ಹಿಂದಿ ಹೇರಿಕೆಯ ವಿರುದ್ಧ ಕೂಗನ್ನು ನಿರ್ಲಕ್ಷಿಸಿ, ಇನ್ನೂ ಹೆಚ್ಚು ಹಿಂದಿ ಬಳಕೆ ಮಾಡುವಂತೆ ಸರ್ಕಾರಿ ಹಾಗೂ ಬ್ಯಾಂಕ್ ನೌಕರರಿಗೆ ಕರೆ ನೀಡಿದ ಅಮಿತ್ ಶಾ!!

0
162

ಹಿಂದಿ ದಿವಸದ ಹಿನ್ನಲೆಯಲ್ಲಿ ಶುಭಾಶಯ ಕೋರಿದ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಕೇಂದ್ರ ಸರ್ಕಾರ ತರಲು ಹೊರಟಿರುವ ನೂತನ ಶಿಕ್ಷಣ ನೀತಿಯನ್ನು ಸ್ವಾಗತಿಸಿದ್ದಾರೆ. ಈ ನೀತಿಯಿಂದಾಗಿ ಭಾರತದ ಇತರ ಭಾಷೆಯೊಂದಿಗೆ ಹಿಂದಿಯೂ ಬೆಳವಣಿಗೆ ಹೊಂದಲಿದೆ. ಭಾರತದ ಸಂಸ್ಕೃತಿ, ನಾಗರಿಕತೆ ಮತ್ತು ಮೌಲ್ಯಾಧಾರಿತ ವ್ಯವಸ್ಥೆಗಳು ಹಿಂದಿ ಭಾಷೆಯ ಕಾರಣದಿಂದಾಗಿ ಜೀವಂತವಾಗಿ ಸಂರಕ್ಷಿತಗೊಂಡಿದೆ. ಹೀಗಾಗಿ ದೇಶದ ಯುವಜನರು ಮತ್ತು ಅಧಿಕಾರಿಗಳು ಹೆಚ್ಚಾಗಿ ಹಿಂದಿ ಭಾಷೆಯನ್ನು ಬಳಸಬೇಕೆಂದು ಎಂದು ಅಮಿತ್ ಶಾ ಒತ್ತಾಯಿಸಿದ್ದಾರೆ.

ಈ ಕುರಿತಂತೆ ಸರಣಿ ಟ್ವೀಟ್ ಮಾಡಿರುವ ಶಾ, ಇಂದು, ಹಿಂದಿ ದಿನದಂದು, ಅದರ ಸಬಲೀಕರಣಕ್ಕೆ ಸಹಕರಿಸಿದ ಎಲ್ಲ ಗಣ್ಯರಿಗೆ ನಾನು ನಮಸ್ಕರಿಸುತ್ತೇನೆ ಮತ್ತು ತಮ್ಮ ಮಾತೃಭಾಷೆಯೊಂದಿಗೆ ಹಿಂದಿಯನ್ನು ಹೆಚ್ಚು ಹೆಚ್ಚು ಬಳಸುವ ಮೂಲಕ ಹಿಂದಿ ಭಾಷೆಯ ರಕ್ಷಣೆ ಮತ್ತು ಉತ್ತೇಜನಕ್ಕೆ ಹೆಚ್ಚಿನ ಕೊಡುಗೆ ನೀಡುವಂತೆ ದೇಶವಾಸಿಗಳಿಗೆ ಕರೆ ನೀಡುತ್ತೇನೆ. ಪ್ರತಿಜ್ಞೆ ತೆಗೆದುಕೊಳ್ಳಿ ಎಂದು ಹಿಂದಿ ದಿವಸ್ ಆಚರಣೆಯ ಶುಭಾಶಯಗಳು ಎಂದಿದ್ದಾರೆ.

ಒಂದು ದೇಶವನ್ನು ಅದರ ಗಡಿ ಮತ್ತು ಭೌಗೋಳಿಕತೆಯಿಂದ ಗುರುತಿಸಲಾಗುತ್ತದೆ, ಆದರೆ ಅದರ ದೊಡ್ಡ ಗುರುತು ಅದರ ಭಾಷೆ. ಭಾರತದ ವಿವಿಧ ಭಾಷೆಗಳು ಮತ್ತು ಉಪಭಾಷೆಗಳು ಅದರ ಶಕ್ತಿ ಮತ್ತು ಅದರ ಏಕತೆಯ ಸಂಕೇತವಾಗಿದೆ. ಸಾಂಸ್ಕೃತಿಕ ಮತ್ತು ಭಾಷಾ ವೈವಿಧ್ಯತೆಯಿಂದ ತುಂಬಿರುವ ಭಾರತದಲ್ಲಿ, ಹಿಂದಿ ಶತಮಾನಗಳಿಂದ ಇಡೀ ರಾಷ್ಟ್ರವನ್ನು ಒಂದುಗೂಡಿಸುವ ಕೆಲಸ ಮಾಡುತ್ತಿದೆ ಎಂದಿದ್ದಾರೆ.

ಸಂವಿಧಾನದ ಆರ್ಟಿಕಲ್ 351ರ ಪ್ರಕಾರ, ಹಿಂದಿ ಭಾಷೆಯ ಸಮೃದ್ಧಿಯನ್ನು ಇತರೆ ಪ್ರಾದೇಶಿಕ ಭಾಷೆಗಳು ಖಚಿತಪಡಿಸಿಕೊಳ್ಳಬೇಕು ಎಂದಿರುವ ಅಮಿತ್ ಶಾ, ಅಗತ್ಯವಿರುವಲ್ಲೆಲ್ಲಾ ಸಂಸ್ಕೃತ ಮತ್ತು ಇತರೆ ಭಾಷೆಗಳಿಂದ ಪದಗಳನ್ನು ಸ್ವೀಕರಿಸುವ ಮೂಲಕ ಶಬ್ದಕೊಶವನ್ನು ಸುಧಾರಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ ಸಾಂವಿಧಾನಿಕ ಜವಾಬ್ದಾರಿಯನ್ನು ಖಾತರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರಿ ಅಧಿಕೃತ ಕೆಲಸಗಳನ್ನು ಮೊದಲು ಹಿಂದಿಯಲ್ಲಿ ಮಾಡಿ ನಂತರ ಇತರೆ ಭಾಷೆಗಳಿಗೆ ಅನುವಾದಿಸುವುದು ಮುಖ್ಯವಾಗಿದೆ ಎಂದು ಅವರು ಹೇಳಿದ್ದಾರೆ.

ಹಿಂದಿ ಭಾರತೀಯ ಸಂಸ್ಕೃತಿಯ ಒಡೆಯಲಾಗದ ಭಾಗವಾಗಿದೆ. ಸ್ವಾತಂತ್ರ್ಯ ಹೋರಾಟದ ನಂತರ ಇದು ರಾಷ್ಟ್ರೀಯ ಏಕತೆ ಮತ್ತು ಗುರುತಿನ ಪರಿಣಾಮಕಾರಿ ಮತ್ತು ಶಕ್ತಿಯುತ ಮಾಧ್ಯಮವಾಗಿದೆ. ಹಿಂದಿಯ ಬಹುದೊಡ್ಡ ಶಕ್ತಿ ಅದರ ವೈಜ್ಞಾನಿಕತೆ, ಸ್ವಂತಿಕೆ ಮತ್ತು ಸರಳತೆ ಎಂದು ಟ್ವೀಟ್ ಮಾಡಿದ್ದಾರೆ. ಮೋದಿ ಸರ್ಕಾರದ ಹೊಸ ಶಿಕ್ಷಣ ನೀತಿಯು ಹಿಂದಿ ಮತ್ತು ಇತರ ಭಾರತೀಯ ಭಾಷೆಗಳ ಸಮಾನಾಂತರ ಅಭಿವೃದ್ಧಿಗೆ ಕಾರಣವಾಗಲಿದೆ ಎಂದಿರುವ ಶಾ, ಯುವ ಪೀಳಿಗೆಯನ್ನು ಹಿಂದಿ ಕಡೆಗೆ ಆಕರ್ಷಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.