ಬಡತನ ಅನ್ನೋದು ಎಲ್ಲರಿಗೂ ಇರುತ್ತೆ. ಆದ್ರೆ ಈ ಬಡತನ, ಕಷ್ಟ ಕೆಲವರಿಗೆ ವಿದ್ಯೆ ಮತ್ತು ಯಶಸ್ಸಿಗೆ ಬೇಲಿ ಹಾಕುವುದಿಲ್ಲ. ವ್ಯಕ್ತಿಗೆ ಸಾಧಿಸುವ ಛಲ ಇದ್ದರೆ ಎಂಥ ಸಮಸ್ಯೆಗಳನ್ನು ಬೇಕಾದರೂ ದಿಟ್ಟಿಸಿ ನಡೆಯಬಹುದು. ಯಾಕಿಷ್ಟೆಲ್ಲಾ ಹೇಳ್ತಿದ್ದೀವಿ ಅಂದ್ರೆ ಈ ಮಾತುಗಳನ್ನು ಯುವತಿಯೋರ್ವಳು ಸಾಬೀತುಪಡಿಸಿದ್ದಾಳೆ.
ಬದುಕಿನ ಹಾದಿಯಲ್ಲಿ ಎದುರಾಗುವ ಎಲ್ಲ ಅಡೆತಡೆಗಳನ್ನು ಮೆಟ್ಟಿ ನಿಂತು ಬಡ ಕುಟುಂಬದ ಈ ಯುವತಿ ಏರ್ ಫೋರ್ಸ್ ಅಧಿಕಾರಿಯಾಗಿ ನೇಮಕಗೊಂಡಿದ್ದು, ತನ್ನ ಸಾಧನೆ ಮೂಲಕ ದೇಶದ ಮನೆ ಮಾತಾಗಿದ್ದಾಳೆ. ಮಧ್ಯ ಪ್ರದೇಶದ ನೀಮುಚ್ ಜಿಲ್ಲೆಯ ಯುವತಿ ಆಂಚಲ್ ಗಂಗ್ವಾಲ್ ಕಂಡ ಕನಸನ್ನು ಸಾಕಾರಗೊಳಿಸಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಿದ್ದು, ಟೀ ಮಾರುವವನ ಮಗಳಾಗಿ, ಬಡಕುಟುಂಬದ ಎಲ್ಲ ಅಡ್ಡಿ ಆತಂಕಗಳನ್ನು ದಿಟ್ಟಿಸಿ ನಿಂತು ಛಲ ಬಿಡದೇ ಗುರಿ ಸಾಧಿಸಿದ್ದಾಳೆ. ಭಾರತೀಯ ವಾಯುಪಡೆಗೆ ಮಧ್ಯ ಪ್ರದೇಶ ರಾಜ್ಯದಿಂದ ಆಯ್ಕೆಯಾದ ಏಕೈಕ ವಿದ್ಯಾರ್ಥಿಯಾದ ಈಕೆ ಏರ್ಫೋರ್ಸ್ ಫ್ಲೈಯಿಂಗ್ ಆಫೀಸರ್ ಆಗಿ ನೇಮಕವಾಗಿದ್ದಾರೆ.
ಆಂಚಲ್ ತಂದೆ ಸುರೇಶ ಗಂಗ್ವಾಲ್, ನೀಮುಚ್ ಜಿಲ್ಲೆಯಲ್ಲಿ ಚಿಕ್ಕ ಟೀ ಅಂಗಡಿಯೊಂದನ್ನು ನಡೆಸುತ್ತ ಕುಟುಂಬ ನಿರ್ವಹಣೆ ಮಾಡುತ್ತಿದ್ದು, ಮೂವರು ಮಕ್ಕಳಿಗೆ ಯಾವುದೇ ಕುಂದು ಕೊರತೆ ಬರದಂತೆ ನೋಡಿಕೊಳ್ಳುವುದರೊಂದಿಗೆ ಉತ್ತಮ ಶಿಕ್ಷಣವನ್ನು ನೀಡಿದ್ದಾರೆ. ಹೈದರಾಬಾದ್ನ ದುಂಡಿಗಲ್ನ ಇಂಡಿಯನ್ ಏರ್ಪೋರ್ಸ್ ಅಕಾಡೆಮಿಯಲ್ಲಿ ನಡೆದ ಗ್ರಾಜುಯೇಶನ್ ಪರೇಡ್ ಸಮಾರಂಭದಲ್ಲಿ ಆಂಚಲ್ಗೆ ರಾಷ್ಟ್ರಪತಿಗಳು ಪ್ರಶಂಸಾ ಪತ್ರವನ್ನು ಹಸ್ತಾಂತರಿಸಿದ್ದಾರೆ. 123 ಫ್ಲೈಟ್ ಕೆಡೆಟ್ಗಳನ್ನು ಈ ಸಮಾರಂಭದಲ್ಲಿ ಏರ್ಫೋರ್ಸ್ ಫ್ಲೈಯಿಂಗ್ ಅಧಿಕಾರಿಗಳಾಗಿ ಆಯ್ಕೆ ಮಾಡಿದ್ದು, ಆ 123 ಜನರ ಪೈಕಿ ಆಂಚಲ್ ಕೂಡ ಸ್ಥಾನ ಗಿಟ್ಟಿಸಿಕೊಂಡಿದ್ದಾಳೆ.
ಫ್ಲೈಯಿಂಗ್ ಆಫೀಸರ್ ಆಂಚಲ್ ನೀಮುಚ್ನ ಸೀತಾರಾಮ ಜಾಜು ಸರಕಾರಿ ಹೆಣ್ಣು ಮಕ್ಕಳ ಕಾಲೇಜಿನಿಂದ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಪದವಿ ಪಡೆದಿದ್ದು, ಆಂಚಲ್ ಮಧ್ಯ ಪ್ರದೇಶ ಪೊಲೀಸ್ ಇಲಾಖೆಯಲ್ಲಿ ಸಬ್ ಇನ್ಸಪೆಕ್ಟರ್ಹಾಗೂ ಕಾರ್ಮಿಕ ಇಲಾಖೆಯಲ್ಲಿ ಲೇಬರ್ ಇನ್ಸಪೆಕ್ಟರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಪದವಿ ಶಿಕ್ಷಣ ಪೂರೈಸಿದ ಕೂಡಲೇ ಎಎಫ್ಸಿಎಟಿ ,ಎಸ್ಎಸ್ಬಿ ಸೇರಿದಂತೆ ವಿವಿಧ ಸ್ಪರ್ಧಾತ್ಮಾಕ ಪರೀಕ್ಷೆಗಳನ್ನು ಎದುರಿಸುತ್ತಿದ್ದ ಆಂಚಲ್ ಆರನೇ ಬಾರಿಯ ಪರೀಕ್ಷೆಯ ನಂತರ ಯಶಸ್ಸು ಪಡೆದುಕೊಂಡಿದ್ದು, ಈಕೆಯ ಸಾಧನೆಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
Also read: ಬರಿ 5 ರೂ. ಗೆ ಸ್ನ್ಯಾಕ್ಸ್ ಪ್ಯಾಕೆಟ್ ತಯಾರಿಸಿ 850 ಕೋಟಿ ರೂ. ವರೆಗೆ ಕಂಪನಿ ಬೆಳೆಸಿದ ಈ ಸಾಧಕರು ನಿಮಗೂ ಮಾದರಿ.!