ಅಕ್ಷರ ರಾಮಾಯಣ ಏನಿದೆ ಅಂತಾ ಗೊತ್ತಾ..? ಓದಿ ಒಮ್ಮೆ …!

0
1130

ಅಕ್ಷರ ರಾಮಾಯಣ

ಅಯೋಧ್ಯೆಯರಸನು ದಶರಥನು
ಆತ್ಮಜರು ಬೇಕೆಂಬ ಬಯಕೆಯ ಹೊತ್ತಿಹನು
ಇಷ್ಟಿಯಮಾಡಿದ ಜಗಮೆಚ್ಚಿದ ರೀತಿಯಲಿ
ಈಶ್ವರ ಕೃಪೆಯಲಿ ದೊರೆಯಿತು ಪಾಯಸವು
ಉದಾತ್ತ ದೊರೆಯಿತ್ತನು ಮೂವರು ಸತಿಯರಿಗೆ
ಊಟವ ಮಾಡಲು ಪಡೆದರು ನಾಲ್ವರನು
ಋಷಿವರ ವಿಶ್ವಾಮಿತ್ರರು ಕೇಳಿದರು ಕಳಿಸು
ೠಕ್ಷ ಜನರನು ಶಿಕ್ಷಿಸಲು ರಾಮನನು
ಎಸುಳೆಗಳೊಂದಿಗೆ ದಂಡಕಾರಣ್ಯಕೆ
ಏಳಿಗೆ ಋಷಿಜನಕೆಂದು ಜತೆಯಲಿ ಲಕ್ಷ್ಮಣನು
ಒಮ್ಮೆಲೆ ಖರದೂಷಣರ ಬಡಿದು ಜನಕಪುರಕೆ
ಓಲಗದಲಿ ರಾಮನು ಶಿವಧನುವ ಮುರಿದು
ಔತ್ಸುಕತೆಯಲಿ ಸೀತಾಮಾಲೆಗೆ ಕೊರಳೊಡ್ಡಿ
ಅಂಬಾ ಸೀತಾ ಸ್ವಯಂವರ ಸಂಭ್ರಮವು
ಅಃಅಃ ಶ್ರೀರಾಮ ಸೀತಾ ವಿವಾಹ ವೈಭವವು

ಕಟುವರ ಬೇಡಿದಳು ಕೈಕೇಯಿ ದಶರಥನ
ಖತಿಗೊಳ್ಳದೆ ಸೀತಾಲಕ್ಷ್ಮಣರೊಡನೆ
ಗಮನ ಕಾನನಕೆ ಉಟ್ಟು ನಾರುಮಡಿ
ಘಟಸಂಭವನಿತ್ತನು ಹರಿಚಾಪವನು
ಙ ಙ ಅನ್ನುತ ಪ್ರಾಣಿಗಳೊಡನಾಡಿದಳು ಸೀತೆ

ಚಳಿಗಾಳಿ ಉರಿಬಿಸಿಲ ಸಹಿಸುತ ರಾಘವನು
ಛವಿಗುಂದದೆ ಕಾಡಲಿ ಕಾಲವ ಕಳೆಯುತಲಿರಲು
ಜಯಜಯ ರಾಘವ ಎನ್ನುತ ಭರತನು ಬಂದು
ಝಗಮಗಿಸುವ ರಾಮಪಾದುಕೆಗಳ ಪಡೆಯಲು
ಜ್ಞಾನಿವರೇಣ್ಯ ರಘುಕುಲತಿಲಕ ತಮ್ಮನ ತಬ್ಬಿದನು

ಟವುಳಿಯಾಡದೆ ರಾಜ್ಯವ ನೀಯುವೆನು
ಠಕ್ಕೆಯ ಹಾರಿಸುವೆ ಎನೆ ರಾಮನು ಖಂಡಿಸಿದ
ಡನಿಯುಳಿಯಲು ಪಾದುಕೆಗಳ ಕೈಗೊಂಡು
ಢಕ್ಕೆಯ ಬಾರಿಸುವನೆ ಭರತನು
ಣಣ ಣಣ ಶಬ್ದವು ಎಲ್ಲೆಡೆ ಕೇಳಿಸಿತು

ತರುಣಿಯ ಮಾತನು ಲೆಕ್ಕಿಸಿ ರಾಘವ
ಥಳಥಳಿಪ ಜಿಂಕೆಯ ಹಿಂದೋಡಿದನು
ದನಿರಾಮದೆನುತ ಅತ್ತ ತೆರಳಿದ ಲಕ್ಷ್ಮಣನು
ಧಣಿಗಳಾಶ್ರಮ ಸೇರುವ ಮೊದಲೆ
ನಲ್ಲೆಯನಪಹರಿಸಿದ ದಶಶಿರ ರಾವಣನು

ಪತ್ನಿಯ ಕದ್ದ ಲಂಕಾಪತಿ ಕೊಂದು ಸೀತಾ
ಫಲ ಪಡೆಯಲು ಸುಗ್ರೀವ ಗೆಳೆತನ ರಾಮನಿಗೆ
ಬಲಿಷ್ಟ ಜಟಾಯುವಿಂದ ಉಪಕೃತ ರಾಘವ
ಭವಭಾದೆಯ ಕಳೆಯಲು ಹರಸಿದನು
ಮರ್ಕಟವೀರ ಹನುಮನ ಮೈತ್ರಿಯ ಬೆಳೆಸಿದನು

ಯಮಪುರಿಗಟ್ಟಿದ ರಾಮನು ವಾಲಿಯನು
ರಮಣೀಯ ವಾರ್ತೆ ತಂದನು ಮಾರುತಿಯು
ಲವಣಾಂಬುಧಿಗೈ ತಂದರು ವಾನರರು
ವತ್ಸಲನಾಶ್ರಯವಿತ್ತು ವಿಭೀಷಣನಿಗೆ
ಶರಧಿಯ ದಾಟಿ ಯುದ್ದವ ಹೂಡಿದರು
ಷಡ್ಗುಣ ಸಹಿತನು ರಾವಣನ ಕೊಂದು
ಸತಿಯೊಡಗೂಡಿ ಅಯೋಧ್ಯೆಗೆ ಹೊರಡಲು
ಹನುಮನು ಭರತಗೆ ವಿಷಯವ ತಿಳುಹಿದನು
ಳಕ್ಷ್ಮೀವಲ್ಲಭನು ಚಂದದಿ ರಾಜ್ಯವನಾಳಿದನು
ಕ್ಷಮಾಪೂರ್ಣ ರಾಮಚಂದ್ರನು ಕಾಪಾಡಲಿ ಎಲ್ಲರನು.