ಆಧುನಿಕ ಕನ್ನಡ ಕವಿಗಳು

0
1627

ಮಾನ ಸಮ್ಮಾನಗಳನ್ನು ಸಂಪ್ರತಿಗೊಳಿಸುವ ಮಾನವೀಯ ಮೌಲ್ಯಗಳು ಆಧುನಿಕ ಕನ್ನಡ ಸಾಹಿತ್ಯದಲ್ಲಿ ಹೇರಳವಾಗಿ ದೊರೆಯುತ್ತವೆ. ಅನೇಕ ಕವಿಗಳು ಕಷ್ಟಕರ ಜೀವನದಲ್ಲಿ ಸುಖ-ಸಂತೋಷವನ್ನು ಕಾಣುವುದರ ಮುಖಾಂತರ ಮಾನವೀಯ ಮೌಲ್ಯಗಳ ಸುಧೆಯನ್ನು ಹರಿಸಿರುವುದು ಆಹ್ಲಾದಕರ. ಅಭಿಮಾನಕ್ಕಿಂತ ಸದಭಿಮಾನ ದೊಡ್ಡದು, ಸದಭಿಮಾನಕ್ಕಿಂತ ಸ್ವಾಭಿಮಾನ ದೊಡ್ಡದು, ಸ್ವಾಭಿಮಾನಕ್ಕಿಂತ ಸಮಾಧಾನ ದೊಡ್ಡದು, ಸಮಾಧಾನಕ್ಕಿಂತ ನಾಡಾಭಿಮಾನ ದೊಡ್ಡದು, ನಾಡಾಭಿಮಾನಕ್ಕಿಂತ ದೇಶಾಭಿಮಾನ ದೊಡ್ಡದು, ಇವೆಲ್ಲವುಗಳಿಗೆ ಕಳಶಪ್ರಾಯವಾದ ಮಣಿ ಮುತ್ತು ರತ್ನಗಳೇ ಮಾನವೀಯ ಮೌಲ್ಯಗಳು. ಅಂತಹ ಮಾನವೀಯ ಮೌಲ್ಯಗಳ ಗಣಿಯಾದ ಭಾರತಕ್ಕೆ ತೆರಳಿ ಮನುಷ್ಯರಾಗಿ ಬನ್ನಿ ಎಂಬ ಸಾಕ್ರಟೀಸ ಮಹಾಶಯರ ಸಾರಸತ್ವದ ನುಡಿಗೆ ದರ್ಪಣ ಹಿಡಿಯುವ ಕಾರ್ಯ ಆಧುನಿಕ ಕನ್ನಡ ಕವಿಗಳಲ್ಲಿ ಕಂಡುಬರುತ್ತದೆ ಎಂಬುದಂತೂ ದಿಟ.

ಹೊಸಗನ್ನಡ ಅಥವಾ ಆಧುನಿಕ ಕನ್ನಡ ಜನತೆಯಲ್ಲಿನ ಮೌಢ್ಯಗಳನ್ನು ದೂರೀಕರಿಸಿ ಮೌಲ್ಯಗಳ ಶೇಖರಣೆಯತ್ತ ಗಮನ ತೋರುತ್ತದೆ ಮಾತ್ರವಲ್ಲ, ಟೊಳ್ಳು ಆಚರಣೆಗಳನ್ನು, ಸುಳ್ಳು ನಂಬಿಕೆಗಳನ್ನು, ಕಳ್ಳ ಕದೀಮರ ವಾಮಾಚಾರಗಳನ್ನು, ಜಾತಿಡೊಂಬರ ಮತಿ ಹೀನತೆಯನ್ನು ಧಿಕ್ಕರಿಸಿ, ಮಹಾ ಮಾನವೀಯ ಚಿಂತನೆಯತ್ತ ದಾಪುಗಾಲು ತೋರುತ್ತದೆ. ಜನತೆಯ ಆಗುಹೋಗುಗಳನ್ನು ಗಮನದಲ್ಲಿ-ರಿಸಿಕೊಂಡು, ಅವರ ಕಷ್ಟ ಜೀವನಕ್ಕೆ ಸ್ಪಷ್ಟ ತಿರುವನ್ನು ನೀಡುವ ನಿಟ್ಟಿನಲ್ಲಿ ತಮ್ಮ ಕಾವ್ಯಗಳನ್ನು ರಚಿಸುವುದರ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ. ಬಿ.ಎಂ.ಶ್ರೀ.ಯವರಿಂದ ಹಿಡಿದು ಇಲ್ಲಿಯವರೆಗೆ (ಅಡಿಗರು, ಕುವೆಂಪು, ಕಾರಂತರು, ಸನದಿ, ಸಣಕಲ್ ಅನೇಕರು.) ಕಾವ್ಯ ರಚಿಸಿರುವವರು ಸಮಾಜ್ಯೋದ್ಧಾರಕ ಮಾನವೀಯ ತತ್ವದ ಮೇಲೆ ತಮ್ಮ ಸಾಹಿತ್ಯ ನೆಟ್ಟಿದ್ದಾರೆ. ಜನತೆಯ ಅಭಿವೃದ್ಧಿಯೇ ತಮ್ಮ ಶ್ರೇಯಸ್ಸೆಂದು ಬಗೆದು ಜನರಲ್ಲಿ ಬದಲಾವಣೆಯ ಜೊತೆಗೆ ಪರಿವರ್ತನೆಯನ್ನು ತರುವುದರಲ್ಲಿ ಈ ಕವಿಗಳು ಪ್ರಭಾವ ಬೀರಿದ್ದಾರೆ. ಜಾತಿ ವ್ಯವಸ್ಥೆಯು ಮತಿ ಹೀನರ ಪ್ರಪಂಚವೆಂದು ಬಗೆದ ರಾಷ್ಟ್ರಕವಿ ಕುವೆಂಪುರವರು ಸಮಾನತೆಯ ಬಿರುಗಾಳಿ ಬೀಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. ಮಾನವೀಯತೆಗೆ ಕಳಂಕವನ್ನೊಡ್ಡುವ ಯಾವುದೇ ಶಾಸ್ತ್ರವಾಗಲಿ, ಪುರಾಣವಾಗಲಿ ಜನ್ಮ ತಳೆದಿದ್ದರೆ, ಅದು ಸಮ್ಮತವಲ್ಲ ಎಂಬುದೇ ಅವರ ಅಭಿಪ್ರಾಯ.

ಸಮಗ್ರ ಮಾನವ ಕುಲಕ್ಕೆ ಸಭ್ಯತೆಯ ಪಾಠ ಹೇಳುವ ಪರಿ ಡಾ.ಬಿ.ಎ. ಸನದಿಯವರ ಕವಿತೆಗಳಲ್ಲಿ ಕಂಡು ಬರುತ್ತದೆ. ಬಡತನದಲ್ಲಿ ಸಾಕಷ್ಟು ನೊಂದು ಬೆಂದು ಸಮಾಜದಲ್ಲಿರುವ ಅನಾಗರಿಕ ಜನರ ಚುಚ್ಚು ನುಡಿಗಳಿಗೆ ಬೇಸತ್ತ ಈಶ್ವರ ಸಣಕಲ್‍ರವರು ಜಗತ್ತಿನ ಸಂತಸದಲ್ಲಿ ತಮ್ಮ ನೋವನ್ನು ಮರೆಯುವ ಸಾಹಸಕ್ಕೆ ಮುಂದಾಗುತ್ತಾರೆ ಮಾತ್ರವಲ್ಲ, ಆ ವಿಚಾರವನ್ನು ಸತ್ತು ಸ್ವರ್ಗಸ್ಥರಾದ ಅವರ ತಾಯಿಯನ್ನು ಹೂತು ಹಾಕಿರುವ ಸ್ಮಶಾನದಲ್ಲಿನ ಗೋರಿ ಕಟ್ಟೆಯ ಮೇಲೆ ಕುಳಿತು ಬರೆಯುತ್ತಾರೆ. ಮಾನವೀಯತೆಯ ಚಿಂತನೆಗಳನ್ನು ಮೆರೆದ ಅನೇಕ ಮಹಾನ್ ಕವಿಗಳು ನಮ್ಮ ಸಾಹಿತ್ಯ ಚರಿತ್ರೆ ಯಲ್ಲಿ ಹೇರಳವಾಗಿ ದೊರೆಯುತ್ತಾರೆ. ಆ ಎಲ್ಲ ಕವಿಗಳು ಉಲ್ಲೇಖಿಸಿರುವ ಮಾನವೀಯ ಅಂಶಗಳನ್ನು ಕೆಣಕುತ್ತ ಹೋದರೆ ಆಕಾಶವೇ ದಿಗ್ಧರ್ಶಿಸುತ್ತದೆ.