ಬಿಗ್ ಬಾಸ್ ತಂದ ಧರ್ಮಸಂಕಟ; ಸ್ಪರ್ಧಿಗಳ ಕಣ್ಣಲ್ಲಿ ಹರಿದ ಕಂಬನಿ

0
805

ಬಿಗ್ ಬಾಸ್ ಶುರುವಾಗಿ ಈಗಾಗ್ಲೇ ಎರಡು ತಿಂಗಳು ಕಳೆದಿದೆ. ಮನೆ ಮಂದಿ, ಪ್ರೀತಿ ಪಾತ್ರರನ್ನೆಲ್ಲಾ ಬಿಟ್ಟು ಅವರ ನೆನಪಿನಲ್ಲಿ ಸ್ಪರ್ಧಿಗಳು ದಿನ ಕಳೆಯುತ್ತಿದ್ದಾರೆ. ಈ ಸಂದರ್ಭದಲ್ಲಿ ಬಿಗ್ ಬಾಸ್ ನೀಡಿದ ಟಾಸ್ಕ್ ಮನೆ ಸದಸ್ಯರ ಕಣ್ಣಾಲಿಗಳನ್ನು ಒದ್ದೆ ಮಾಡಿತ್ತು.

ಬಿಗ್‌ ಬಾಸ್‌ 61ನೇ ದಿನದ ಆಟದಲ್ಲಿ ಸ್ಪರ್ಧಿಗಳು ತಮ್ಮ ಒಳ್ಳೆಯತನದಿಂದಲೇ ನೋಡುಗರ ಕಣ್ಣಂಚು ಒದ್ದೆಯಾಗುವಂತೆ ಮಾಡಿದರು. ಮಾನವೀಯತೆ, ಪ್ರೀತಿಯಲ್ಲಿ ಒಬ್ಬರು ಮತ್ತೊಬ್ಬರನ್ನು ಮೀರಿಸುವಷ್ಟು ಪ್ರಬುದ್ಧತೆಯಿಂದ ವರ್ತಿಸಿ ವೀಕ್ಷಕರ ಮೆಚ್ಚುಗೆ ಗಳಿಸಿದರು.

ಸ್ಪರ್ಧಿಗಳಿಗೆ ಅವರ ಮನೆಯವರಿಂದ ಪ್ರೀತಿಯ ಸಂದೇಶಗಳನ್ನು ಹೊತ್ತು ತಂದ ಪತ್ರವನ್ನು ಕನ್ವೆಷನ್‌ ರೂಂನಲ್ಲಿ ಇಡಲಾಗಿತ್ತು. ಈ ಪತ್ರಗಳನ್ನು ಎಲ್ಲರೂ ಓದುವಂತಿರಲಿಲ್ಲ. ಬಿಗ್‌ಬಾಸ್ ನೀಡಿದ ಟಾಸ್ಕ್ ಅನ್ವಯ ಕೇವಲ 5 ಸ್ಪರ್ಧಿಗಳು ಮಾತ್ರ ಓದುವಂತಿತ್ತು. ಕನ್ವೆಷನ್‌ ರೂಂಗೆ ಇಬ್ಬರು ಸ್ಪರ್ಧಿಗಳನ್ನು ಕರೆಯುತ್ತಿದ್ದ ಬಿಗ್‌ ಬಾಸ್‌ ತಮ್ಮದಲ್ಲದ ಒಂದು ಪತ್ರವನ್ನು ಎತ್ತಿ ಗಾರ್ಡನ್‌ ಏರಿಯಾದಲ್ಲಿ ಉರಿಯುತ್ತಿರುವ ಬೆಂಕಿಗೆ ಹಾಕುವಂತೆ ಆಜ್ಞಾಪಿಸಿತು.

ಜೆಕೆ-ಜಗನ್‌, ನಿವೇದಿತಾ ಅವರ ಪತ್ರವನ್ನು ಆಯ್ದು ಬೆಂಕಿಯಲ್ಲಿ ಹಾಕಿದ್ರು. ತಮ್ಮ ಆಯ್ಕೆಯ ಕುರಿತು ಕಾರಣ ಹೇಳುವ ವೇಳೆ ನಿವೇದಿತಾ ಭಾವುಕರಾಗಿ ಕಣ್ಣೀರು ಹಾಕಿದ್ರು. ಹೀಗೆ ಇದು ಮುಂದೆವರೆಯಿತು ಬಳಿಕ ಸಮೀರ್‌, ರಿಯಾಜ್, ಅನುಪಮಾ ಸೇರಿದಂತೆ ಎಲ್ಲರೂ ಕೂಡ ಕಣ್ಣೀರು ಸುರಿಸಿದ್ರು. ಕೊನೆಯದಾಗಿ ಚಂದನ್‌, ಅನುಪಮಾ, ರಿಯಾಜ್‌, ದಿವಾಕರ್ ಹಾಗೂ ಜಯಶ್ರೀನಿವಾಸ್‌ ಅವರಿಗೆ ತಮ್ಮ ಪತ್ರಗಳನ್ನು ಓದುವ ಅವಕಾಶ ಸಿಕ್ಕಿತ್ತು. ಈ ಐವರು ಮನೆಯಲ್ಲಿ ಎಲ್ಲ ಸದಸ್ಯರ ಎದುರು ತಮ್ಮ ಪತ್ರಗಳನ್ನು ಓದಿದ್ರು. ಈ ವೇಳೆ ಚಂದನ್ ಹಾಗೂ ಅನುಪಮಾ ಕೂಡಾ ಭಾವುಕರಾಗಿದ್ರು.

ಇನ್ನೊಬ್ಬರಿಗೆ ಬಂದ ಪ್ರೀತಿಯ ಪತ್ರಗಳನ್ನು ಸುಟ್ಟು ಹಾಕುವಾಗ ಸ್ಪರ್ಧಿಗಳು ನಾವು ಏಕೆ ಅವರ ಪತ್ರವನ್ನೇ ಸುಟ್ಟು ಹಾಕುತ್ತಿದ್ದೇವೆ ಎಂದು ಹೇಳುತ್ತಿದ್ದ ಕಾರಣಗಳಲ್ಲಿ ಯಾವುದೇ ಕಪಟ, ಅಸೂಯೆ ಇರಲಿಲ್ಲ.

ತಮ್ಮ ಮನೆಯವರ ಪ್ರೀತಿಯ ಸಂದೇಶಗಳು ಬೆಂಕಿಯ ಜ್ವಾಲೆಗೆ ಭಸ್ಮವಾಗುತ್ತಿರುವಾಗ ಸದಸ್ಯರ ಮನ ಭಾರವಾಗಿತ್ತು. ಇನ್ನು ಪತ್ರ ಸಿಕ್ಕಿದವರು ಪತ್ರ ಕಳೆದುಕೊಂಡವರ ಮುಂದೆ ಓದಲಾರದೆ ಧರ್ಮ ಸಂಕಟಕ್ಕೆ ಒಳಗಾದರು.

ಹಸಿವಿನಿಂದ ಅಳುತ್ತಿರುವಾಗ ಆತನ ಮುಂದೆ ಕುಳಿತು ಮೃಷ್ಟಾನ್ನ ತಿನ್ನಲು ಹೇಗೆ ಸಾಧ್ಯವಾಗುತ್ತೆ? ಹಾಗಾಗಿತ್ತು ಬಿಗ್‌ಬಾಸ್‌ ಮನೆಯವರ ಸ್ಥಿತಿ.