ಪ್ರಕೃತಿ ತಾನಾಗಿಯೇ ದೈವಕ್ಕೆ ಭಕ್ತಿ ಸಮರ್ಪಿಸುವ ಕ್ಷಣ ನೋಡುವುದಾದರೆ ಉತ್ತರ ಕನ್ನಡ ಜಿಲ್ಲೆಯ ಸಹಸ್ರಲಿಂಗ ಕ್ಷೇತ್ರಕ್ಕೆ ಒಮ್ಮೆಯಾದರೂ ಭೇಟಿ ನೀಡಿ..!

0
1552

ಜಗದೇಶ್ವರ, ಗೌರೀಶ್ವರ, ಭೀಮೇಶ್ವರ, ಸರ್ವೇಶ, ಈಶ್ವರ, ಮಲ್ಲಿಕಾರ್ಜುನ, ಹೀಗೆ ನೂರಾರು ಹೆಸರುಗಳ ಶಿವನನ್ನು ಭಕ್ತರು ಶ್ರದ್ಧಾ-ಭಕ್ತಿಗಳನ್ನು ಕಟ್ಟಿಕೊಂಡು ಶಿವನನ್ನು ದೇವಸ್ಥಾನಗಳಲ್ಲಿ ಪೂಜಿಸಲಾಗುತ್ತದೆ. ಇಂಥ ಪುಣ್ಯಕ್ಷೇತ್ರಗಳು ದೇಶ-ವಿದೇಶದಲ್ಲಿ ನೂರಾರಿವೆ. ಕರ್ನಾಟಕದಲ್ಲೂ ಇಂಥ ವೈಶಿಷ್ಟ್ಯತೆಯಿಂದ ತುಂಬಿದ ಕ್ಷೇತ್ರಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಹಸ್ರಲಿಂಗ ಕ್ಷೇತ್ರ ಕೂಡ ಒಂದು. ಈ ಕ್ಷೇತ್ರದಲ್ಲಿ ನದಿಯೇ ದೇವಾಲಯವಾಗಿ ಮಾರ್ಪಾಟಾಗಿದೆ.

ಉತ್ತರ ಕನ್ನಡ ಜಿಲ್ಲೆ ಶಿರಸಿಯಿಂದ ಕೇವಲ 17 ಕಿಲೊಮೀಟರ್ ದೂರದಲ್ಲಿರುವ ಶಲ್ಮಲ ಜಲತಟದಲ್ಲಿ ಕಾಣಸಿಗುವ ಶಿವತಾಣವೇ ಈ ಸಹಸ್ರಲಿಂಗ. ಈ ಕ್ಷೇತ್ರದಲ್ಲಿ ಕೋಟಿಗಳ ಸಂಖ್ಯೆಯಲ್ಲಿ ಶಿವನ ಸ್ವರೂಪವೆನ್ನಲಾದ ಶಿವಲಿಂಗವನ್ನು ಬಂಡೆ ಕಲ್ಲಿನಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಗುತ್ತಿದೆ. ಹೆಸರಿಗೆ ಮಾತ್ರವೇ ಸಾವಿರ, ವಾಸ್ತವಕ್ಕೆ ಆ ನದಿಯಲ್ಲಿನ ಶಿವಲಿಂಗವನ್ನು ನಾವು ಲೆಕ್ಕ ಹಾಕಲು ಸಾಧ್ಯವಿಲ್ಲ. ನದಿಯ ಬಂಡೆಯ ಮೇಲೆ ಕಾಲಿಡುತ್ತ ಕಿಲೋಮೀಟರ್‌ಗೆಟ್ಟಲೆ ನಡೆಯುತ್ತಾ ಲಿಂಗಗಳ ದರ್ಶನ ಮಾಡಬಹುದು. ದೃಷ್ಟಿ ಹಾಯಿಸಿದಷ್ಟು ದೂರ ಲಿಂಗಗಳು ಗೋಚರಿಸುತ್ತವೆ.

ವಿಜಯನಗರದ ಸಾಮ್ರಾಜ್ಯದ ಸೋದೆಯ ದೊರೆ ಸದಾಶಿವ ರಾಜ ಈ ಶಿರಸಿ ಪ್ರದೇಶವನ್ನು ಆಡಳಿತ ಕಾಲದಲ್ಲಿ ಇಲ್ಲಿನ ಲಿಂಗಗಳ ರಚನೆಯಾಗಿದೆ ಎಂದು ಐತಿಹಾಸಿಕ ಹಿನ್ನೆಲೆ ಹೇಳುತ್ತದೆ. ಅದರ ಜೊತೆಗೆ ಪಾಂಡವರು ವನವಾಸದ ಸಂದರ್ಭದಲ್ಲಿ ಇಲ್ಲಿಗೆ ಬಂದಾಗ ಭೀಮ ಪ್ರತಿಷ್ಠಾಪಿಸಿದ ಶಿವಲಿಂಗವನ್ನು ಧರ್ಮರಾಯ ಪೂಜಿಸಿದನೆಂಬ ಪೌರಾಣಿಕ ಪ್ರತೀತಿಯೂ ಕೂಡ ಇದೆ. ಇತಿಹಾಸ ಹಾಗೂ ಪುರಾಣದ ಪ್ರತೀತಿಗಳನ್ನು ಹೊಂದಿರುವ ಈ ಸುಂದರ ನದಿಯು ಒಂದು ಆಧ್ಯಾತ್ಮಿಕವಾದ ತಾಣವಾಗಿ ಪ್ರಖ್ಯಾತಿ ಪಡೆದ ಕ್ಷೇತ್ರವಾಗಿದೆ.

ಇಲ್ಲಿನ ಇನ್ನೊಂದು ವಿಶೇಷವೇನೆಂದರೆ ಈ ನದಿಯಲ್ಲಿ ಸ್ನಾನವನ್ನು ಮಾಡಿದರೆ ಎಂಥಹ ರೋಗಗಳೇ ಆಗಲಿ ನಯವಾಗುತ್ತದೆ ಎಂದು ನಂಬಲಾಗಿದೆ. ಇದಕ್ಕೆ ಮುಕ್ಯವಾದ ಕಾರಣ ಈ ನದಿಯ ಸುತ್ತಲಿರುವ ಅರಣ್ಯದಲ್ಲಿ ಅಮೂಲ್ಯವಾದ ವನ ಔಷಧ ಮೂಲಿಕೆಗಳಿರುವುದರಿಂದ. ಈ ಕ್ಷೇತ್ರವನ್ನು ಸಂದರ್ಶಿಸಿ ನದಿಯಲ್ಲಿ ಸ್ನಾನ ಮಾಡಿದರೆ ಸಂತಾನ ಇಲ್ಲದೆ ಇರುವವರಿಗೆ ಸಂತಾನವಾಗುತ್ತದೆ ಎಂದು ಇಲ್ಲಿನ ಭಕ್ತರು ನಂಬುತ್ತಾರೆ. ಮಹಾಶಿವರಾತ್ರಿಯ ಸಂದರ್ಭದಲ್ಲಿ ಇದರ ಸುತ್ತಮುತ್ತಲಿನ ಸ್ಥಳಗಳಿಂದ ಅಪಾರ ಸಂಖ್ಯೆಯಲ್ಲಿ ಜನರು ಇಲ್ಲಿಗೆ ಭೇಟಿ ನೀಡುತ್ತಾರೆ.