ಮಹದಾಯಿ ನೀರಿನ ಹಂಚಿಕೆ ವಿವಾದವನ್ನು ಬಗೆಹರಿಸಲು ಯಾವ ಪಕ್ಷ ಹೆಚ್ಚು ಬದ್ಧತೆಯನ್ನು ತೋರಿಸುತ್ತಿದೆ…?

0
531

ಮಹದಾಯಿ ಜಲ ವಿವಾದವನ್ನು ಬಗೆಹರಿಸುವುದಾಗಿ ಹೇಳಿ ಬಿಜೆಪಿ ಪೊಳ್ಳು ಭರವಸೆ ನೀಡಿದೆ ಎಂದು ಆರೋಪಿಸಿ, ಬಿಜೆಪಿ ನಿಲುವನ್ನು ಖಂಡಿಸಿ ಉತ್ತರ ಕರ್ನಾಟಕ ಕಳಸಾ ಬಂಡೂರಿ ರೈತ ಹೋರಾಟ ಸಮಿತಿ ಮುಖಂಡರು ಜಿಲ್ಲೆಯ ಸಂಗೊಳ್ಳಿರಾಯಣ್ಣ ವೃತ್ತದಲ್ಲಿ ಟೈರಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಒಂದು ವಾರದೊಳಗೆ ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸಿ ಮೂರು ರಾಜ್ಯದ ಮುಖ್ಯಮಂತ್ರಿಗಳ ಸಂದಾನ ಸಭೆ ಕರೆಯಬೇಕು. ಸಮಸ್ಯೆಯನ್ನು ಇತ್ಯರ್ಥ ಪಡಿಸಬೇಕು ಎಂದು ಸಮಿತಿಯ ಅಧ್ಯಕ್ಷ ಸಿದ್ದು ತೇಜಿ ಆಗ್ರಹಿಸಿದರು.

ಜಲವಿವಾದವನ್ನು ಮಾತುಕತೆ ಮೂಲಕ ಬಗೆಹರಿಸುವ ನೈಜ ಕಾಳಜಿ ಇದ್ದರೆ ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕ್ಕರ್ ಈ ಸಂಬಂಧ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆಯುವ ಬದಲು, ಪ್ರಧಾನಿ ಹಾಗೂ ಕರ್ನಾಟಕದ ಮುಖ್ಯಮಂತ್ರಿಗೆ ಅಧಿಕೃತ ಪತ್ರ ಬರೆಯಲಿ ಎಂದರು.

ಇನ್ನು ವಿವಾದವನ್ನು ಇತ್ಯರ್ಥಗೊಳಿಸಲು ಒತ್ತಾಯಿಸಿ ಉತ್ತರ ಕರ್ನಾಟಕದ ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ಡಿ.27ರಂದು ಬಂದ್‌ಗೆ ಕರೆ ನೀಡಲಾಗಿದೆ ಎಂದು ಕಳಸಾ ಬಂಡೂರಿ ಹೋರಾಟ ಸಮನ್ವಯ ಸಮಿತಿ ಸಂಚಾಲಕ ರಾಜಣ್ಣ ಕೊರವಿ ತಿಳಿಸಿದರು.

ಕುಡಿಯುವ ನೀರಿನ ವಿಚಾರದಲ್ಲಿ ರಾಜಕೀಯ ಮಾಡಬಾರದು. ವಿವಾದ ಶೀಘ್ರ ಇತ್ಯರ್ಥಗೊಳಿಸಲು ಒತ್ತಾಯಿಸಿ ಉತ್ತರ ಕರ್ನಾಟಕದ ಧಾರವಾಡ, ಗದಗ, ಬಾಗಲಕೋಟೆ, ಬೆಳಗಾವಿ ಜಿಲ್ಲೆಯಲ್ಲಿ ಬಂದ್ ಮಾಡಲಾಗುವುದು. ಸಾರ್ವಜನಿಕರು ಸಹಕರಿಸಿ, ಬೆಂಬಲ ನೀಡಬೇಕೆಂದು ವಿನಂತಿಸಿಕೊಂಡರು.

ಇತ್ತ ರಾಜ್ಯದ ಜನರ ಜೊತೆ ಬಿಜೆಪಿ ನಾಯಕರು ಆಟವಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮಹದಾಯಿ ನೀರು ಯಡಿಯೂರಪ್ಪ ಮತ್ತು ಪರಿಕ್ಕರ್ ಆಸ್ತಿನಾ..? ನಾನು ಸಿದ್ದರಾಮಯ್ಯ ಅವರನ್ನು ನಂಬೋದಿಲ್ಲ ಅಂತ ಪರಿಕ್ಕರ್ ಹೇಳ್ತಾರೆ. ಯಡಿಯೂರಪ್ಪ ಅವರನ್ನು ನಂಬ್ತಾರಂತೆ. ಏನು ಪರಿಕ್ಕರ್ ಮತ್ತು ಅಮಿತ್ ಷಾ ಆಟವಾಡ್ತಾರಾ..? ಬಿಜೆಪಿ ನಾಯಕರು ಕರ್ನಾಟಕ ರಾಜ್ಯಕ್ಕೆ ದ್ರೋಹ ಮಾಡ್ತಾ ಇದ್ದಾರೆ. ಬಿಎಸ್ವೈ ರಕ್ತ ಕೊಟ್ಟರೂ ನಾಳೆ ಬೆಳಗ್ಗೆ ನೀರು ಬರುವುದಿಲ್ಲ. ನ್ಯಾಯಾಧಿಕರಣದಿಂದಲೇ ಆದೇಶ ಆಗಬೇಕು ಎಂದು ಹೆಚ್ಡಿಕೆ ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್, ಇನ್ನೆರಡು ಮೂರು ದಿನದಲ್ಲಿ ಸಂಧಾನ ಸಭೆಗೆ ಸಮಯ ಮತ್ತು ಸ್ಥಳ ನಿಗಧಿಸಿ. ಸಿಎಂ ಸಿದ್ದರಾಮಯ್ಯನವರು ಚರ್ಚೆಗೆ ಬರಲು ಸಿದ್ಧ, ಏನೇ ಕಾರ್ಯಕ್ರಮಗಳಿದ್ರು ಬಿಟ್ಟು ಬರುತ್ತಾರೆ. ಆದಷ್ಟು ಬೇಗ ರಾಜ್ಯಕ್ಕೆ ನೀಡಬೇಕಿರುವ ನೀರನ್ನು ಹಂಚಬೇಕು ಎಂದು ಒತ್ತಾಯಿಸಿದರು.