ಮರಾಠ ಅಭಿವೃದ್ಧಿ ನಿಗಮ ರಚನೆ ಖಂಡನೆ: ಕರವೇ ನಾರಾಯಣ ಗೌಡ ವಶಕ್ಕೆ ಪಡೆದ ಪೊಲೀಸರು

0
109

ಬೆಂಗಳೂರು: ಮರಾಠ ಅಭಿವೃದ್ಧಿ ನಿಗಮ ರಚನೆ ವಿರೋಧಿಸಿ ವಿವಿಧ ಕನ್ನಡಪರ ಸಂಘಟನೆಗಳು ಇಂದು ರಾಜ್ಯದ ವಿವಿಧ ಮೂಲೆಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆ ಕಾವೇರಿದೆ. ಕನ್ನಡ ಪರ ಸಂಘಟನೆಗಳು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸುತ್ತಿವೆ.

ಬೆಂಗಳೂರಿನ ಟೌನ್ಹಾಲ್ ಬಳಿ ಪ್ರತಿಭಟನೆಗೆ ಇಳಿದಿದ್ದ ವಿವಿಧ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕರವೇ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಸರ್ಕಾರದ ಎಚ್ಚರಿಕೆಗೂ ಮಣಿಯದ ಕನ್ನಡ ಪರ ಸಂಘಟನೆಗಳು ತಮ್ಮ ಹೋರಾಟ ಮುಂದುವರೆಸಿವೆ. ಕರವೇ ನಾರಾಯಣ ಗೌಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಗರದ ಟೌನ್’ಹಾಲ್ ಮುಂದೆ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಬೆಂಗಳೂರಿನ ಕೆಆರ್.ಪುರಂನ ಪೈ ಲೈಔಟ್ ನಲ್ಲಿ ಬಿಎಂಟಿಸಿ ಬಸ್’ಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿರುವುದು ವರದಿಯಾಗಿದೆ.

ಇದಲ್ಲದೆ ಹೊಸೂರು ರಸ್ತೆಯ ಹಳೇ ಚಂದಾಪುರ ಬಳಿ ಬಿಎಂಟಿಸಿ ಬಸ್ ಮೇಲೂ ಕಲ್ಲೂ ತೂರಾಟ ನಡೆದಿರುವುದಾಗಿ ವರದಿಗಳು ತಿಳಿಸಿವೆ. ಇನ್ನು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕರ್ನಾಟಕ ಬಂದ್’ಗೆ ನೀರಸ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ಮಂಗಳೂರಿನಲ್ಲಿ ಬಂದ್’ಗೆ ಯಾವುದೇ ರೀತಿಯ ಬಿಸಿ ತಟ್ಟಿಲ್ಲ. ತಮಿಳುನಾಡು ಗಡಿ ಆನೇಕಲ್ ನಲ್ಲಿ ಕರ್ನಾಟಕ ಬಂದ್’ಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು, ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ಆರಂಭಿಸಿವೆ.

ಗಡಿ ಭಾಗದಲ್ಲಿ ಎಂಇಎಶ್ ಪುಂಡರು ಕನ್ನಡಿಗರನ್ನು ಪದೇ ಪದೇ ಕೆಣಕುತ್ತಿರುವ ಬೆನ್ನಿನಲ್ಲೇ ಸರ್ಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿರುವುದು ಕನ್ನಡಪರ ಸಂಘಟನೆಗಳ ಸಿಟ್ಟು ನೆತ್ತಿಗೇರುವಂತೆ ಮಾಡಿದೆ.

ಕರವೇ ನಾರಾಯಣಗೌಡ ಬಣ, ಕರವೇ ಪ್ರವೀಣ್ ಶೆಟ್ಟಿ ಬಣ, ರಾಜ್ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು, ಮುಖ್ಯಮಂತ್ರಿ ಚಂದ್ರು, ಬಿ.ಟಿ.ಲಲಿತಾನಾಯಕ್ ಸೇರಿ ಹಲವು ಸಾಹಿತಿಗಳು ಬಂದ್ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.