ಹಿಮಾಲಯ ನೋಡಲು ಎಷ್ಟು ಸುಂದರ ಆದರೆ ಹಿಮಾಲಯ ಅಂದ್ರೆ ಮೃತ್ಯು ಕಂಪನ ಹೇಗೆ ಅಂತೀರಾ ಈ ಸ್ಟೋರಿ ಒಮ್ಮೆ ಓದಿ…!

0
1072

ಹಿಮಾಲಯದ ಚಮತ್ಕಾರವನ್ನು ಹೇಳುತ್ತಾಹೋದರೆ ಅದು ಮುಗಿಯದ ಕಥೆ. ಪ್ರಕೃತಿಯ ಪ್ರಚಂಡ ಪರ್ವತ ಶ್ರೇಣಿಯ ಹಿಮಾಲಯ ಭಾರೀ ಭೂಕಂಪನಕ್ಕೆ ತುತ್ತಾಗಲಿದೆ ಎಂದರೆ ಭಾರತ ದೇಶ ಅಷ್ಟೇ ಅಲ್ಲ, ಇಡೀ ಜಗತ್ತೇ ಭಯ ಪಡುವುದರಲ್ಲಿ ಸಂದೇಹವಿಲ್ಲ. ಅಂಥ ಭಯಾನಕ ಸುದ್ದಿಯೊಂದನ್ನು ಈಗ ವಿಜ್ಞಾನಿಗಳು ಹೊರ ಹಾಕಿದ್ದಾರೆ. ಹಿಮಾಲಯದ ಕೇಂದ್ರ ಭಾಗದಲ್ಲಿ ಒತ್ತಡ ಹೆಚ್ಚುತ್ತಿದ್ದು ಅಲ್ಲಿ ಭಾರೀ ಭಯಾನಕ ಭೂಕಂಪವೊಂದು ಸಂಭವಿಸಲಿದೆ ಎನ್ನುತ್ತಾರೆ ಭೂ ವಿಜ್ಞಾನಿಗಳು.

ಬೆಂಗಳೂರಿನ ಜವಾಹರಲಾಲ ನೆಹರು ಸಂಶೋಧನಾ ಕೇಂದ್ರದ ಹಿರಿಯ ವಿಜ್ಞಾನಿ ಡಾ. ಸಿ.ಪಿ. ರಾಜೇಂದ್ರನ್ ಹೇಳುತ್ತಾರೆ. “700 ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ಎರಡು ಪ್ರಬಲ ಭೂಕಂಪಗಳು ಸಂಭವಿಸಿದ್ದವು. ಅದಾದ ಮೇಲೆ ಅಂಥ ಪ್ರಬಲ ಭೂಕಂಪಗಳು ಸಂಭವಿಸಿಲ್ಲ. ಕಾರಣ ಅಂದಿನಿಂದಲೂ ಪರ್ವತ ಪ್ರದೇಶದಲ್ಲಿನ ಮಣ್ಣು ಮತ್ತು ಬಂಡೆಕಲ್ಲಿನ ಪದರಗಳ ಅಡಿಯಲ್ಲಿ ಒತ್ತಡ ಒಟ್ಟುಗೂಡುತ್ತ ಬರುತ್ತಲಿದೆ. ದೀರ್ಘಕಾಲದ ಈ ಒತ್ತಡ ಈಗ ಸ್ಫೋಟಗೊಳ್ಳುವ ಅಂದರೆ ಸಿಡಿಯುವ ಹಂತಕ್ಕೆ ಬಂದಿದ್ದು ಅದು ಈಗ ಸಿಡಿಯಲೇಬೇಕು.

ಅಂದರೆ ಹಿಮಾಲಯದ ಕೇಂದ್ರಭಾಗದಲ್ಲಿ ಭಾರೀ ಭೂಕಂಪ ಸಂಭವಿಸುವ ದಿನಗಣನೆ ಆರಂಭವಾಗಿದೆ ಎಂದೇ ಹೇಳಬೇಕಾಗಿದೆ.’’
ಈ ವಿಜ್ಞಾನಿಗಳು ಹಿಮಾಲಯದ ಕೇಂದ್ರಭಾಗ ರಾಮನಗರ ಬಳಿ ಉತ್ಖನನ ನಡೆಸಿದ್ದರು. ಅಲ್ಲಿ ಅವರಿಗೆ ಅಲ್ಲಿಯ ಭೂವಲಯ ಅಪಾರ ಒತ್ತಡಕ್ಕೊಳಗಾಗಿರುವುದು ಕಂಡುಬಂದು ಅಲ್ಲಿ ಕೆಲವು ಭಾಗಗಳನ್ನು ಪರಿಶೀಲಿಸಿದರು. ನಂತರ ನಾನಾ ತಂತ್ರಗಳನ್ನು ಬಳಸಿ ಆ ಪ್ರದೇಶದಲ್ಲಿ ಹಿಂದೆ ಭೂಕಂಪನಗಳೇನಾದರೂ ಸಂಭವಿಸಿವೆಯೇ ಎಂದು ಪರಿಶೀಲಿಸಿದರು. ಆಗ ಅವರಿಗೆ 13 ಮತ್ತು 14ನೇ ಶತಮಾನದಲ್ಲಿ ಎರಡು ಭಾರೀ ಭೂಕಂಪನಗಳು ಸಂಭವಿಸಿದ್ದು ಖಾತ್ರಿ ಆಯಿತು. ಈ ಸಫಲ ಸಂಶೋಧನೆಯ ಹಿನ್ನೆಲೆಯಲ್ಲಿ ಹಿಮಾಲಯದಲ್ಲಿ ಭೂಕಂಪನ ಸಂಭವಿಸುವುದು ಸತ್ಯ ಎಂದು ಹೇಳುವ ವಿಜ್ಞಾನಿಗಳು ದೇಶದ ಜನಕ್ಕೆ ಹೀಗೆ ಸಂದೇಶ ನೀಡಿದ್ದಾರೆ-“ ಹಿಮಾಲಯದ ತಪ್ಪಲಿನಲ್ಲಿರುವ ಎಲ್ಲಾ ಗ್ರಾಮ, ನಗರ-ಪಟ್ಟಣಗಳು ಭೂಕಂಪ ಎದುರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಶತಮಾನಗಳ ಹಿಂದೆ ಸಂಭವಿಸಿದ ಭೂಕಂಪನಗಳ ವಿಕೋಪಕ್ಕಿಂತ ಹೆಚ್ಚಿನ ಸಾವು, ನೋವು, ಆಸ್ತಿ ಹಾಳಾಗುವ ಸಾಧ್ಯತೆ ಇದೆ. ಸಾರ್ವಜನಿಕರ ತಿಳುವಳಿಕೆಗಾಗಿ ತುರ್ತು ಪ್ರಕಟಣೆ ಹೊರಡಿಸುವ ಅವಶ್ಯಕತೆ ಇದೆ.’’

ಗಂಡಾಂತರಕ್ಕೆ ಬೇಕಾಗುವ ಎಲ್ಲ ಪ್ರಕ್ರಿಯೆಗಳು ಅಲ್ಲಿ ತೀವ್ರವಾಗಿ ಹುಟ್ಟು ಪಡೆಯುತ್ತಲಿವೆ ಎನ್ನುತ್ತಾರೆ ವಿಜ್ಞಾನಿಗಳು. 25 ಕೋಟಿ ವರ್ಷಗಳ ಹಿಂದೆ ಒಂದಕ್ಕೊಂದು ಡಿಕ್ಕಿ ಹೊಡೆದು, ದೂರ ಸರಿಯದೇ ಪರಸ್ಪರ ಅಪ್ಪಿಕೊಂಡು ಇದ್ದ ಇಂಡೋ-ಯುರೇಷಿಯನ್ ಪ್ಲೇಟು(ಭೂಭಾಗಗಳು)ಗಳು ಈಗ ಮತ್ತೆ ದೂರ ಸರಿಯುತ್ತಲಿವೆ. ಹಾಗೆಯೇ ಮಧ್ಯ ಭಾರತ ಮತ್ತು ಟಿಬೆಟ್ ದೇಶಗಳ ಭೂಭಾಗಗಳು ವರ್ಷಕ್ಕೆ 2 ಸೆಂಟಿಮೀಟರ್‍ಗಳಷ್ಟು ಸಮೀಪಕ್ಕೆ ಸರಿಯುತ್ತಲಿವೆ. ಅಂದರೆ ಹಿಂದಿನಂತೆಯೇ ಅವು ಅತಿವೇಗದಲ್ಲಿ ಡಿಕ್ಕಿ ಹೊಡೆದು ಮತ್ತೆ ಸೇರಿಕೊಳ್ಳಲಿವೆ. ಆಂದಿನ ಆ ಢಿಕ್ಕಿಗೆ ಹಿಮಾಲಯ ಉದ್ಭವಿಸಿದಂತೆ ಇಂದಿನ ಈ ಢಿಕ್ಕಿಗೆ ಹೊಸದೇನೋ ಜನ್ಮ ತಳೆಯಬಹುದು. ಇಲ್ಲವೆ ಅಪಾರ ನಷ್ಟದಿಂದ ಹಿಮಾಲಯ ತನ್ನ ಮೊದಲಿನ ವೈಭವ ಕಳೆದುಕೊಳ್ಳಬಹುದು. ಇನ್ನೊಂದು ವೈಜ್ಞಾನಿಕ ವರದಿಯ ಪ್ರಕಾರ ಭಾರತದ ಭೂಫಲಕಗಳು ವರ್ಷಕ್ಕೆ 5 ಸೆಂಟಿಮೀಟರ್‍ನಂತೆ ಈಶಾನ್ಯದತ್ತ ಚಲಿಸಿ, ಹಿಮಾಲಯದ ಬಳಿ ಇರುವ ಯುರೇಷ್ಯಾ ಭೂಫಲಕಕ್ಕೆ ಗುದ್ದುತ್ತಲಿವೆ. ಕಾರಣ ಹಿಮಾಲಯದ ತಪ್ಪಲಲ್ಲಿ ಒತ್ತಡ ಹೆಚ್ಚುತ್ತಲಿದೆ. ನಿತ್ಯ ಪರಸ್ಪರ ಢಿಕ್ಕಿಯ ಪ್ರಕ್ರಿಯೆ ನಡೆಯುತ್ತಿರುವುದರಿಂದ ಭಾರತದ ಭೂಫಲಕಗಳಲ್ಲಿ ಬಿರುಕುಗಳು ಕಾಣಿಸಿಕೊಳ್ಳತ್ತಲಿವೆ. ತೀವ್ರ ಒತ್ತಡದಿಂದ ಭೂಖಂಡಗಳ ಪ್ಲೇಟುಗಳು ಒಂದರ ಮೇಲೋಂದು ಜಾರಿ ಸ್ಥಾನ ಪಲ್ಲಟಗೊಂಡಾಗ ಭೂಮಿ ಕಂಪಿಸಿ ಅದರ ಕಂಪನದ ಅಲೆಗಳು ಎಲ್ಲಾ ದಿಕ್ಕುಗಳಿಗೆ ಪಸರಿಸಿ ಅಪಾರ ಹಾನಿ ಉಂಟುಮಾಡುತ್ತವೆ.