ದೇವಾನುದೇವತೆಗಳ ಬೀಡು ಹಿಮಾಲಯದ ಗೂಡು!!!

0
1737

ದೇವಾನುದೇವತೆಗಳ ಬೀಡು
ಹಿಮಾಲಯದ ತಪ್ಪಲು ದೇವಾನುದೇವತೆಗಳ ಬೀಡು. ಹಿಮಾಲಯದ ಅಡಿಯಲ್ಲಿ ಅರಳಿಕೊಂಡಿರುವ ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳು ಹಿಮಗಿರಿಯ ದೇವ ಶಿವನ ಕೃಪಾಪೋಷಿತ ರಾಜ್ಯಗಳು. ಭಗೀರಥನ ತಪಸ್ಸಿಗೆ ಒಲಿದು ಬಂದ ತನ್ನ ಮನದನ್ನೆ ಗಂಗೆಯೊಂದಿಗೆ ಇರಲೆಂದೇ ಶಿವನು ಇಲ್ಲಿ ಕೇದಾರನಾಥನಾಗಿ ಭಕ್ತರ ರಕ್ಷಕನಾಗಿ ನಿಂತಿದ್ದಾನೆ. ಬದರೀನಾಥನಾಗಿ ನಾರಾಯಣನೂ ಇದ್ದಾನೆ. ಹೀಗಾಗಿ ಹಿಮಾಲಯದ ತಪ್ಪಲಲ್ಲಿರುವ ಉತ್ತರಾಖಂಡ ಭಕ್ತರ ಸ್ವರ್ಗವಾಗಿ ಪರಿಣಮಿಸಿದೆ. ಜೊತೆಗೆ ಇದು ಪ್ರಾಕೃತಿಕ ಸೌಂದರ್ಯದ ಮೂಲ ಆವಾಸಸ್ಥಾನವಾಗಿದ್ದು ಪ್ರತಿವರ್ಷ ಲಕ್ಷ ಲಕ್ಷ ಜನ ಭಕ್ತರು-ಪ್ರವಾಸಿಗರು ಭೇಟಿ ನೀಡುತ್ತಾರೆ.
ಗಂಗೋತ್ರಿ, ಯಮುನೋತ್ರಿ, ಕೇದಾರನಾಥ ಮತ್ತು ಬದರೀನಾಥ-ಇವು ನಾಲ್ಕೂ ಹಿಮಾಲಯದ ತಪ್ಪಲಲ್ಲಿರುವ ನಿಸರ್ಗದ ವಿಶಿಷ್ಟ ಚತುರ್ಧಾಮಗಳು. ಇವು ಜಗತ್ತಿನ ಆಕರ್ಷಣೀಯ ಹಾಗೂ ಶ್ರದ್ಧಾ-ಭಕ್ತಿಯ ಕೇಂದ್ರಗಳು. “ಗಂಗೋತ್ರಿ”ಯು ಭಾಗೀರಥಿ ನದಿ ದಂಡೆಯ ಮೇಲೆ ನೆಲೆಗೊಂಡಿದ್ದು ಉತ್ತರಕಾಶಿ ಜಿಲ್ಲೆಯಲ್ಲಿದೆ. ಗಂಗಾಮಾತೆ ಆವಿರ್ಭವಿಸಿದ ತಾಣವೇ ಗಂಗೋತ್ರಿ. ಭಗೀರಥನ 60,000 ಸಗರಪುತ್ರರನ್ನು ಉದ್ಧರಿಸಲು ಶಿವನ ಜಡೆಯಿಂದಿಳಿದು ಭೂಮಿಗೆ ಬಂದ ಗಂಗಾದೇವಿ ಭಾಗೀರಥಿಯಾಗಿ ಈಗಲೂ ಮನುಕುಲವನ್ನು ಉದ್ಧರಿಸುತ್ತಿದ್ದಾಳೆ. “ಯಮುನೋತ್ರಿ” ಉತ್ತರಕಾಶಿಯಲ್ಲಿ ನೆಲೆಗೊಂಡಿರುವ ಇನ್ನೊಂದು ಪವಿತ್ರ ಹಾಗೂ ಪ್ರವಾಸಿಗರ ಆಕರ್ಷಣೀಯ ಸ್ಥಾನ. “ಬದರೀನಾಥ” ಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯ ಪವಿತ್ರ ನಗರ.

ಬದರೀನಾಥ ದೇವಸ್ಥಾನದ ಹೆಸರನ್ನೇ ಪಡೆದಿರುವ ಬದರೀನಾಥ ನಗರ ಚತುರ್ಧಾಮಗಳಲ್ಲಿ ಒಂದು. ಕ್ರಿ.ಶ. 9ನೇ ಶತಮಾನದಲ್ಲಿ ಶ್ರೀ ಆದಿಶಂಕರಾಚಾರ್ಯರು ಇದನ್ನು ಒಂದು ಪ್ರಮುಖ ಯಾತ್ರಾಸ್ಥಳವಾಗಿ ಮಾಡಿದರು. ಒಂದು ಅಂದಾಜಿನ ಪ್ರಕಾರ ಇಲ್ಲಿ ಪ್ರತಿವರ್ಷ ಆರು ಲಕ್ಷಕ್ಕೂ ಹೆಚ್ಚು ಭಕ್ತರು-ಪ್ರವಾಸಿಗರು ಭೇಟಿ ನೀಡುತ್ತಾರೆ. “ಕೇದಾರನಾಥ” ರುದ್ರಪ್ರಯಾಗ ಜಿಲ್ಲೆಯ ಅತ್ಯಂತ ಪವಿತ್ರ ಹಾಗೂ ಜನಾಕರ್ಷಣೆಯ ಕೇಂದ್ರ. ಶಿವ ಇಲ್ಲಿಯ ಅಧಿದೇವರು. ಕೇದಾರನಾಥ ಹಿಂದೂಗಳ ಪವಿತ್ರ ಕ್ಷೇತ್ರವಾಗಿದ್ದು, “ಕೈಲಾಸದ ಪ್ರವೇಶದ್ವಾರ” ಎಂದೇ ಪ್ರಸಿದ್ದಿ ಪಡೆದಿದೆ. ಕೇದಾರನಾಥನಿಂದ 14 ಕಿ.ಮೀ. ಗಳ ಅಂತರದಲ್ಲಿ ಬಿಸಿನೀರಿನ “ಗೌರಿಕುಂಡ” ವಿದೆ. ಗೌರಿಮಾತೆ-ಪಾರ್ವತಿಯು ಇದೇ ಕುಂಡದಲ್ಲಿ ಮಣ್ಣಿನಿಂದ ಗಣಪತಿಯನ್ನು ನಿರ್ಮಿಸಿ ಜೀವಕೊಟ್ಟಳು ಎಂಬ ಪ್ರತೀತಿ ಇದ್ದು ಇಲ್ಲೊಂದು ಗೌರಿ ತಾಯಿಯ ಗುಡಿ ಇದೆ. ಕೇದಾರನಾಥನ ದರ್ಶನ ಪಡೆಯಲು ಗೌರಿಕುಂಡದಿಂದಲೇ ಕಾಲ್ನಡಿಗೆಯಿಂದ ಹೋಗಬೇಕು. ಪಲ್ಲಕ್ಕಿ, ಕುದುರೆಗಳ ಮೇಲೂ ಹೋಗಬಹುದು.