ಹಳೆ ನೋಟು 5,000 ರೂ. ಮೀರಿದ ಪ್ರಮಾಣದಲ್ಲಿ ಒಂದು ಬಾರಿ ಮಾತ್ರ ಬ್ಯಾಂಕ್ ಖಾತೆಗೆ ಜಮೆ

0
720

ಹೊಸದಿಲ್ಲಿ : ನಿಷೇಧ ಮಾಡಿರುವ ಭಾರೀ ಪ್ರಮಾಣದ ನೋಟುಗಳನ್ನು ಬ್ಯಾಂಕ್ ಖಾತೆ ಬಳಸಿಕೊಂಡು ಹೊಸ ನೋಟುಗಳಿಗೆ ಪರಿವರ್ತಿಸುವ ವ್ಯಾಪಕ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಸರಕಾರ ಈ ಹೊಸ ನಿರ್ಬಂಧವನ್ನು ವಿಧಿಸಿದೆ ಎಂದು ಸರಕಾರ ಇಂದು ತಿಳಿಸಿದೆ.

ನಿಷೇಧ ಮಾಡಿರುವ  500 ರೂ. ಮತ್ತು 1,000 ರೂ. ನೋಟುಗಳನ್ನು ಐದು ಸಾವಿರ ರೂ. ಮೀರಿದ ಪ್ರಮಾಣದಲ್ಲಿ, ಡಿ.30ರ ಒಳಗೆ ಈಗಿನ್ನು ಒಂದು ಬಾರಿಗೆ ಮಾತ್ರವೇ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಬಹುದೆಂದು ಸರಕಾರ ಇಂದು ಹೇಳಿದೆ.

ಡಿ.30ರ ವರೆಗೆ ಇನ್ನು ಭಾರೀ ದೊಡ್ಡ ಪ್ರಮಾಣದಲ್ಲಿ ರದ್ದಾದ ನೋಟುಗಳನ್ನು ಹಲವು ಬಾರಿ ಬ್ಯಾಂಕ್ ಖಾತೆಗಳಿಗೆ ಇನ್ನು ಜಮೆ ಮಾಡುವಂತಿಲ್ಲ. ಆದರೆ 5,000 ರೂ. ಮೊತ್ತದ ವರೆಗಿನ ರದ್ದಾದ ನೋಟುಗಳನ್ನು ಬ್ಯಾಂಕ್ ಖಾತೆಗೆ ಜಮೆ ಮಾಡುವುದಕ್ಕೆ ಯಾವುದೇ ನಿರ್ಬಂಧವಿಲ್ಲ ಎಂದು ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಯೋರ್ವರು ಮಾದ್ಯಮಕ್ಕೆ ತಿಳಿಸಿದ್ದಾರೆ.

ಕಾಳಧನವನ್ನು ಘೋಷಿಸಿಕೊಳ್ಳುವುದಕ್ಕೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಕಲ್ಪಿಸಲಾಗಿರುವ ಹೊಸ ಅವಕಾಶದಡಿ ಯಾವುದೇ ಪ್ರಮಾಣದ ಕಾಳಧನವನ್ನು ಖಾತೆಗೆ ಜಮೆ ಮಾಡುವುದಕ್ಕೆ ಯಾವುದೇ ನಿರ್ಬಂಧವಿಲ್ಲ. ಈ ಕುರಿತ ಹೊಸ ನಿಯಮಗಳನ್ನು ಹಣಕಾಸು ಸಚಿವಾಲಯವು ಡಿ.17ರಂದು ಪ್ರಕಟಿಸಿದ್ದು ಆ ಪ್ರಕಾರ ಕಪ್ಪು ಹಣವನ್ನು ಖಾತೆಗೆ ಜಮೆ ಮಾಡಬಹುದಾಗಿದೆ.

5,000 ರೂ. ಮೀರಿ ಖಾತೆಗೆ ಹಣ ಜಮೆ ಮಾಡುವುದಕ್ಕೆ ಸಂಬಂಧಿಸಿದ ನಿಯಮಗಳನ್ನು ಇಂದು ಸಂಜೆಯ ವೇಳೆಗೆ ಆರ್ಬಿಐ ಪ್ರಕಟಿಸಲಿದೆ. ಈ ಹೊಸ ನಿಯಮಗಳು ನಕಲಿ ನೋಟುಗಳ ಮೇಲಿನ ನಿರ್ಬಂಧಗಳನ್ನು ಹೆಚ್ಚಿಸಲಿದೆ.