ಅತಿಯಾಗಿ ಕಾಫಿ/ಟೀ ಸೇವಿಸುವುದು ಆರೋಗ್ಯಕ್ಕೆ ಅನೇಕ ತೊಂದರೆಗಳನ್ನು ಉಂಟು ಮಾಡುತ್ತೆ, ಇದನ್ನು ಓದಿ ಅದರಿಂದ ಹೇಗೆ ನಿವಾರಣೆ ಹೊಂದಬಹುದು ಅಂತ ತಿಳಿದುಕೊಳ್ಳಿ..

0
2882

ಯಾವುದೇ ಪ್ರಕೃತಿ ಚಿಕಿತ್ಸಾ ತಜ್ಞರನ್ನು ಭೇಟಿಯಾದರೂ ಚಹಾ/ ಕಾಫಿ ತ್ಯಜಿಸುವುದು ಆರೋಗ್ಯವರ್ಧಕ ಎಂದು ತಿಳಿಸುತ್ತಾರೆ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ, ದಿನಪತ್ರಿಕೆ, ಮಾಸಿಕಗಳಲ್ಲಿ ಚಹಾ/ಕಾಫಿ ಕುಡಿಯುವುದು ಒಳ್ಳೆಯದೆಂದು ಕೆಲವು ಲೇಖನಗಳನ್ನು ನೀವು ಓದಿರಲೂಬಹುದು. ಹಾಗಿದ್ದೂ ಒಂದಂತೂ ಸತ್ಯ. ಅತಿಯಾದರೆ ಅಮೃತವೂ ವಿಷ!!! ಆದರೆ ಈ ಪೇಯಗಳು ಅನಾರೋಗ್ಯಕರವೆಂದು ಗೊತ್ತಿದ್ದೂ ದೇಹ/ಮನಸ್ಸು ಚೈತನ್ಯಗೊಳಿಸುವ ಇವುಗಳನ್ನು ದೂರಮಾಡುವುದು ಕಷ್ಟಸಾಧ್ಯ. ಯಾಕೆಂದರೆ…

ಸಂತೋಷಾದ್ದ್ ಅನುತ್ತಮಃ ಸುಖಲಾಭಃ|| (ಪತಂಜಲಿ ಯೋಗ ಸೂತ್ರ, 2.42)

ಅಂದರೆ ಸಂತೋಷದಿಂದ ಅತ್ಯುತ್ತಮ ಸುಖವು ಲಭಿಸುವುದು. ನಾವೆಲ್ಲರೂ ಪ್ರತಿನಿತ್ಯವೂ ಬಯಸುವುದು ಸುಖವನ್ನೇ ಅಲ್ಲವೇ? ದೇವರೇ.. ನನಗೆ ಯಾವತ್ತೂ ಕಷ್ಟಗಳನ್ನೇ ಕೊಡು!! ಎಂದು ಯಾವ ಮನುಷ್ಯನೂ ಇಲ್ಲಿಯವರೆಗೆ ಕೇಳಿಕೊಂಡಿರಲಾರ. ಯಾವುದೇ ಸಾಧು,ಸಂತ, ಸನ್ಯಾಸಿಗಳೇ ಆದರೂ “ಮೋಕ್ಷ”ಎಂಬ ಸುಖವನ್ನೇ ಅಪೇಕ್ಷಿಸುವವರು. ಏಕೆಂದರೆ ಮೋಕ್ಷ ದೊರೆತರೆ ಪುನರ್ಜನ್ಮ ಎಂಬ ಕಷ್ಟ ಇಲ್ಲ!! ಹಾಗಿದ್ದೂ ಚಹಾ/ಕಾಫಿಯ ಚಟ ಹತ್ತಿಕೊಂಡರೆ ಕಷ್ಟ. ಒಂದೆರಡು ದಿನ ಕುಡಿಯದಿದ್ದರೆ ತಲೆನೋವು,ಸುಸ್ತು,ಅನಾಸಕ್ತಿ ಕಾಣಿಸಿಕೊಂಡರೆ ಮನುಷ್ಯ ಅವುಗಳ ಚಟಕ್ಕೆ ಬಿದ್ದಿದ್ದಾನೆ ಎಂದರ್ಥ. ಬಿಡಬೇಕೆಂದು ಮನಸ್ಸು ಮಾಡಿದರೂ, ಕಣ್ಣಿಗೆ ಕಾಣದಿದ್ದರೂ ನೆನಪಾಗುತ್ತಿರುತ್ತದೆ. ಕಂಡರಂತೂ ಮನಸ್ಸನ್ನು ತಡೆಯುವುದು ಸ್ವಲ್ಪ ಕಷ್ಟವೇ!!! ಯಾಕೆ ಹೀಗೆ? ಇವುಗಳನ್ನು ತ್ಯಜಿಸುವುದು ಹೇಗೆ? ಇಲ್ಲಿದೆ ಉತ್ತರ…..

ಅಸಂಶಯಂ ಮಹಾಬಾಹೋ ಮನೋ ದುರ್ನಿಗ್ರಹಂ ಚಲಮ್|
ಅಭ್ಯಾಸೇನ ತು ಕೌಂತೇಯ ವೈರಾಗ್ಯೇಣ ಚ ಗೃಹ್ಯತೇ||
(ಭಗವದ್ಗೀತೆ- ಅಧ್ಯಾಯ 6, 35)

ಹೇ ಮಹಾಬಾಹುವೇ! ನಿಸ್ಸಂದೇಹವಾಗಿ ಮನಸ್ಸು ಚಂಚಲ ಮತ್ತು ಕಷ್ಟದಿಂದಲೇ ವಶವಾಗುವಂತಹುದಾಗಿದೆ ; ಆದರೆ ಹೇ ಕುಂತೀಪುತ್ರನಾದ ಅರ್ಜುನಾ! ಇದು ಅಭ್ಯಾಸದಿಂದ ಮತ್ತು ವೈರಾಗ್ಯದಿಂದ ವಶವಾಗುತ್ತದೆ.

ಮೊದಲು ಚಹಾ/ಕಾಫಿಯ ಮೇಲೆ ವೈರಾಗ್ಯವನ್ನು ಬೆಳೆಸಿಕೊಳ್ಳಬೇಕು. ಕೇವಲ ವೈರಾಗ್ಯವನ್ನು ಬೆಳೆಸಿಕೊಳ್ಳುವಾಗ ಮನಸ್ಸು ಅವುಗಳತ್ತ ಆಕರ್ಷಿತವಾಗುವುದು ಜಾಸ್ತಿ. ( ಚಹಾ ಬೇಡವೆಂದು ದೂರಮಾಡುತ್ತಿದ್ದಂತೆ ನೆನೆಪಾಗುವುದು ಜಾಸ್ತಿ !!!). ಅದಕ್ಕಾಗಿ ಮನಸ್ಸನ್ನು ಕಷಾಯ/ ಹಣ್ಣಿನ ರಸಗಳ ಮೇಲೆ ಕೇಂದ್ರೀಕರಿಸುವುದು. ಇದರಿಂದ ಚಹಾ/ಕಾಫಿಯ ನೆನಪಾಗುವುದು ದೂರವಾಗುವುದು. ಈ ಅಭ್ಯಾಸ ಕೆಲವು ದಿನಗಳವರೆಗೆ ಮಾತ್ರವಲ್ಲ. ಪ್ರತಿನಿತ್ಯ ಅಭ್ಯಾಸ ಮಾಡುವುದರಿಂದ ಚಹಾ/ ಕಾಫಿಯ ಅಭ್ಯಾಸವನ್ನು ಸಂಪೂರ್ಣ ದೂರಗೊಳಿಸಬಹುದು. ಇದು ಕೇವಲ ಆಹಾರ ಪದ್ಧತಿಗಷ್ಟೇ ಅಲ್ಲ. ಮಾನಸಿಕ ಒತ್ತಡದಿಂದ ಬರುವ ಮಧುಮೇಹ, ರಕ್ತದೊತ್ತಡದ ಸಮಸ್ಯೆಗಳನ್ನು ದೂರಮಾಡಲೂ ಬಳಸಿಕೊಳ್ಳಬಹುದು. ಹೇಗೆಂದರೆ ಮನಸ್ಸನ್ನು ಉದ್ರಿಕ್ತಗೊಳಿಸುವ ಆಲೋಚನೆಗಳ ಮೇಲಿನ ವೈರಾಗ್ಯದಿಂದ ( ಅಂದರೆ ಅಂತಹ ಯೋಚನೆಗಳಿಗೆ ಗಮನಹರಿಸದೆ) ಮಾನಸಿಕ ಶಾಂತಿಯನ್ನು ಪಡೆಯಬಹುದು. ಕಾಯಿಲೆಗಳನ್ನು ದೂರಮಾಡಿಕೊಳ್ಳಬಹುದು.

ಇದನ್ನೇ ಮಹರ್ಷಿ ಪತಂಜಲಿಯೂ ಪುನರುಚ್ಚರಿಸಿದ್ದಾರೆ. ಅಭ್ಯಾಸ ವೈರಾಗ್ಯಾಭ್ಯಾಂ ತನ್ನಿರೋಧಃ ||
( ಪತಂಜಲಿ ಯೋಗ ಸೂತ್ರ – 1,12). ಅಭ್ಯಾಸ ಹಾಗೂ ವೈರಾಗ್ಯಗಳಿಂದ ಮನಸ್ಸನ್ನು ನಿಯಂತ್ರಿಸಬಹುದು.

ಅಭ್ಯಾಸ ಎಂದರೇನು?

ತತ್ರ ಸ್ಥಿತೌ ಯತ್ನೋSಭ್ಯಾಸಃ|| ( ಪತಂಜಲಿ ಯೋಗ ಸೂತ್ರ – 1,13)
ಅದೇ ಸ್ಥಿತಿಯನ್ನು ಸ್ಥಿರವಾಗಿ ಹಿಡಿದುಕೊಳ್ಳುವ ಪ್ರಯತ್ನವೇ ಅಭ್ಯಾಸ. ಅಂದರೆ ಚಹಾ/ಕಾಫಿ ಬಿಡುತ್ತೇನೆ ಎಂದು ಮನಸ್ಸಿಗೆ ಬಂದಕೂಡಲೇ ಪುನಃ ಮನಸ್ಸು ಚಂಚಲವಾಗದಂತೆ ಹಿಡಿದಿಟ್ಟುಕೊಳ್ಳುವ ಪ್ರಯತ್ನವೇ ಅಭ್ಯಾಸ.

ಸ ತು ದೀರ್ಘಕಾಲ ನೈರಂತರ್ಯ ಸತ್ಕಾರ್ಯಸೇವಿತೋ ದೃಢಭೂಮಿಃ || ( ಪತಂಜಲಿ ಯೋಗ ಸೂತ್ರ – 1,14)
ಕೇವಲ ಒಂದೆರಡು ದಿನಕ್ಕಷ್ಟೇ ಆ ಅಭ್ಯಾಸವಲ್ಲ. ತಿಂಗಳಾನುಗಟ್ಟಲೆ ದೀರ್ಘವಾಗಿ, ನಿರಂತರ (ಪ್ರತಿದಿನವೂ; ಒಂದು ದಿನ ನೆಂಟರ ಮನೆಗೆ ಹೋಗಿದ್ದಾಗ ಚಹಾ ಕೊಟ್ಟರೆಂದು ಕುಡಿದು, ನಾಳೆಯಿಂದ ಬಿಡುತ್ತೇನೆ ಎಂದುಕೊಂಡರೆ ಅಭ್ಯಾಸ ತಪ್ಪಿದಂತೆ!!), ಸತ್ಕಾರ್ಯದಿಂದ ಎಂದರೆ ಸಂಪೂರ್ಣ ಗಮನಕೊಟ್ಟಾಗ ಮಾತ್ರ ಮಾಡುವ ಅಭ್ಯಾಸ ದೃಢವಾಗುವುದು.

ವೈರಾಗ್ಯ ಎಂದರೇನು?

ದೃಷ್ಟಾನುಶ್ರವಿಕವಿಷಯವಿತೃಷ್ಣಸ್ಯ ವಶೀಕಾರಸಂಜ್ಞಾ ವೈರಾಗ್ಯಮ್ || ( ಪತಂಜಲಿ ಯೋಗ ಸೂತ್ರ – 1,15)
ಕಣ್ಣಿನಲ್ಲಿ ನೋಡಿದ(ದೃಷ್ಟಿಸಿದ), ಕಿವಿಗಳಲ್ಲಿ ಕೇಳಿದ ( ಅನುಶ್ರವಿಕ) ವಿಷಯಗಳ ಬಲವಾದ ಬಯಕೆಗಳಿಗೂ ನಮ್ಮ ಜ್ಞಾನೇಂದ್ರಿಯಗಳು ಸ್ಪಂದಿಸದಂತೆ ವಶೀಕರಣ ಮಾಡಿ ಹಿಡಿದಿಟ್ಟುಕೊಳ್ಳುವ ಸ್ಥಿತಿಯೇ ವೈರಾಗ್ಯ.

ಅಂದರೆ ಅಭ್ಯಾಸ ಪೂರ್ವಕ, ಹಟದಿಂದ ಚಹಾ,ಕಾಫಿ ಕುಡಿಯುವುದನ್ನು ಸಂಪೂರ್ಣವಾಗಿ ಬಿಟ್ಟಿದ್ದೇವೆ. ಆದರೆ ಎಲ್ಲೋ ಒಂದು ಕಡೆ ಚಹಾ/ಕಾಫಿ ಮಾಡುವುದನ್ನು ನೋಡಿದಾಗ, ಪತ್ರಿಕೆಗಳಲ್ಲಿ ಓದಿದಾಗ ಹಾಗೆಯೇ ಇತರರು “ಚಹಾ/ಕಾಫಿ ಕುಡಿಯುವುದು ಒಳ್ಳೆಯದು!!” ಎಂದು ಹೇಳುವುದನ್ನು ಕೇಳಿದರೂ, ನಾಲಗೆಗೆ ಅದರ ರುಚಿ ನೆನೆಪಾದರೂ ಆ ಪ್ರಚೋದನೆಗೆ ನಮ್ಮ ಮನಸ್ಸು/ಜ್ಞಾನೇಂದ್ರಿಯಗಳು ಸ್ಪಂದಿಸದಂತೆ ವಶದಲ್ಲಿಟ್ಟುಕೊಳ್ಳುವ ಅಭ್ಯಾಸವೇ ವೈರಾಗ್ಯ. ಕೇವಲ ಬಾಯಿಯಲ್ಲಿ ” ಐ ಹೇಟ್ ಟೀ/ಕಾಫಿ!!” ಎನ್ನುವುದರಲ್ಲಿ ಅರ್ಥವಿಲ್ಲವಷ್ಟೆ!!

ಈ ರೀತಿಯಾಗಿ ತೊಡಗುವುದರಿಂದ ನಾವು ಕೇವಲ ಚಹಾ/ಕಾಫಿಯ ಅಭ್ಯಾಸವನ್ನಷ್ಟೇ ಅಲ್ಲ.. ಬೀಡಿ, ಸಿಗರೇಟು, ತಂಬಾಕು, ಮಧ್ಯಪಾನ ಮಾತ್ರವಲ್ಲದೆ ಅತಿಯಾಗಿ ಮೊಬೈಲ್ ಬಳಕೆ ಮಾಡುವ ಚಟವನ್ನೂ ದೂರಮಾಡಬಹುದು.

ನೊಮೋಫೋಬಿಯಾ : ವಾಟ್ಸಾಪ್ ನಲ್ಲಿ ಯಾರು ಮೆಸೇಜ್ ಮಾಡಿದರೋ, ಫೇಸ್ ಬುಕ್ ನಲ್ಲಿ ಎಷ್ಟು ಲೈಕ್ ಬಂತೋ!! ಎಂದು ಮನಸ್ಸಿನಲ್ಲಿ ಚಿಂತಿಸುತ್ತಾ ಮತ್ತೆ ಮತ್ತೆ ಮೊಬೈಲ್ ನೋಡುವ ಚಟ!! ಒಂದು ಘಂಟೆ ಮೊಬೈಲ್ ನೋಡದಿದ್ದರೆ ಏನೋ ಕಳೆದುಕೊಂಡಂತೆ ಅನುಭವಿಸುವುದು!!