುವವನೇ ಬಾವಿ ಇದ್ದ ಹೊಲವನ್ನು ದಲಿತನಿಂದ ಪಡೆದುಕೊಂಡವನು. ಜಾಗ ತನ್ನ ಕೈವಾಶವಾದ ದಿನದಿಂದಲೂ ದಲಿತರನ್ನು ಬಾವಿ ನೀರು ಮುಟ್ಟದಂತೆ ಮಾಡಲು ಒಂದಲ್ಲ ಒಂದು ಕಸರತ್ತು ಮಾಡುತ್ತಲೇ ಬಂದಿದ್ದ. ಗ್ರಾಮದ ದಲಿತರಿಗೆ ಕುಡಿಯಲು ಇದ್ದಿದ್ದು ಅದೊಂದೆ ಬಾವಿಯಾಗಿತ್ತು ಹಾಗೂ ಬಾವಿಯಿಂದ ದಲಿತರ ಕೇರಿಗಳಿಗೆ ನೀರು ಸರಬರಾಜಿನ ಕೊಳವೆ ಅಳವಡಿಸಲಾಗಿತ್ತು.

ಊರಿನ ದಲಿತರು ದೂರುವ ಹಾಗೆ ಗೊಲ್ಲಪ್ಪಗೌಡ ಬಾವಿಗೆ ಸತ್ತ ನಾಯಿ, ಬೆಕ್ಕು ಹಾಗೂ ಹಾವುಗಳನ್ನು ಎಸೆದು ದಲಿತರು ನೀರು ಕುಡಿಯದಂತೆ ಮಾಡಿದ್ದ. ಇವೆಲ್ಲವನ್ನೂ ಹೇಗೋ ಸಹಿಸಿಕೊಂಡಿದ್ದ ದಲಿತರಿಗೆ ಆಘಾತ ಕಾದಿತ್ತು. ಆಗಸ್ಟ್ 29ರ ನಂತರದಿಂದ ದಲಿತರ ಕೇರಿಗೆ ಸರಬರಾಜಾಗುತ್ತಿದ್ದ ನೀರು ಸ್ಥಗಿತಗೊಂಡಿತ್ತು.

ದಲಿತರ ಅವಶ್ಯಕತೆಗಳನ್ನು ಪೂರೈಸಲು ಇದ್ದ ಏಕೈಕ ಬಾವಿ ನೀರಿಗೆ ವಿಷ ಸೇರಿತ್ತು. ಅನಾಹುತಕಾರಿ ವಿಷ ಎಂಡೋಸಲ್ಫಾನ್ ಮಿಶ್ರಣಗೊಂಡಿದ್ದ ಬಾವಿ ನೀರನ್ನು ಕುಡಿಯಲಾರದೆ ದಲಿತ ಸಮುದಾಯದವರು ಕಂಗಾಲಾಗಿದ್ದರೆ ಇನ್ನೊಂದೆಡೆ ಗ್ರಾಮದ ನಡುವಿರುವ ಬಾವಿ ನೀರನ್ನು ಮುಟ್ಟಲೂ ಸವರ್ಣೀಯರು ಬಿಡುತ್ತಿಲ್ಲ.

ಈಗ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಗೊಲ್ಲಪ್ಪಗೌಡನ ಮೇಲೆ ಸೆಕ್ಷನ್ 3 ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಹಕ್ಕುಗಳ ರಕ್ಷಣೆ ಅಡಿಯಲ್ಲಿ ಅಟ್ರಾಸಿಟಿ ಪ್ರಕರಣ ದಾಖಲಾಗಿದೆ. ಜೊತೆಗೆ ಗ್ರಾಮದ ದಲಿತರ ಹೇಳಿಕೆಗಳನ್ನು ಪಡೆದುಕೊಂಡಿರುವ ಪೊಲೀಸರು ಗೊಲ್ಲಪ್ಪಗೌಡನ ವಿರುದ್ದ ಕೊಲೆಯತ್ನ ಪ್ರಕರಣ ಸಹ ದಾಖಲಿಸಿದ್ದಾರೆ. ಈ ಹಿಂದೆ ಗೊಲ್ಲಪ್ಪಗೌಡ ಗ್ರಾಮದ ದಲಿತರನ್ನು ಕೊಲ್ಲುವ ಬೆದರಿಕೆ ಹಾಕಿದ್ದ ಹಾಗೂ ತಾನು ಸಾಯುವುದರೊಳಗೆ ಒಬ್ಬನಾದರೂ ದಲಿತನನ್ನು ಸಾಯಿಸುವುದಾಗಿ ಹೇಳಿದ್ದ ಅನ್ನುವ ಸಂಗತಿ ವಿಚಾರಣೆಯ ವೇಳೆ ಬೆಳಕಿಗೆ ಬಂದಿದೆ.

ಕೀಟನಾಶಕ ಎಂಡೋಸಲ್ಫಾನ್ ಪ್ರಾಣಾಂತಿಕ ದ್ರಾವಣವಾಗಿದ್ದು ಈಗಾಗಲೇ ಹಲವು ದೇಶಗಳಲ್ಲಿ ಬ್ಯಾನ್ ಆಗಿದೆ. ಇದರಿಂದಾಗಿ ಶಾಶ್ವತ ಮನೋವೈಕಲ್ಯ, ಬ್ರೈನ್ ಡ್ಯಾಮೇಜ್, ವಿಕಲಚೇತನ ಮಕ್ಕಳ ಜನನ ಮುಂತಾದ ಅನೇಕ ರೀತಿಯ ರೋಗಗಳು ಕಾಣಿಸಿಕೊಳ್ಳುತ್ತವೆ. ಚೆನ್ನೂರು ಗ್ರಾಮದ ದಲಿತರ ಕುಡಿಯುವ ನೀರಿನ ಬಾವಿಗೆ ಎಂಡೋಸಲ್ಫಾನ್ ನಂತಹ ಕಾರ್ಕೋಟಕ ವಿಷ ಮಿಶ್ರಣ ಮಾಡಿರುವ ಘಟನೆ ಈಗ ಸಾಕಷ್ಟು ಖಂಡನೆಗೆ ಒಳಗಾಗಿದೆ.