ಮೈತ್ರಿ ಸರ್ಕಾರದ ಪೌರಾಡಳಿತ ಸಚಿವ ಸಿ.ಎಸ್‌. ಶಿವಳ್ಳಿ ಹೃದಯಾಘಾತದಿಂದ ನಿಧನ..

0
367

ಮೈತ್ರಿ ಸರ್ಕಾರದ ಪೌರಾಡಳಿತ ಸಚಿವ ಸಿ.ಎಸ್‌ ಶಿವಳ್ಳಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸ್ನೇಹಿತ ಜೊತೆಯಲ್ಲಿ ಮಾತನಾಡುವ ಸಮಯದಲ್ಲಿ ಎದೆಯಲ್ಲಿ ನೋವು ಪ್ರಾರಂಭವಾಗಿದೆ ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು ಆದರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಇದು ರಾಜ್ಯದ ರಾಜಕೀಯದಲ್ಲಿ ತುಂಬಲಾರದ ನಷ್ಟವಾಗಿದೆ.
ಸರಳತೆಗೆ ಹೆಸರು ವಾಸಿಯಾಗಿದ್ದ ಸಚಿವ ಚನ್ನಬಸಪ್ಪ ಸತ್ಯಪ್ಪ ಶಿವಳ್ಳಿ (ಸಿಎಸ್ ಶಿವಳ್ಳಿ) ಅವರು ಬಡ ಕುಟುಂಬದಿಂದ ಬಂದವರು. ಯರಗುಪ್ಪಿಯಲ್ಲಿ ಜನಿಸಿದ ಶಿವಳ್ಳಿ ಅವರು ಪತ್ನಿ, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಅವರಿಗೆ ನಾಲ್ವರು ಸಹೋದರರು, ಮೂರು ಮಂದಿ ಸಹೋದರಿಯರು ಇದ್ದಾರೆ. ಮೂರು ದಶಕಗಳಿಂದ ರಾಜಕೀಯದಲ್ಲಿದ್ದ ಶಿವಳ್ಳಿ, ಆರು ಬಾರಿ ಸ್ಪರ್ಧೆ ಮಾಡಿ, ಮೂರು ಬಾರಿ ಗೆಲುವು ಸಾಧಿಸಿದ್ದರು. ಅದರಲ್ಲಿ ಒಮ್ಮೆ ಗೆದ್ದ ಶಾಸಕ ಸತತವಾಗಿ ಮತ್ತೆ ಆಯ್ಕೆಯಾದ ದಾಖಲೆಯೇ ಇಲ್ಲದ ಕುಂದಗೋಳ ಕ್ಷೇತ್ರದಲ್ಲಿ ಸತತ ಎರಡು ಬಾರಿ ಗೆದ್ದು ಚನ್ನಬಸಪ್ಪ ಸತ್ಯಪ್ಪ ಶಿವಳ್ಳಿ ಇತಿಹಾಸ ಸೃಷ್ಟಿಸಿದ್ದರು.

ಧಾರವಾಡದ ಕುಂದಗೋಳ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದ ಶಿವಳ್ಳಿ ಅವರು ಸಮ್ಮಿಶ್ರ ಸರ್ಕಾರದಲ್ಲಿ ಪೌರಾಡಳಿತ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದರು. ಕಳೆದ ತಿಂಗಳ ಆರಂಭದಲ್ಲಷ್ಟೇ ಅವರು ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರು. ಬಳಿಕ ಚೇತರಿಸಿಕೊಂಡು ಸರ್ಕಾರದ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು. ಫೆಬ್ರವರಿ 3ರಂದು ಹುಬ್ಬಳ್ಳಿಯ ಕರಡಿಕೊಪ್ಪ ಗ್ರಾಮದಲ್ಲಿ ಕೆಲಸ ಮುಗಿಸಿಕೊಂಡು ಮರಳುವ ಸಂದರ್ಭದಲ್ಲಿ ಅವರು ವಾಂತಿ ಮಾಡಿಕೊಂಡು ಅಸ್ವಸ್ಥರಾಗಿದ್ದರು. ಬಳಿಕ ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಹುಬ್ಬಳ್ಳಿ ಕಾಡಸಿದ್ದೇಶ್ವರ ಕಾಲೇಜಿನಲ್ಲಿ ಬಿಎ ಪದವಿ ಪಡೆದ ಶಿವಳ್ಳಿ ಆಗಲೇ ಬಂಗಾರಪ್ಪ ಅವರ ಮಾರ್ಗದರ್ಶನದಂತೆ ರಾಜಕೀಯದತ್ತ ಒಲವು ಬೆಳೆಸಿಕೊಂಡು, ವಿದ್ಯಾರ್ಥಿ ಮಟ್ಟದಲ್ಲಿ ಸಂಘಟನೆ ಆರಂಭಿಸಿದ್ದರು. 1985ರಲ್ಲಿ ಯರಗುಪ್ಪಿ ಗ್ರಾಮದಲ್ಲಿ ವರನಟ ಡಾ.ರಾಜ್‌ಕುಮಾರ್ ಅಭಿಮಾನಿ ಬಳಗ ಸ್ಥಾಪನೆ ಮಾಡಿದ್ದರು. 10 ವರ್ಷ ಶಿವಳ್ಳಿ ಅವರೇ ಬಳಗದ ಅಧ್ಯಕ್ಷರಾಗಿದ್ದರು. 1994ರಲ್ಲಿ ಬಂಗಾರಪ್ಪ ಅವರ ಕರ್ನಾಟಕ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದರು. 1994ರಲ್ಲಿ ವಿಧಾನಸಭೆ ಕಣಕ್ಕೆ ಇಳಿದು 19,700 ಮತ ಪಡೆದು ಸೋಲು ಕಂಡರು. 1999ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ 11 ಸಾವಿರ ಮತಗಳಿಂದ ಜಯ ಸಾಧಿಸಿದರು. ನಂತರ ಕಾಂಗ್ರೆಸ್‌ ಸೇರಿದ್ದ ಸಿ.ಎಸ್ ಶಿವಳ್ಳಿ 2008ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋಲು ಅನುಭವಿಸಿದರು. 2013ರಲ್ಲಿ ಮತ್ತೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲುವಿನ ನಗೆ ಬೀರಿದ್ದರು.

ಬಡವರ ಬಂಧು ಎಂದೇ ತಾಲ್ಲೂಕಿನಲ್ಲಿ ಹೆಸರುವಾಸಿ ಗಳಿಸಿದ್ದ ಶಿವಳ್ಳಿ 2018ರ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಕೇವಲ 634 ಮತಗಳ ಅಂತರದಿಂದ ಗೆಲುವು ಕಂಡು, ಮೈತ್ರಿ ಸರ್ಕಾರದಲ್ಲಿ ಪೌರಾಡಳಿತ ಸಚಿವರಾಗಿದ್ದರು. ನೆರವು ಕೇಳಿಕೊಂಡು ಬಂದವರಿಗೆ ವೈಯಕ್ತಿಕ ಸಹಾಯ ಮಾಡುತ್ತಿದ್ದ ಶಿವಳ್ಳಿ, ಬಡವರಿಗೆ ಆಶ್ರಯ ಮನೆ, ಕುಡಿಯುವ ನೀರಿನ ವ್ಯವಸ್ಥೆ, ಶುದ್ಧ ನೀರಿನ ಘಟಕ, ರಸ್ತೆ ನಿರ್ಮಾಣ, ಮುಖ್ಯಮಂತ್ರಿ ಪರಿಹಾರ ನಿಧಿ ಕೊಡಿಸುವಲ್ಲಿ ಸತತ ಶ್ರಮ ವಹಿಸುತ್ತಿದ್ದರು. ಮಹದಾಯಿ ನೀರಿಗಾಗಿ ಕಣಕುಂಬಿ ಹಾಗೂ ದೆಹಲಿಯ ಜಂತರ್-ಮಂತರ್‌ನಲ್ಲಿ ಕ್ಷೇತ್ರದ ಜನರನ್ನು ಕರೆದೊಯ್ದು ಹೋರಾಟ ಮಾಡಿದ್ದರು.