ಅಂಧ ಪಾಶ್ಚಾತ್ಯ ಅನುಕರಣೆ, ಸದಾ ಮೊಬೈಲ್-ನಲ್ಲಿಯೇ ಕಾಲ ಹರಣ ಮಾಡುತ್ತಿರುವ ಇಂದಿನ ಯುವ ಪೀಳಿಗೆ ಎತ್ತ ಸಾಗಿದೆ??

0
1163

ಯೌವನವು ಜೀವನದ ವಸಂತ ಕಾಲ. ಅದಮ್ಯ ಉತ್ಸಾಹ, ಶಕ್ತಿ, ಸಾಮರ್ಥ್ಯಗಳ ಸಂಗಮವಾಗಿರುವ ಈ ಯುವ ಅವಸ್ಥೆಯು ಜೀವನದ ಪರ್ವಕಾಲವೂ ಹೌದು. ಬಾಲ್ಯದ ಸುಂದರ, ಸುಮಧುರ, ಮುಗ್ಧಲೋಕದಿಂದ ಹೊರಬಂದು ಹಲವು ಬಗೆಯ ಸಂಘರ್ಷಮಯ ವಾಸ್ತವ ಪ್ರಪಂಚಕ್ಕೆ ಕಾಲಿಡುವ ಹಂತ ಇದು.

ಬಾಲ್ಯದಲ್ಲಿ ನಾವು ನಮ್ಮ ಭವಿಷ್ಯತ್ತಿಗೆ ಹಾಕಿಕೊಂಡ ಪಂಚಾಂಗವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳುತ್ತಾ ಜೀವನದ ಉದ್ದೇಶ, ಗುರಿ, ಸಾಧನೆಯನ್ನು ಖಚಿತಪಡಿಸಿಕೊಂಡು ಸಾಧನಾಪಥದಲ್ಲಿ ದೃಢನಿಲುವು ತಳೆದು ಜವಾಬ್ದಾರಿಯುತರಾಗಿ ಮುಂದೆ ಸಾಗಬೇಕಾದ ಮಹತ್ವದ ಕಾಲವೂ ಇದಾಗಿದೆ.

ಒಳಿತು- ಕೆಡುಕು ನಮ್ಮ ಸಮಾಜದಲ್ಲಿ ಹೇಗೋ ಹಾಗೆ ವಿದೇಶಿ ಸಮಾಜದಲ್ಲಿಯೂ ಇವೆ. ನಮ್ಮ ಸಮಾಜದಲ್ಲಿ ಎಂದೋ, ಯಾರೋ, ಯಾವುದೋ ಕಾಲಘಟ್ಟದಲ್ಲಿ ಮಾಡಿ ಇಟ್ಟ ಕೆಲವೊಂದು ಸಂಪ್ರದಾಯಗಳು, ರೀತಿ-ನೀತಿಗಳು ಇಂದಿಗೂ ಜೀವಂತವಾಗಿ ಇದ್ದುಕೊಂಡು ಪ್ರಗತಿಯ ಹಾದಿಯಲ್ಲಿ ತೊಡಕಾಗಿ ನಿಂತಿವೆ.

ವರ್ತಮಾನ ಕಾಲ ಪರಿಸ್ಥಿತಿಗೆ ಒಂದಿನಿತೂ ಅನುಕೂಲವಲ್ಲದ, ಹೊಂದಿಕೆ ಆಗದ ಇಂತಹ ಸಂಪ್ರದಾಯ, ರೀತಿ-ನೀತಿಗಳನ್ನು ನಾವು ಉಸಿರುಗಟ್ಟಿದರೂ ಸರಿ ಸಹಿಸುತ್ತವೆ ಹೊರತು ಅದನ್ನು ಪ್ರಶ್ನಿಸುವ ಎದೆಗಾರಿಕೆ ಉಳ್ಳವರು ಮಾತ್ರ ನಮ್ಮಲ್ಲಿ ತೀರಾ ಕಡಿಮೆ. ನಮ್ಮಲ್ಲಿ ಪ್ರಶ್ನಿಸುವುದನ್ನು ‘ಉದ್ಧಟತನ’ ಎನ್ನುವವರಿದ್ದಾರೆ. ‘ಉಡಾಫೆ’ ಎನ್ನುವವರಿಗೇನೂ ಕೊರತೆಯಿಲ್ಲ.

ಯಾವುದೇ ಸಮಾಜದಲ್ಲಿ ಬದಲಾವಣೆ ಆಗಬೇಕಾದರೆ ಸಂಘಟಿತ ಪ್ರಯತ್ನ ಅಗತ್ಯ. ಆದ್ದರಿಂದ ಸಮಸ್ತ ಯುವಸಮುದಾಯ ಈ ನಿಟ್ಟಿನಲ್ಲಿ ಕರ‍್ಯಪ್ರವೃತ್ತವಾಗಬೇಕು. ಇಂದು ತಂತ್ರಜ್ಞಾನದ ಪ್ರಗತಿಯಿಂದಾಗಿ ವಿಶ್ವ ನಮ್ಮ ಅಂಗೈಯೊಳಗೆ ಬಂದು ನಿಂತಿದೆ. ಮೊಬೈಲ್, ಅಂತರ್ಜಾಲ, ಫೇಸ್‌ಬುಕ್ ಬಳಕೆ ವ್ಯಾಪಕ ಆಗಿದೆ. ಅತಿರೇಕಕ್ಕೂ ಹೋಗಿದೆ. ಇವು ಬಿಟ್ಟು ಬೇರೆ ಪ್ರಪಂಚ ಇಲ್ಲ ಎನ್ನುವಷ್ಟರ ಮಟ್ಟಿಗೆ ಯುವಜನತೆ ಇವುಗಳ ದಾಸರಾಗಿದ್ದಾರೆ. ಇವುಗಳ ಮೇಲಿನ ಅತಿಯಾದ ಅವಲಂಬನೆಯಿಂದಾಗಿ ಅನೇಕ ರೀತಿಯ ದುಷ್ಪರಿಣಾಮಗಳೂ ಉಂಟಾಗಿವೆ, ಉಂಟಾಗುತ್ತಿವೆ.

ಪ್ರತಿಯೊಂದನ್ನೂ ಎಲ್ಲಿ, ಯಾವಾಗ, ಎಷ್ಟು ಬಳಸಬೇಕು ಎಂಬ ವಿವೇಚನೆ ಇರಬೇಕಾದ್ದು ಮುಖ್ಯ ಅಲ್ಲವೆ? ಇದರ ಅರಿವಿದ್ದೂ ಯುವಸಮುದಾಯದಲ್ಲಿ ಈ ಅನಿಷ್ಟ ಪರಂಪರೆ ಹೆಚ್ಚುತ್ತಿರುವುದಕ್ಕೆ ಕಾರಣವೇನು? ನಮ್ಮ ಹೆತ್ತವರೆ? ಮುಕ್ತ ಕೌಟುಂಬಿಕ ವಾತಾವರಣದ ಕೊರತೆಯೆ? ಕೊಂಡಿ ಕಳಚುತ್ತಿರುವ ಬಂಧ ಸಂಬಂಧಗಳೆ? ಬದಲಾಗುತ್ತಿರುವ ಸಾಮಾಜಿಕ ಪರಿಸ್ಥಿತಿಯೆ? ಅಥವಾ ಸ್ವತಃ ಸಾಧಕ-ಬಾಧಕಗಳನ್ನು ಪರಿಶೀಲಿಸದ ವಿವೇಚನಾರಹಿತ ಬೇಜವಾಬ್ದಾರಿ ಬದುಕೆ? ಈ ನಿಟ್ಟಿನಲ್ಲಿ ಚಿಂತಿಸಬೇಕಾದ್ದು ಇಂದಿನ ತುರ್ತು ಅಗತ್ಯಗಳಲ್ಲಿ ಒಂದು.

ರಿಪೇರಿ ಮಾಡಲಾಗದಷ್ಟು ಹಾಳಾಗಿ ಹೋಗುವ ಮುನ್ನ ಎಚ್ಚರ ವಹಿಸುವುದೇ ವಿವೇಕ. ವಿವೇಚನೆಯಿಂದ ವರ್ತಿಸುವುದೇ ಜಾಣತನ. ಪ್ರಜ್ಞಾವಂತಿಕೆಯ ಲಕ್ಷಣ. ಅನಾವಶ್ಯಕ ಕುರುಡು ಅನುಕರಣೆ ಮಾಡದೆ, ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಯುವಜನಾಂಗ ಬದುಕನ್ನು ರೂಪಿಸಿಕೊಳ್ಳುವಂತಾಗಲಿ. ಬದುಕು ಯಾರೊಬ್ಬರ ಪಾಲಿಗೂ ದುಃಸ್ವಪ್ನವಾಗದಿರಲಿ. ಯುವಜನತೆ ದೈಹಿಕವಾಗಿ, ಮಾನಸಿಕವಾಗಿ ಸದೃಢ ಅರೋಗ್ಯವಂತ, ಜವಾಬ್ದಾರಿಯುತ ಪ್ರಜೆಗಳಾದಲ್ಲಿ ನಿಜಕ್ಕೂ ಅದು ದೇಶಕ್ಕೆ ಹೆಮ್ಮೆಯ ವಿಷಯ. ಅಂತಹ ಯುವಸಂಪತ್ತು ದೇಶದ ಬಹು ಮುಖ್ಯ ಸಂಪತ್ತು ಎಂದು ಎನಿಸಿಕೊಳ್ಳುತ್ತದೆ. ಇದು ಯುವಪೀಳಿಗೆಗೆ ಗೌರವದ ವಿಷಯ ಅಲ್ಲವೆ?