ಜಯಲಲಿತಾ ಜಾತಕ ಜಾಲಾಡಿದಾಗ…

0
2000

ಕಳೆದ ಹಲವು ದಿನಗಳಿಂದ ಮಧುಮೇಹ ಮತ್ತು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಮುಖ್ಯಮಂತ್ರಿ ಜಯಲಲಿತಾ, ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರ ಬೆನ್ನಲ್ಲೇ, ಜಯಲಲಿತಾ ಅನಾರೋಗ್ಯದ ಹಿನ್ನೆಲೆಯಲ್ಲಿ ಜ್ಯೋತಿಷಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಇತ್ತೀಚೆಗಿನ ಸಮಸ್ಯೆಗೆ ಆಹಾರ ಮತ್ತು ಔಷಧಗಳ ಅಡ್ಡ ಪರಿಣಾಮ ಕಾರಣವಂತೆ. ಆಸ್ಟ್ರೇಲಿಯಾದ ನೆಲೆಸಿರುವ ಜ್ಯೋತಿಷಿಯೊಬ್ಬರ ಪ್ರಕಾರ, 2014ರಿಂದಲೇ ಜಯಲಲಿತಾ ಅವರಿಗೆ ಆರೋಗ್ಯ ಸಮಸ್ಯೆ ಇದೆ.

ಲಗ್ನಾಧಿಪತಿ ಗುರು ಆಕೆಗೆ ಒಳ್ಳೆಯದನ್ನು ಮಾಡ್ತಾನೆ. ಆದರೆ, ಸದ್ಯಕ್ಕೆ ಅವರಿಗೆ ಗುರು ದಶೆ ಶನಿ ಭುಕ್ತಿ ನಡೆಯುತ್ತಿದೆ.ಆರನೇ ಮನೆಯ ಅಧಿಪತಿಯಾದ ಶನಿಯು ವೃಶ್ಚಿಕದಲ್ಲಿದೆ. ಕಿಡ್ನಿ ಹಾಗೂ ಬ್ಲಾಡರ್ ಸಮಸ್ಯೆಯಾಗುತ್ತದೆ. ಗುರು ಬಾಧಕ ಸ್ಥಾನದಲ್ಲಿದ್ದು, ಈ ರೀತಿಯಲ್ಲಿದ್ದಾಗ ದೃಷ್ಟಿಯಾಗುತ್ತದೆ ಅಥವಾ ಫುಡ್ ಪಾಯಿಸನ್ ಅಂಥದ್ದು ಆಗುತ್ತದೆ.ಸದ್ಯಕ್ಕೆ ಜಯಲಲಿತಾ ಅವರು ಗುಣಮುಖರಾದರೂ ಇನ್ನು ಎರಡು ವರ್ಷ ಚೆನ್ನಾಗಿರಬಹುದು. 2019ರ ನಂತರ ಮತ್ತೆ ಅರೋಗ್ಯ ಸಮಸ್ಯೆಗಳಾಗುತ್ತವೆ ಎಂದು ಆ ಜ್ಯೋತಿಷಿ ಭವಿಷ್ಯ ನುಡಿದಿದ್ದಾರೆ. ಜಯಲಲಿತಾ ಅವರಿಗೆ ಶನಿ ಭುಕ್ತಿ ನಡೆಯುತ್ತಿದೆ. ಯುವ ವೈದ್ಯರೊಬ್ಬರು ಅವರ ಸಹಾಯಕ್ಕೆ ಬರುತ್ತಾರೆ ಎಂದಿದ್ದಾರೆ. ಆದಷ್ಟು ಬೇಗ ವಾಪಸ್ ಬರುತ್ತಾರೆ. ಸದ್ಯದ ಪರಿಸ್ಥಿತಿ ಕೇವಲ ತಾತ್ಕಾಲಿಕ ಎಂದಿದ್ದಾರೆ ಮತ್ತು ಅಕ್ಟೋಬರ್ 10ರ ನಂತರ ಎಲ್ಲ ಅರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತವೆ ಎನ್ನಲಾಗಿದೆ.

ಜಯಲಲಿತಾ ಜಾತಕ ಹೆಚ್ಚು ನಂಬುತ್ತಾರೆ, ಸಂಖ್ಯಾಶಾಸ್ತ್ರದ ಪ್ರಕಾರ ತಮ್ಮ ಹೆಸರಿಗೆ ಇಂಗ್ಲಿಷ್ ನ ‘ಎ’ ಅಕ್ಷರವನ್ನು ಸೇರಿಸಿಕೊಂಡಿದ್ದರು. ಇದು ಜೋತಿಷ್ಯದ ಮೇಲಿರುವ ಅವರ ನಂಬಿಕೆಯಂತೆ. ಜಾತಕದ ಫಲವಾಗಿ ಹೊರದೇಶಗಳಿಗೆ ಹೋಗುವುದನ್ನು ನಿಲ್ಲಿಸಿದ್ದಾರೆ. ಸಿನೆಮಾ ನಟಿಯಾಗಿದ್ದಾಗ ಹಲವಾರು ಬಾರಿ ವಿದೇಶ ಪ್ರವಾಸ ಕೈಗೊಂಡಿದ್ದ ಜಯಲಲಿತಾ, ರಾಜಕೀಯಕ್ಕೆ ಬಂದ ನಂತರ ಯಾವತ್ತೂ ಸಾಗರೋಲ್ಲಂಘನ ಮಾಡಿಲ್ಲ. ಹಲವಾರು ಬಾರಿ ವಿದೇಶಗಳಿಂದ ಬಂದ ಆಹ್ವಾನವನ್ನು ತಿರಸ್ಕರಿಸಿದ್ದಾರೆ.

ಇನ್ನು ಅಪೋಲೋ ಆಸ್ಪತ್ರೆ ಹೊರಭಾಗದಲ್ಲಿ ಅನೇಕರು ಪೂಜೆ, ಪುನಸ್ಕಾರಗಳನ್ನು ಮಾಡುತ್ತಾ ಜಯಲಲಿತಾ ಅವರ ಆರೋಗ್ಯ ಚೇತರಿಕೆಗಾಗಿ ಪ್ರಾರ್ಥಿಸುತ್ತಿದ್ದಾರೆ. ಆದರೆ ಗ್ರಹಗಳ ಸ್ಥಿತಿ ಕೇಳಿಕೊಂಡು, ಶುಭ ದಿನದ ಬಗ್ಗೆ ವಿಚಾರಿಸಿದ ನಂತರವಷ್ಟೇ ಡಿಸ್ ಚಾರ್ಜ್ ಎನ್ನುತ್ತಿವೆ ಮೂಲಗಳು.