ಮನೆ ಸ್ವಚ್ಚವಿದ್ದರೆ ಅದುವೇ ಅರಮನೆ!!

0
803

ಮನೆಯೇ ಮಂತ್ರಾಲಯ, ಮನಸ್ಸೇ ದೇವಾಲಯ ಎಂಬಂತೆ ನಾವು ವಾಸಿಸುವ ಮನೆ ಸದಾ ಸ್ವಚ್ಚವಾಗಿರಬೇಕು. ಮನೆ ಪುಟ್ಟದಿರಲಿ, ದೊಡ್ಡದಾಗಿರಲಿ ಅದು ಮುಖ್ಯವಲ್ಲ. ಇರುವ ವ್ಯವಸ್ಥೆಯಲ್ಲಿ ಮನೆಯನ್ನು ಕೊಳೆಯಿಲ್ಲದೆ ಚೊಕ್ಕಟವಾಗಿ, ಶುಚಿಯಾಗಿ, ಸ್ವಚ್ಛವಾಗಿ ಇರಿಸಿಕೊಳ್ಳಬೇಕಾದದ್ದು ಬಹುಮುಖ್ಯ. ಮನೆಯೊಳಗಿನ ಅಂದ-ಚೆಂದ, ಶುಭ್ರತೆ ಆ ಮನೆಯಲ್ಲಿ ವಾಸಿಸುವವರ ಅಭಿರುಚಿ, ಹವ್ಯಾಸಗಳಿಗೆ ಕನ್ನಡಿ ಹಿಡಿಯುವುದಂತೆ. ಹಾಗಾಗಿಯೇ ನಮ್ಮ ಹಿರಿಯರು `ವ್ಯವಸ್ಥೆಯೇ ಮನೆಯ ಸೊಬಗು’ ಎಂದರು. ಹಿಂದಿನ ದಿನಗಳಲ್ಲಿ ಮನೆಯಲ್ಲಿಯೇ ಇರುತ್ತಿದ್ದ ಗೃಹಿಣಿಯರು ಮನೆಗೆಲಸದ ನಂತರ ಬಿಡುವಿನ ವೇಳೆಯಲ್ಲಿ ಮನೆಯ ವಸ್ತುಗಳ ಶುಚಿತ್ವಕ್ಕೆ ಗಮನ ನೀಡುತ್ತಿದ್ದರು. ಕೊಳೆಯಿಲ್ಲದಂತೆ ಮನೆಯನ್ನು ಗುಡಿಸಿ ಒರೆಸಿ ಚೊಕ್ಕಟವಾಗಿಡುತ್ತಿದ್ದರು. ಈ ದಿನಗಳು ಹಿಂದಿನಂತಿಲ್ಲ.

ಆಧುನಿಕ ಮಹಿಳೆಗೆ ಮನೆಯ ಒಳಗೂ-ಹೊರಗೂ ದುಡಿಯಬೇಕಾದ ಅನಿವಾರ್ಯತೆ ಮನೆಯ ವ್ಯವಸ್ಥೆಯ ಬಗ್ಗೆ ಸಂಪೂರ್ಣವಾಗಿ ಗಮನಹರಿಸಲು ಸಮಯ ಸಹಕರಿಸುತ್ತಿಲ್ಲ. ಹಾಗಂತ ಮನೆಯಲ್ಲಿನ ಧೂಳು-ಕಸ, ತೆಗೆಯದೆ ಹಾಗೇ ಬಿಡಲು ಆಗುತ್ತದೆಯೇ? ಖಂಡಿತ ಇಲ್ಲ. ಇರುವ ಸಮಯದಲ್ಲೇ ಮಾಡಬೇಕಾದ ಕೆಲಸಗಳ ಬಗ್ಗೆ ಮೊದಲೇ ಪಟ್ಟಿಮಾಡಿಕೊಂಡು ಅದರಂತೆ ಸಾಗಿದರೆ ಮನೆಯಲ್ಲಿ ವ್ಯವಸ್ಥೆ ಹೊಂದಬಹುದು. ಮನೆಯ ಅಂದ
ಚೆಂದಕ್ಕೂ ಆದ್ಯತೆ ನೀಡಬಹುದು.

ನಿತ್ಯ ಪಾಲಿಸಬೇಕಾದ ಕ್ರಮಗಳು

• ಮೊದಲಿಗೆ ಮನೆಯ ಕೊಠಡಿಗಳು ಕಸಮುಕ್ತವಾಗಿರಲಿ. ಕಸ ತೆಗೆಯುವಾಗ, ಗುಡಿಸುವಾಗ ಗಮನ ಆ ಕಡೆ ಇದ್ದಲ್ಲಿ ಮೂಲೆಗಳಲ್ಲಿ ಕಸ ನಿಲ್ಲದಂತೆ ಸ್ವಚ್ಛ ಮಾಡಬಹುದು.
• ಅಡುಗೆ ಮನೆಯ ಕಟ್ಟೆ ಹಾಗೂ ಪಾತ್ರೆ ತೊಳೆಯುವ ಸಿಂಕ್ ಸದಾ ಸ್ವಚ್ಛವಾಗಿರಲಿ. ಸಿಂಕ್‍ನಲ್ಲಿ ಯಾವುದೇ ಕಾರಣಕ್ಕೂ ಮುಸುರೆ ಪಾತ್ರೆಗಳು ಶೇಖರಣೆಯಾಗದಂತೆ ನೋಡಿಕೊಳ್ಳಿ
• ಧೂಳಿನಿಂದ ಮುಕ್ತವಾಗಿರಲು ತಪ್ಪದೇ ನೆಲಗಳನ್ನು ಒರೆಸಿ
• ಮನೆಯ ಕೊಠಡಿಗಳಲ್ಲಿ ಕಸಕಡ್ಡಿ, ಹಳೆಯ ವಸ್ತುಗಳು ಸಂಗ್ರಹಣೆಯಾಗಲು ಬಿಡಬೇಡಿ. ಅಗತ್ಯ ವಸ್ತುಗಳು ಮಾತ್ರ ನಿಮ್ಮ ಕೋಣೆಯಲ್ಲಿರಲಿ.
• ಮುಖ್ಯವಾಗಿ ಬಳಸಿದ ನಂತರ ಆಯಾ ವಸ್ತುಗಳನ್ನು ಅದರದೇ ಜಾಗದಲ್ಲಿ ಇಡಲು ಮರೆಯದಿರಿ.
• ಪುಸ್ತಕಗಳು, ದಿನಪತ್ರಿಕೆಗಳು, ಮ್ಯಾಗಝಿನ್‍ಗಳಿಗೆ ನಿರ್ಧಿಷ್ಟ ಜಾಗ ಕಲ್ಪಿಸಿ. ಪತ್ರಿಕೆಗಳಿಗೆ ಪ್ರತ್ಯೇಕ ಸ್ಥಳ ನಿಗದಿಪಡಿಸುವುದರಿಂದ ಅವುಗಳು ಚೆಲ್ಲಾಪಿಲ್ಲಿಯಾಗಿ ಹರಡುವುದನ್ನು ತಪ್ಪಿಸಬಹುದು.