ಮತದಾನೋತ್ತರ ಸಮೀಕ್ಷೆಯಲ್ಲಿ ಅರಳಿದ ಕಮಲ; ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗುತ್ತಾ..?

0
901

ಮತದಾನ ಮುಕ್ತಾಯವಾದ ಬೆನ್ನಲ್ಲೇ ಶನಿವಾರ ವಿವಿಧ ಮಾಧ್ಯಮಗಳು ನಡೆಸಿದ ಮತದಾನೋತ್ತರ ಸಮೀಕ್ಷೆ ಪ್ರಕಟಗೊಂಡಿದ್ದು, ಮತದಾರ ಈ ಬಾರಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ನೀಡದೇ ಅತಂತ್ರ ಸ್ಥಿತಿ ನಿರ್ಮಾಣ ಮಾಡಿದ್ದಾನೆ.

ರಾಷ್ಟ್ರೀಯ ಸುದ್ದಿವಾಹಿನಿಗಳಾದ ರಿಪಬ್ಲಿಕ್‌ ಟಿವಿ, ಟೈಮ್ಸ್‌ –ಚಾಣಕ್ಯ, ಎನ್‌ಡಿಟಿವಿ ಮತ್ತು ಸಿ–ವೋಟರ್‌ ಸಂಸ್ಥೆ ನಡೆಸಿದ ಸಮೀಕ್ಷೆಗಳು ಬಿಜೆಪಿಗೆ 100–120 ಸ್ಥಾನ ನೀಡಿವೆ. ಮತದಾನೋತ್ತರ ಸಮೀಕ್ಷೆಗಳು ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಭವಿಷ್ಯ ನುಡಿದಿವೆ.

ಇಂಡಿಯಾ ಟುಡೆ ಟಿ.ವಿ, ಆಕ್ಸಿಸ್‌ ಮೈ ಇಂಡಿಯಾ ಸಂಸ್ಥೆಗಳ ಸಮೀಕ್ಷೆಗಳು ಕಾಂಗ್ರೆಸ್‌ 106 ರಿಂದ 118 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಹೇಳವೆ.

ಹೆಚ್ಚಿನ ಸಮೀಕ್ಷೆಗಳು ಯಾವೊಂದು ಪಕ್ಷಕ್ಕೂ ಸ್ಪಷ್ಟ ಬಹುಮತ ನೀಡಿಲ್ಲವಾದರೂ, 26–38 ಕ್ಷೇತ್ರಗಳಲ್ಲಿ ಜಯ ಸಾಧಿಸಲಿರುವ ಜೆಡಿಎಸ್‌ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು  ಹೇಳಿವೆ.ಇನ್ನೂ ಕೆಲವು ಸಂಸ್ಥೆಗಳು ಮತ್ತು ರಾಷ್ಟ್ರೀಯ ಸುದ್ದಿವಾಹಿನಿಗಳು ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಸಮಬಲದ ಪೈಪೋಟಿ ಏರ್ಪಟ್ಟಿದೆ ಎಂದು ವಿಶ್ಲೇಷಿಸಿವೆ.

ಈ ಸಮೀಕ್ಷೆಗಳನ್ನು ಆಧರಿಸಿ ಹೇಳುವುದಾದರೆ ರಾಜ್ಯದಲ್ಲಿ ಬಿಜೆಪಿಯೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಎನ್‌ಡಿಟಿವಿ ಹೇಳಿದೆ. ಅಂದರೆ, ಇಂಡಿಯಾಟುಡೆ-ಆ್ಯಕ್ಸಿಸ್‌, ಇಂಡಿಯಾ ಟಿವಿ-ವಿಎಂಆರ್‌ ಮತ್ತು ಟೈಮ್ಸ್‌ನೌ-ವಿಎಂಆರ್‌ ಸಮೀಕ್ಷೆ ಪ್ರಕಾರ ಕಾಂಗ್ರೆಸ್‌ ಅತಿ ದೊಡ್ಡ ಪಕ್ಷವಾಗಲಿದೆ. ಹಾಗೆಯೇ, ಎಬಿಪಿ-ಸಿ-ವೋಟರ್‌, ನ್ಯೂಸ್‌ನೇಷನ್‌, ಸಿಎನ್‌ಎಕ್ಸ್‌-ನ್ಯೂಸ್‌ಎಕ್ಸ್‌, ಜನಕೀಬಾತ್‌-ರಿಪಬ್ಲಿಕ್‌, ಟುಡೇಸ್‌ ಚಾಣಕ್ಯ ಬಿಜೆಪಿ ಪಕ್ಷಕ್ಕೆ ಹೆಚ್ಚಿನ ಸ್ಥಾನ ನೀಡಿ, ರಾಜ್ಯದಲ್ಲಿ ಕಮಲ ಅರಳಲಿದೆ ಎಂದಿವೆ.

224 ಸದಸ್ಯ ಬಲದ ಕರ್ನಾಟಕ ವಿಧಾನ ಸಭೆಯಲ್ಲಿ ಅಧಿಕಾರದ ಗದ್ದುಗೆ ಏರಲು ಸರಳ ಬಹುಮತಕ್ಕಾಗಿ ಯಾವುದೇ ಒಂದು ಪಕ್ಷ 113 ಸ್ಥಾನಗಳನ್ನು ಗೆಲ್ಲಬೇಕಿದೆ. ಅದೇನೇ ಇರಲಿ, ಮೇ 15ರಂದು ಅಂತಿಮ ಫಲಿತಾಂಶ ಹೊರಬೀಳಲಿದೆ.