ನವದೆಹಲಿ: ರಿಲಯನ್ಸ್ 4ಜಿ ಲೈಫ್(4G Lyf) ಫೋನ್ ಸ್ಫೋಟಗೊಂಡಿದೆ ಎಂದು ವ್ಯಕ್ತಿಯೊರ್ವ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಸಮೇತ ಪೋಸ್ಟ್ ಮಾಡಿದ್ದಾನೆ.
ರಿಲಯನ್ಸ್ ಜಿಯೋ 4G Lyf ಫೋನ್ ಬಳಸುತ್ತಿದ್ದಾಗ ಸ್ಫೋಟಗೊಂಡಿದೆ ಎಂದು ತನ್ವೀರ್ ಸಾದೀಕ್ ಸಾಮಾಜಿಕ ಜಾಲತಾಣ ಟ್ವೀಟರ್ ನಲ್ಲಿ ಫೋಟೋ ಸಮೇತ ಟ್ವೀಟ್ ಮಾಡಿದ್ದು, ಅದರಡಿ ಜಿಯೋ ಸ್ಮಾರ್ಟ್ ಫೋನ್ ಬಳಸುತ್ತಿರುವವರೂ ಬಹಳ ಜಾಗೃತವಾಗಿರಿ ಎಂದು ಸೂಚಿಸಿದ್ದಾನೆ.
ರಿಲಾಯನ್ಸ್ ಜಿಯೋ ಸ್ಮಾರ್ಟ್ ಫೋನ್ ನ ಸ್ಪೆಷಲ್ ಎಡಿಷನ್ ಈ ಹೊಸ ಸ್ಮಾರ್ಟ್ ಫೋನ್ ಬೆಲೆ 13,399 ರೂಪಾಯಿ. ಕಸ್ಟಮ್ ವಿಡಿಯೋ ಪ್ಲೇಯರ್ ಈ ಫೋನಿನ ವಿಶೇಷತೆಯಾಗಿದೆ. ಜಿಯೋ ಸಿಮ್ ಗೆ ಹೆಚ್ಚಾಗುತ್ತಿರುವ ಬೇಡಿಕೆ ಗಮನಿಸಿ ಈ ಫೋನ್ ಬಿಡುಗಡೆ ಮಾಡಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ರಿಲಯನ್ಸ್ ಸಂಸ್ಥೆಯ ವಕ್ತಾರರೊಬ್ಬರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಗ್ರಾಹಕರ ಸುರಕ್ಷತೆ ನಮ್ಮ ಪ್ರಮುಖ ಆದ್ಯತೆ. ಹೀಗಾಗಿ ಪ್ರಕರಣದ ತನಿಖೆ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಇತ್ತೀಚೆಗಷ್ಟೇ ಖ್ಯಾತ ಮೊಬೈಲ್ ತಯಾರಿಕಾ ಸಂಸ್ಥೆ ಸ್ಯಾಮ್ ಸಂಗ್ ಕೂಡ ಇದೇ ಬ್ಯಾಟರಿಯಲ್ಲಿ ತಾಂತ್ರಿಕ ದೋಷದಿಂದಾಗಿ ತನ್ನ ನೋಟ್ 7 ಮೊಬೈಲ್ ಗಳನ್ನು ಹಿಂಪಡೆಯಲು ಮುಂದಾಗಿತ್ತು. ಇದರ ಬೆನ್ನಲ್ಲೇ ರಿಲಯನ್ಸ್ ಜಿಯೋ ಮೊಬೈಲ್ ಕೂಡ ಸ್ಫೋಟವಾಗಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ.