ಎರಡು ಸಾವಿನ ನಂತರ ಎಚ್ಚೆತ್ತುಕೊಂಡ ಕನ್ನಡ ಚಿತ್ರರಂಗ…

0
1023

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಕೆಲವು ಹೊಸ ನಿಯಮಗಳನ್ನ ಜಾರಿ ತರಲು ನಿರ್ಮಾಪಕರು ಹಾಗೂ ಕಲಾವಿದರ ಸಂಘ ನಿರ್ಧರಿಸಿದೆ. ಸಾ.ರಾ ಗೋವಿಂದು ಹಾಗೂ ಕಲಾವಿದರ ಸಂಘದ ಕಾರ್ಯದರ್ಶಿ ರಾಕ್ ಲೈನ್ ವೆಂಕಟೇಶ್ ಇಂದು ಜಂಟಿ ಸುದ್ದಿ ಗೋಷ್ಠಿ ನಡೆಸಿ ಕೆಲವು ಅಂಶಗಳನ್ನ ಪ್ರಸ್ತಾಪಿಸಿದರು.

‘ಜೀವ ವಿಮೆ’ ಕಡ್ಡಾಯ

ಚಿತ್ರೀಕರಣದಲ್ಲಿ ಪಾಲ್ಗೊಂಡವರಿಗೆ ನಿರ್ಮಾಪಕ ಜೀವ ವಿಮೆ ಮಾಡಿಸಿಕೊಡಬೇಕು.ಸಿನಿಮಾ ಅಂದ್ಮೇಲೆ ನೂರಾರು ಸಂಖ್ಯೆಯಲ್ಲಿ ಕಾರ್ಮಿಕರು ಕೆಲಸ ಮಾಡುತ್ತಾರೆ. ಅವರಿಗೆ ಜೀವ ವಿಮೆ ಅಗತ್ಯವಾಗಿರುತ್ತದೆ. ಮುಂದೆ ಚಿತ್ರೀಕರಣದಲ್ಲಿ ಭಾಗವಹಿಸುವ ಪ್ರತಿಯೊಬ್ಬರು ಜೀವ ವಿಮೆ ಮಾಡಿಸಿಕೊಳ್ಳಬೇಕು.

ಇಬ್ಬರು ಖಳನಟರ ಕುಟುಂಬಕ್ಕೆ ‘ನಿಧಿ ಸಂಗ್ರಹ’ :

ಈಗ ವಾಣಿಜ್ಯ ಮಂಡಳಿಯ ನೇತೃತ್ವದಲ್ಲಿ ‘ನಿಧಿ ಸಂಗ್ರಹ’ ಮಾಡಲು ನಿರ್ಧರಿಸಲಾಗಿದ್ದು, ‘ಮಾಸ್ತಿ ಗುಡಿ’ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣದಲ್ಲಿ ಸಾವಿಗೀಡಾದ ಅನಿಲ್ ಹಾಗೂ ಉದಯ್ ಕುಟುಂಬಗಳಿಗೆ ಚಿತ್ರರಂಗ ನೆರವು ನೀಡಲಿದೆ. ಈಗಾಗಲೇ ಹಲವು ನಟ, ನಟಿಯರು ಸಹಾಯ ಮಾಡಿದ್ದಾರೆ. ಸಂಗ್ರಹವಾದ ಹಣವನ್ನ ಅವರಿಬ್ಬರ ಕುಟುಂಬಕ್ಕೆ ನೀಡಲಾಗುವುದು.

ಎಲ್ಲಾ ವಿಚಾರಗಳಿಗೂ ನಿರ್ಮಾಪಕರನ್ನು ಹೊಣೆಗಾರರನ್ನಾಗಿಸುವುದು ತಪ್ಪು :

ಹೌದು, ಚಿತ್ರ ನಿರ್ಮಾಣದಲ್ಲಿ ಹಲವರು ಭಾಗಿಯಾಗುತ್ತಾರೆ. ಚಿತ್ರವನ್ನ ಕೇವಲ ನಿರ್ದೇಶಕ ಮಾತ್ರ ನಿರ್ದೇಶನ ಮಾಡಲ್ಲ, ಸಾಹಸ ದೃಶ್ಯವನ್ನ ನಿರ್ದೇಶನ ಮಾಡುವುದಕ್ಕೆ ಸಾಹಸ ನಿರ್ದೇಶಕ, ನೃತ್ಯವನ್ನ ನಿರ್ದೇಶನ ಮಾಡಲು ನೃತ್ಯ ಸಂಯೋಜಕರು ಕೆಲಸ ಮಾಡುತ್ತಾರೆ. ಇಂತಹ ದೃಶ್ಯಗಳಲ್ಲಿ ಏನಾದರೂ ಅನಾಹುತ ಸಂಭವಿಸಿದರೆ ಅವರೇ ಜವಾಬ್ದಾರರಾಗಿರುತ್ತಾರೆ. ಚಿತ್ರ ನಿರ್ಮಾಣ ಎನ್ನುವುದು ಕೇವಲ ಒಬ್ಬರ ಭಾಗವಲ್ಲ.

ಅಂಬರೀಶ್ ನೇತೃತ್ವದಲ್ಲಿ ಸಭೆ :

ಅಂಬರೀಶ್ ಅವರ ಜೊತೆ ಚರ್ಚಿಸಿ ಅಂತಿಮ ರೂಪುರೇಷೆಗಳನ್ನ ಜಾರಿ ಮಾಡಲು ತೀರ್ಮಾನಿಸಲಾಗಿದೆ. ಕಲಾವಿದರ ಸಂಘದ ಅಧ್ಯಕ್ಷ, ಹಿರಿಯ ನಟ ಅಂಬರೀಶ್ ಅವರ ನೇತೃತ್ವದಲ್ಲಿ ಈ ಎಲ್ಲಾ ಅಂಶಗಳಿಗೆ ಸಂಬಂಧಿಸಿದಂತೆ ಚರ್ಚೆ ಮಾಡಲಾಗುವುದು.