ರಾಷ್ಟ್ರಕವಿ ಕುವೆಂಪು ಹುಟ್ಟುಹಬ್ಬಕ್ಕೆ ಗೂಗಲ್ ತನ್ನ ಡೂಡಲ್-ಅನ್ನು ಪ್ರಥಮ ಬಾರಿಗೆ ಕನ್ನಡದ ಅಕ್ಷರಗಳಲ್ಲಿ ಹೊರತಂದಿದೆ…

0
1464

ಇಂದು ಕರ್ನಾಟಕ ರತ್ನ ,ಪದ್ಮ ಭೂಷಣ ವಿಜೇತ ಕವಿ ಕುವೆಂಪು ಎಂದೇ ಜಗತ್ಪ್ರಸಿದ್ಧವಾಗಿರೋ ಕೂಪಳ್ಳಿ ವೆಂಕಟಪ್ಪ ಪುಟಪ್ಪನವರ 113 ನೇ ಜನ್ಮದಿನ, “ಎಲ್ಲಾದರು ಇರು ಎಂಥಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಕನ್ನಡವೇ ಸತ್ಯ ಕನ್ನಡವೇ ನಿತ್ಯ” ಎಂಬ ಇವರ ಸಾಲುಗಳು ದಶಕಗಳು ಕಳೆದರು ಇನ್ನು ಕನ್ನಡಿಗರು ಇದನ್ನು ಯಾವಾಗಲೂ ಗುನುಗುನಿಸುತ್ತಾರೆ. ರಾಷ್ಟ್ರಕವಿ ಕುವೆಂಪುರವರಿಗೆ ಗೌರವಾರ್ಥವಾಗಿ ಗೂಗಲ್ ಸರ್ಚ್ ಇಂಜಿನ್ ತನ್ನ ‘ಡೂಡಲ್’ ನಲ್ಲಿ ಇಂದು ಅವರ ಭಾವಚಿತ್ರವನ್ನು ಹಾಕಿದೆ.

20 ನೇ ಶತಮಾನದ ಸರ್ವಶ್ರೇಷ್ಠ ಕವಿ ಎಂದೇ ಗುರುತಿಸಿ ಕೊಂಡಿರುವ ಕುವೆಂಪುರವರು ಡಿಸೆಂಬರ್ 29, 1904 ರಲ್ಲಿ, ಶಿವಮೊಗ್ಗ ಜಿಲ್ಲೆಯ, ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿ-ಯಲ್ಲಿ ಹುಟ್ಟಿದ್ದರು, ಇವರ ತಂದೆಯ ಹೆಸರು ವೆಂಕಟಪ್ಪ ಗೌಡ ಮತ್ತು ತಾಯಿಯ ಹೆಸರು ಸೀತಮ್ಮ.

ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ತಮ್ಮ ಊರಿನಲ್ಲಿಯೇ ಮುಗಿಸಿದರು ನಂತರ 1929 ರಲ್ಲಿ ಮೈಸೂರಿನ ಪ್ರತಿಷ್ಠಿತ ಮಹಾರಾಜ ಕಾಲೇಜಿನಲ್ಲಿ ಕನ್ನಡ ಮುಖ್ಯ ವಿಷಯವಾಗಿ ಪದವಿ ಮುಗಿಸಿದರು. ಅದೇ ವರ್ಷದಿಂದ ಅವರು ಮಹಾರಾಜ ಕಾಲೇಜಿನಲ್ಲಿ ಕನ್ನಡದ ಉಪನ್ಯಾಸಕರಾಗಿ ಸೇರಿಕೊಂಡರು ನಂತರ 1936 ರಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಿದರು. 1946 ರಲ್ಲಿ ಮತ್ತೆ ಮಹಾರಾಜ ಕಾಲೇಜಿನಲ್ಲಿ ಪಾಧ್ಯಾಪಕರಾಗಿ ಸೇರಿ 1955 ರಲ್ಲಿ ಪ್ರಾಚಾರ್ಯರಾಗಿ, 1956 ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ಸೇವೆಸಲ್ಲಿಸಿ 1960 ರಲ್ಲಿ ನಿವೃತ್ತಿ ಹೊಂದಿದರು.

ಏಪ್ರಿಲ್ 30, 1937 ರಲ್ಲಿ ಹೇಮಾವತಿಯವರನ್ನು ಮದುವೆಯಾದರು, ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ ಕೆ.ಪಿ.ಪೂರ್ಣಚಂದ್ರ ತೇಜಸ್ವಿ (ಕನ್ನಡ ಸಾಹಿತ್ಯ, ಛಾಯಾಗ್ರಹಣ, ಕ್ಯಾಲಿಗ್ರಫಿ, ಡಿಜಿಟಲ್ ಇಮೇಜಿಂಗ್, ಸಾಮಾಜಿಕ ಚಳುವಳಿಗಳು ಮತ್ತು ಕೃಷಿಯಲ್ಲಿ ಅಪಾರ ಸೇವೆ ಸಲ್ಲಿಸಿದ್ದಾರೆ) ಹಾಗು ಎರಡನೇ ಮಗ ಕೋಕಿಲೋದಯ ಚೈತ್ರ, ಇವರಿಗೆ ಇಂಧುಕಲ ಹಾಗು ತಾರಿಣಿ ಎಂಬ ಇಬ್ಬರು ಹೆಣ್ಣುಮಕ್ಕಳಿದ್ದಾರೆ.

ಒಬ್ಬ ಕವಿಯಾಗಿ ಕನ್ನಡ ಭಾಷೆಗೆ ಇವರ ಕೊಡುಗೆ ಅಪಾರ, ಇವರು ಬರೆದ ಸಲ್ಲುಗಳಾದ ‘ಓ ನನ್ನ ಚೇತನ ಆಗು ನೀ ಅನಿಕೇತನ’, ‘ಉಳುವ ಯೋಗಿಯ ನೋಡಲ್ಲಿ’, ‘ಸರ್ವರಿಗೆ ಸಮಪಾಲು ಸರ್ವರಿಗೆ ಸಮಬಾಳು’ ಹಾಡಿನ ರೂಪದಲ್ಲಿ ಕನ್ನಡ ಚಿತ್ರರಂಗದಲ್ಲಿ ಹೆಜ್ಜೆ ಗುರುತುಗಳಾಗಿವೆ. ಇನ್ನು ಇವರ ಮಹಾಕಾವ್ಯ ‘ರಾಮಾಯಣ ದರ್ಶನ’ ಮತ್ತು ಚಿತ್ರಾಂಗದಾ ವಿಶ್ವವಿಖ್ಯಾತವಾಗಿದೆ. ಇನ್ನು ಇವರು ಹಲವು ಚಿತ್ರಗಳು, ಮಕ್ಕಳ ಕಥೆಗಳು, ಅನುವಾದ, ಜೀವನ ಚರಿತ್ರೆ, ಸಾಹಿತ್ಯ ವಿಮರ್ಶೆ, ಪ್ರಬಂಧಗಳು, ಆತ್ಮಚರಿತ್ರೆ, ನಾಟಕಗಳು ಮತ್ತು ಕಾದಂಬರಿಗಳನ್ನು ಬರೆದಿದ್ದಾರೆ.

ಇವರ ಈ ಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರ ಮತ್ತು ಭಾರತ ಸರ್ಕಾರ ಇವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1955), ಪದ್ಮಭೂಷಣ (1958), ರಾಷ್ಟ್ರಕವಿ (“ರಾಷ್ಟ್ರೀಯ ಕವಿ”) (1964), ಜ್ಞಾನಪೀಠ ಪ್ರಶಸ್ತಿ (1967), ಪಂಪ ಪ್ರಶಸ್ತಿ (1987), ಪದ್ಮ ವಿಭೂಷಣ (1988), ಮತ್ತು ಕರ್ನಾಟಕ ರತ್ನ (1992) ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಇನ್ನು ಇವರು ಪ್ರಪ್ರಥಮವಾಗಿ ಕನ್ನಡಕ್ಕೆ ‘ಜ್ಞಾನ ಪೀಠ’ ಪ್ರಶಸ್ತಿ ತಂದುಕೊಟ್ಟ ಕವಿಯಾಗಿದ್ದರೆ ಎಂಬುದು ವಿಶೇಷ. ಇವರು ಜನಿಸಿ ಮತ್ತು ವಾಸಿಸಿದ ಕುಪ್ಪಳ್ಳಿ-ಯಲ್ಲಿ ಇರುವ ಮನೆಯಲ್ಲಿ ಸರ್ಕಾರ ‘ಕವಿಮನೆ’ ಎಂಬ ಸಂಗ್ರಾಲಯವನ್ನು ನಿರ್ಮಿಸಿದ್ದಾರೆ ಅದರಲ್ಲಿ ಕುವೆಂಪುರವರು ಬರೆದ ಎಲ್ಲ ಸಾಹಿತ್ಯಗಳು ಮತ್ತು ಪಡೆದ ಪ್ರಶಸ್ತಿಗಳನ್ನು ಇಡಲಾಗಿದೆ. ಇವರ ನೆನಪಿನಾರ್ಥವಾಗಿ ‘ಕವಿಶಾಲೆ’ ಎಂಬ ಸ್ಮಾರಕವನ್ನು ನಿರ್ಮಿಸಲಾಗಿದೆ.

ಇಂದು ಅವರ ಹುಟ್ಟುಹಬ್ಬದ ದಿನದಂದು ಗೂಗಲ್ ಕಂಪನಿಯವರು ತಮ್ಮ ಸರ್ಚ್ ಇಂಜಿನ್‍ನಲ್ಲಿ ಕುವೆಂಪುರವರ ‘ಡೂಡಲ್’ ಇಟ್ಟು ಈ ಶ್ರೇಷ್ಠಕವಿಗೆ ಗೌರವಸಲ್ಲಿಸಿದ್ದಾರೆ.