ಹೊಸ ಪ್ರಯೋಗಗಳ ಮೂಲಕ ವಿಶ್ವದ ಗಮನ ಸೆಳೆಯುತ್ತಿರುವ ಭಾರತದ ಬಾಹ್ಯಕಾಶ ಸಂಸ್ಥೆ ಇಸ್ರೊ ವಿಶ್ವದಾಖಲೆ ನಿರ್ಮಿಸಲು ಸಜ್ಜಾಗಿದೆ.
ಮುಂದಿನ ಬಾರಿ ಪಿಎಸ್ಎಲ್ವಿ ಉಪಗ್ರಹ ಉಡಾವಣೆ ವೇಳೆ ಒಂದೇ ಬಾರಿಗೆ 103 ಸ್ಯಾಟಲೈಟ್ಗಳನ್ನು ಗಗನಕ್ಕೆ ಯಶಸ್ವಿಯಾಗಿ ಚಿಮ್ಮಿಸುವ ಮೂಲಕ ಈ ಅಪರೂಪದ ಸಾಧನೆ ಮಾಡಲು ಭರದ ಸಿದ್ಧತೆ ನಡೆಸಿದೆ.
ತಿರುಪತಿಯಲ್ಲಿ ಬುಧವಾರ ನಡೆದ ಇಂಡಿಯನ್ ಸೈನ್ಸ್ ಕಾಂಗ್ರೆಸ್ ಸಮಾವೇಶದಲ್ಲಿ ಇಸ್ರೊ ಈ ಪ್ರಕಟಣೆ ಹೊರಡಿಸಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಫೆಬ್ರವರಿ ಮೊದಲ ವಾರದಲ್ಲಿ ಈ ಸಾಹಸಕ್ಕೆ ಕೈಹಾಕಲಿದೆ.
ಇಸ್ರೊ ಪಾಲಿಗೆ ಇದು ಅತ್ಯಂತ ಮಹತ್ವಕಾಂಕ್ಷಿ ಯೋಜನೆ ಇದಾಗಿದೆ. ಈ ರೀತಿಯ ಸಾಹಸಕ್ಕೆ ಹಿಂದೆ ಯಾರೂ ಕೈ ಹಾಕಿರಲಿಲ್ಲ. ರಷ್ಯಾ 2014ರ ಜೂನ್ನಲ್ಲಿ ಒಂದೇ ಬಾರಿ 39 ಸ್ಯಾಟಲೈಟ್ ಹಾರಿಬಿಟ್ಟಿದ್ದು ಇದುವರೆಗೆ ವಿಶ್ವದಾಖಲೆಯಾಗಿದೆ.
- ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್ಎಲ್ವಿ) ಉಪಗ್ರಹ ಉಡಾವಣೆ ವೇಳೆ 3 ದೊಡ್ಡ ಹಾಗೂ 100 ಸಣ್ಣ ಸ್ಯಾಟಲೈಟ್ಗಳನ್ನು ಹಾರಿಬಿಡಲಿದೆ.
- ಕಳೆದ ವಾರದವರೆಗೂ 83 ಸ್ಯಾಟಲೈಟ್ ಹಾರಿಬಿಡಲು ನಿರ್ಧರಿಸಲಾಗಿತ್ತು. ಆದರೆ 20 ವಿದೇಶೀ ಸ್ಯಾಟಲೈಟ್ಗಳಿಗೆ ಬೇಡಿಕೆ ಬಂದಿದ್ದರಿಂದ 100ಕ್ಕೇರಿಸಲು ತೀರ್ಮಾನಿಸಲಾಯಿತು. ಈ ಕಾರಣಕ್ಕಾಗಿಯೇ ಒಂದು ವಾರ ತಡವಾಗಿ ಉಡಾವಣೆ ಮುಂದೂಡಲಾಗಿದೆ.
- ಪಿಎಸ್ಎಲ್ವಿ ಸಿ-37 ಉಪಗ್ರಹ ಕಾರ್ಟೊಸ್ಯಾಟ್ ಮತ್ತು ಎರಡು ಇಸ್ರೊದ ಸ್ಯಾಟಲೈಟ್ ಹೊತ್ತೊಯ್ಯಲಿದ್ದು, ಉಳಿದ 100 ವಾಣಿಜ್ಯ ಸ್ಯಾಟಲೈಟ್ಗಳಾಗಿವೆ.
- ಬಹುತೇಕ ವಾಣಿಜ್ಯ ಸ್ಯಾಟಲೈಟ್ಗಳು ಅಮೆರಿಕದ್ದಾಗಿವೆ. ಬೆರಳೆಣಿಕೆಯ ಸ್ಯಾಟಲೈಟ್ಗಳು ಫ್ರಾನ್ಸ್ ಮತ್ತು ಜರ್ಮನಿಯದ್ದಾಗಿವೆ.
- ಸಣ್ಣ ಸ್ಯಾಟಲೈಟ್ಗಳು 500 ರಿಂದ 600 ಕೆಜಿ ತೂಕದ್ದಾಗಿರುತ್ತವೆ. ಸ್ಪೇಸ್ ಏಜೆನ್ಸಿ ಅತೀ ಭಾರದ ಪಿಎಸ್ಎಲ್ವಿ ರಾಕೆಟ್ಗಳನ್ನು ನಿರ್ಮಿಸಲಿದೆ.
- ಕಳೆದ ವರ್ಷ ಇಸ್ರೊ 22 ಸ್ಯಾಟಲೈಟ್ಗಳನ್ನು ಒಮ್ಮೆಲೆ ಹಾರಿಬಿಟ್ಟಿತ್ತು. ಇದಕ್ಕೆ ಹೋಲಿಸಿದರೆ ಐದು ಪಟ್ಟು ಹೆಚ್ಚು ಎಂದು ಹೇಳಬಹುದು.