ನಿಮ್ಮ ಐಕ್ಯೂ ಶಾಶ್ವತವಲ್ಲ, ಹೀಗೆ ವೃದ್ಧಿಸಿಕೊಳ್ಳಬಹುದು ಮುಂದೆ ಓದಿ!!

0
1576

ನಿಮ್ಮ ಐಕ್ಯೂ ಶಾಶ್ವತವಲ್ಲ!

ಹಾಗೆ ನೋಡಿದರೆ, ಐನ್‍ಸ್ಟೈನ್ ನ್ಯೂರೋಪ್ಲಾಸ್ಟಿಸಿಟಿಗೆ ಒಂದು ದೊಡ್ಡ ಉದಾಹರಣೆ. ಬಾಲ್ಯದಲ್ಲಿ ಆತ ಶತದಡ್ಡ ಎನಿಸಿದ್ದ. ಅವನ ತಾಯಿ ಶಾಲೆ ಬಿಡಿಸಿ ಅವನಿಗೆ ಮನೆಯಲ್ಲೇ ಶಿಕ್ಷಣ ನೀಡಬೇಕಾಯಿತು. ಅಂತಹ ವ್ಯಕ್ತಿ ಮುಂದೆ ಜಗತ್ತೇ ನಿಬ್ಬೆರಗಾಗುವ ಸಾಪೇಕ್ಷ ಸಿದ್ಧಾಂತಗಳನ್ನು ಮಂಡಿಸಿ ವಿಶ್ವವಿಖ್ಯಾತನಾದ. ಫೋಟೋಎಲೆಕ್ಟ್ರಿಕ್ ಎಫೆಕ್ಟ್ ಸಂಶೋಧನೆಗಳಿಗಾಗಿ 1921ರ ಭೌತಶಾಸ್ತ್ರದ ನೊಬೆಲ್ ಪುರಸ್ಕಾರ ಪಡೆದ. ಬುದ್ಧಿವಂತಿಕೆ ವಿಷಯ ಚರ್ಚೆಗೆ ಬಂದಾಗಲೆಲ್ಲ ಹೆಸರಿಸಲ್ಪಡುವ `ಸಾರ್ವಕಾಲಿಕ ಮಾನದಂಡ’ವೇ ತಾನಾದ!

ಅದೇ ರೀತಿ `ಟ್ರಾನ್ಸಿಸ್ಟರ್’ ಕಂಡುಹಿಡಿದವರಲ್ಲೊಬ್ಬನಾದ ವಿಲಿಯಂ ಶಾಕ್ಲಿಯನ್ನು ಬಾಲ್ಯದಲ್ಲಿ ಐಕ್ಯೂ ಪರೀಕ್ಷೆಗೆ ಅನರ್ಹ ಎಂದು ಘೋಷಿಸಲಾಗಿತ್ತು!
ಕೆಲವು ಆಯ್ದ ಮಕ್ಕಳನ್ನು ಪರಿಗಣಿಸಿ, ಅವರು ಬೆಳೆದಂತೆಲ್ಲ ಅವರ ಬುದ್ಧಿಶಕ್ತಿ ಹೇಗೆ ಬೆಳವಣಿಗೆಯಾಗುತ್ತದೆ ಎಂಬುದನ್ನು ಸಂಶೋಧಿಸುವ ದೀರ್ಘಾವಧಿ (ವರ್ಷಗಟ್ಟಲೆ ನಡೆಸುವ ಅಧ್ಯಯನ) ಯೋಜನೆಗೆ ಕೆಲವು ಮಕ್ಕಳನ್ನು ಆರಿಸಿಕೊಳ್ಳಲಾಗಿತ್ತು. ಈ ಯೋಜನೆಗಾಗಿ ಮಕ್ಕಳ ಬುದ್ಧಿಶಕ್ತಿಯನ್ನು ಪರೀಕ್ಷಿಸಿದಾಗ ವಿಲಿಯಂ ಶಾಕ್ಲಿಯನ್ನು `ದಡ್ಡ’ ಎಂದು ತೀರ್ಮಾನಿಸಿ ಯೋಜನೆಗೆ ಸೇರಿಸಿಕೊಳ್ಳದೇ ತಿರಸ್ಕರಿಸಲಾಯಿತು. ಮುಂದೆ 1956ರಲ್ಲಿ ಭೌತಶಾಸ್ತ್ರದ ನೊಬೆಲ್ ಅವನದಾಯಿತು!
ಈ ಯೋಜನೆಗಾಗಿ ಆಸೆಯಿಂದ ಪರೀಕ್ಷೆ ತೆಗೆದುಕೊಂಡಿದ್ದ ಮತ್ತೊಬ್ಬ ವಿದ್ಯಾರ್ಥಿಯ ಹೆಸರು ಲೂಯಿಸ್ ಆಲ್ವರೆಜ್. ಆತನೂ ಪರೀಕ್ಷೆಯಲ್ಲಿ ಸಮಾಧಾನಕರ ಅಂಕಗಳನ್ನು ಪಡೆಯದೇ `ಫೇಲ್’ ಆದ. ಆದರೆ ವಿಚಿತ್ರ ನೋಡಿ. ಮುಂದೆ ಇದೇ ಲೂಯಿಸ್ ಆಲ್ವರೆಜ್ ಎಲಿಮೆಂಟರಿ ಪಾರ್ಟಿಕಲ್‍ಗಳ ಬಗ್ಗೆ ನಡೆಸಿದ ಸಂಶೋಧನೆಗಾಗಿ 1968ರ ಸಾಲಿನ ನೊಬೆಲ್ ಪುರಸ್ಕಾರ ಪಡೆದ!

ವಿಚಿತ್ರವೆಂದರೆ ಈ `ಜೀನಿಯಸ್’ ಪರೀಕ್ಷೆಯಲ್ಲಿ `ಪಾಸ್’ ಆಗಿ, ಬುದ್ಧಿವಂತರೆಂದು ಆಯ್ಕೆಯಾದ ವಿದ್ಯಾರ್ಥಿಗಳ ಪೈಕಿ ಯಾರಿಗೂ ನೊಬೆಲ್ ಪುರಸ್ಕಾರ ಸಿಗಲಿಲ್ಲ! `ಬಾಲ್ಯದ ಐಕ್ಯೂವಿಗೂ ಮುಂದಿನ ಸಾಧನೆಗಳಿಗೂ ಸಂಬಂಧವಿಲ್ಲ, ಮನುಷ್ಯರ ಸಾಧನೆಗೆ ಸತತ ಪರಿಶ್ರಮ ಹಾಗೂ ಶಿಸ್ತುಬದ್ಧ ಅಧ್ಯಯನಗಳೇ ಮುಖ್ಯ’ ಎಂಬುದಕ್ಕೆ ಇವೆಲ್ಲ ದೊಡ್ಡ ನಿದರ್ಶನಗಳು.

ಆದರೂ ಚಿಕ್ಕ ವಯಸ್ಸಿನಲ್ಲಿ `ದಡ್ಡ’ ಎಂದು ಕರೆಯಲ್ಪಟ್ಟಿದ್ದ ಐನ್‍ಸ್ಟೀನ್ ಮುಂದೆ `ಜೀನಿಯಸ್’ ಎನಿಸಿಕೊಂಡಿದ್ದು ಹೇಗೆ? ಪ್ರಯೋಗಗಳ ಮೂಲಕ ಮಿಶಿಗನ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಕಂಡುಕೊಂಡಿರುವ ಮಾಹಿತಿ ಇದು: ನಿಮ್ಮ ಕಲಿಕೆಯ ಮೂಲಕ ನೀವು ನಿಮ್ಮ ಮೆದುಳಿನ ಸಂರಚನೆಯನ್ನು ಉತ್ತಮಪಡಿಸಿಕೊಳ್ಳಬಹುದು. ಬುದ್ಧಿಯನ್ನು ಬಳಸಿದಷ್ಟೂ ಮೆದುಳಿನ ಕೋಶಗಳು ಹೆಚ್ಚು ಚುರುಕಾಗುತ್ತವೆ. ಶರೀರದ ವ್ಯಾಯಾಮ ಹಾಗೂ ಬುದ್ಧಿಗೆ ಕೆಲಸ ಕೊಡುವ ಸಮಸ್ಯೆಗಳನ್ನು ಬಿಡಿಸುವುದರಿಂದ ಮೆದುಳಿಗೆ ಭಾರೀ ಲಾಭವಿದೆ.

ಹಾಗೆಂದು ಹುಟ್ಟಿನಿಂದಲೇ ಬರುವ `ತೀವ್ರ ಬುದ್ಧಿಶಕ್ತಿ’ ಎಂಬುದಿಲ್ಲ ಎಂದುಕೊಳ್ಳುವಂತಿಲ್ಲ. ಪ್ರತಿಯೊಬ್ಬರಿಗೂ ಶರೀರದ ಬಲಗಳು ಒಂದೇರೀತಿ ಹೇಗೆ ಇರುವುದಿಲ್ಲವೋ ಹಾಗೆಯೇ ಬುದ್ಧಿಯೂ ಸಮಾನವಾಗಿರುವುದಿಲ್ಲ. ಜಾತಿ, ಮತ, ಪಂಥಗಳ ಭೇದವಿಲ್ಲದೇ ಬುದ್ಧಿವಂತಿಕೆ ಹಂಚಿಕೆಯಾಗಿರುತ್ತದೆ (ಈ ವಿಷಯದಲ್ಲಿ ನಮ್ಮ ರಾಜಕಾರಣಿಗಳ ಯಾವುದೇ `ಸಾಮಾಜಿಕ ನ್ಯಾಯ’ ನಡೆಯುವುದಿಲ್ಲ!). ಇದರ ಹಿಂದೆ ವಂಶವಾಹಿ ಜೀನ್‍ಗಳ ಕಾಣಿಕೆಯೂ ಇರುತ್ತದೆ. ಅದು ಬೇರೆ ವಿಷಯ.

ಹೇಗೆ ಶರೀರದ ಬಲವನ್ನು ಸೂಕ್ತ ಆಹಾರ ಹಾಗೂ ವ್ಯಾಯಾಮಗಳ ಮೂಲಕ ಹೆಚ್ಚಿಸಿಕೊಳ್ಳಬಹುದೋ ಹಾಗೆಯೇ ಬುದ್ಧಿಯ ತೀಕ್ಷ್ಣತೆಯನ್ನೂ ಮೆದುಳಿಗೆ ಕಸರತ್ತು ನೀಡುವ ವ್ಯಾಯಾಮಗಳ ಮೂಲಕ ಒಂದಿಷ್ಟು ಹೆಚ್ಚಿಸಿಕೊಳ್ಳಬಹುದು ಎಂಬುದು ಎಲ್ಲರೂ ಖುಷಿಪಡಬಹುದಾದ ವಿಷಯ. ಆದರೂ ಅನುವಂಶಿಕ ಅನುಕೂಲತೆ ಇದ್ದೇಇರುತ್ತದೆ. 4 ಅಡಿ ಎತ್ತರವಿರುವ ಯಾರಾದರೂ ಏನೇ ಮಾಡಿದರೂ 7 ಅಡಿ ಎತ್ತರದ ದೈತ್ಯನಂತಾಗುವುದು ಹೇಗೆ ಅಸಾಧ್ಯವೋ ಹಾಗೆಯೇ 110ರ ಐಕ್ಯೂ ಇರುವವರು 180ರ ಐಕ್ಯೂ ಗಳಿಸುವುದು ತುಂಬಾ ಕಷ್ಟ. ಇರುವಷ್ಟು ಬುದ್ಧಿಯನ್ನು ಸರಿಯಾಗಿ ಬಳಸಿಕೊಂಡು ಹೇಗೆ ಸಾಧನೆ ಮಾಡಬಹುದು ಎಂಬುದರಲ್ಲೇ ಜಾಣ್ಮೆ ಅಡಗಿದೆ (ಹಾಗೆಯೇ ಭಾವನೆಗಳ ನಿಯಂತ್ರಣ, ನಿರ್ವಹಣೆ ತಿಳಿದಿರುವ `ಎಮೋಷನಲ್ ಇಂಟೆಲಿಜೆನ್ಸ್’ ಹಾಗೂ ತೃಪ್ತ-ಪ್ರಶಾಂತ-ಪ್ರಸನ್ನ ಚಿತ್ತಕ್ಕೆ ಕಾರಣವಾಗುವ `ಸ್ಪಿರಿಚ್ಯುಯೆಲ್ ಇಂಟೆಲಿಜೆನ್ಸ್’ ಬೆಳೆಸಿಕೊಳ್ಳುವುದು ಸಹ ಮುಖ್ಯ).