ಸಂತಾನ ಅಪೇಕ್ಷೆ ಹಾಗು ದೃಷ್ಟಿ ದೋಷವಿರುವವರು ಈ ಸೂರ್ಯ ದೇವಸ್ಥಾನಕ್ಕೆ ಭೇಟಿ ಕೊಟ್ಟರೆ ತಮ್ಮ ಕಷ್ಟಗಳೆಲ್ಲವೂ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ…!!

0
3750

ಭಾರತ ದೇಶದಲ್ಲಿ ಸೂರ್ಯನ ಆರಾಧನೆ ಸನಾತನವಾದದ್ದು. ಶ್ರೀ ಸೂರ್ಯನ ಆರಾಧನೆ ಅನಾದಿಕಾಲದಿಂದಲೂ ಇತ್ತು ಎಂಬುದು ಜನಜನಿತ. ಋಷಿ ಮುನಿಗಳು ಅವರ ನಿತ್ಯಾನುಷ್ಠಾನದಲ್ಲಿ ಪ್ರಾತಃ ಸಂಧ್ಯೆಯನ್ನು ಶ್ರೀ ಸೂರ್ಯದೇವರಿಗೆ ಅರ್ಘ್ರ್ಯ ಕೊಟ್ಟು ಪ್ರಾರಂಭಿಸಿ, ಮನಸ್ಸಿನ ಹತೋಟಿಗೆ ಹಾಗೂ ಬುದ್ಧಿಯ ವಿಕಾಸವನ್ನು ಅಪೇಕ್ಷಿಸುವ ಮಹಾಗಾಯತ್ರಿ ಮಂತ್ರವನ್ನು ಪಠಿಸುವುದು ಶ್ರೀ ಸೂರ್ಯನ ಕುರಿತದ್ದೇ ಆಗಿದೆ. ಆದರೆ ದೇಶದೆಲ್ಲೆಡೆ ಸೂರ್ಯನಾರಾಯಣ ದೇವಸ್ಥಾನಗಳು ಕಾಣಸಿಗುವುದು ಬಹಳ ವಿರಳ. ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಮರೋಳಿ ಮತ್ತು ಬೆಳ್ತಂಗಡಿಯ ನಾರಾವಿಯಲ್ಲಿ ಶ್ರೀ ಸೂರ್ಯನಾರಾಯಣ ದೇವಸ್ಥಾನವಿದೆ. ಇವೆರಡರಲ್ಲಿ ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನವು ಅತ್ಯಂತ ಪುರಾತನವಾಗಿದ್ದು ತನ್ನ ಇತಿಹಾಸ ಹಾಗೂ ವಿಶೇಷತೆಗಳಿಂದ ಪ್ರಾಮುಖ್ಯತೆ ಪಡೆದಿದೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಕ್ಷೇತ್ರದ ಇತಿಹಾಸ:

ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನವು ದಕ್ಷಿಣಕನ್ನಡ ಜಿಲ್ಲೆಯ ಏಕೈಕ ಹಳೆಯ ದೇವಸ್ಥಾನವಾಗಿದೆ. ನಮ್ಮ ಮರೋಳಿ ಸೂರ್ಯನಾರಾಯಣ ದೇವಸ್ಛಾನಕ್ಕೆ ಒಂದು ವಿಷೇಷ ಐತಿಹ್ಯ ಇದೆ. ಈ ದೇವಸ್ಥಾನವು ಸುಮಾರು 1,200 ವರ್ಷಗಳ ಹಿಂದೆ ತಪಸ್ಸಿಗಳಿಂದ ಸ್ಥಾಪನೆಗೊಂಡಿತ್ತು ಎಂದು ಹೇಳಲಾಗುತ್ತದೆ. ಆದಿಯಲ್ಲಿ ಇದು ಒಂದು ಗುಹೆ, ಅರಣ್ಯ, ಜಲಚರಗಳಿಂದ ಕೂಡಿದ ಪ್ರಕೃತಿ ರಮಣೀಯ ಪ್ರದೇಶ. ಆ ಸಮಯದಲ್ಲಿ ಮಹಾ ತಪಸ್ವಿ ಋಷಿಹೊಬ್ಬರಿಗೆ ಗೋಲಾಕೃತಿಯೊಂದು ಪ್ರಕಾಶ ರೂಪದಲ್ಲಿ ಕಾಣಿಸಿ, ಶ್ರೀ ಸೂರ್ಯನಾರಾಯಣ ದೇವರ ಆವಿರ್ಭಾವ ಆಯಿತು ಎಂದು ಪ್ರತೀತಿ. ಸಂಸ್ಕೃತದಲ್ಲಿ ‘ಮರಾಲಿ’ ಎಂದರೆ ಸ್ವಾತಿಕ, ಸುಂದರ ಎಂಬ ಅರ್ಥವಿದೆ.

ನಂತರದ ದಿನಗಳಲ್ಲಿ ರಾಜಾಶ್ರಯದ ಕೊರತೆ ಮತ್ತು ಯುದ್ಧಗಳಿಂದಾಗಿ ದೇವಸ್ಥಾನವು ನಾಶಗೊಂಡು ತನ್ನ ಸ್ವರೂಪವನ್ನು ಕಳೆದುಕೊಳ್ಳುತ್ತದೆ. ಸುಮಾರು 450-500 ವರ್ಷಗಳ ಹಿಂದೆ ಬಜಾಲು ಜೈನ ಪಾಳೆಗಾರ್ತಿಯು ಈ ದೇವಸ್ಥಾನವನ್ನು ಮರುನಿರ್ಮಾಣ ಮಾಡಿದಳು ಎಂಬುದು ಕ್ಷೇತ್ರದ ಇತಿಹಾಸದಿಂದ ತಿಳಿದು ಬರುತ್ತದೆ.

ಅಂದಿನ ಕಾಲದಲ್ಲಿ ಬಜಾಲು ಬೀಡಿನ ಜೈನ ಪಾಳೆಗಾರ್ತಿಯು ಮರೋಳಿ, ಕಣ್ಣೂರು, ಜಪ್ಪು, ಅಳಪೆ, ಪದವು, ಬಜಾಲ್ ಹಾಗೂ ಕಂಕನಾಡಿ ಎಂಬ ಏಳು ಮಾಗಣೆಗಳನ್ನು ಆಳುತ್ತಿದ್ದಳು. ರಾಣಿಯು ದೈವಭಕ್ತೆಯಾಗಿದ್ದು ಪ್ರತಿನಿತ್ಯವು ಮುಂಜಾನೆ ಸೂರ್ಯನಿಗೆ ನಮಸ್ಕರಿಸಿ ಆಹಾರ ಸೇವಿಸುತ್ತಿದ್ದಳು. ಒಂದು ಸಾರಿ ಮಳೆಗಾಲದ ದಟ್ಟ ಮೋಡದಿಂದಾಗಿ ರಾಣಿಗೆ ಮುಂಜಾನೆ 2 ದಿನಗಳು ಸೂರ್ಯನನ್ನು ಕಾಣಲಾಗುವುದಿಲ್ಲ. ಸೂರ್ಯನನ್ನು ನಮಸ್ಕರಿಸಿ ಆಹಾರ ಸೇವಿಸುವ ಪದ್ಧತಿಯಿದ್ದರಿಂದ ರಾಣಿಯು ಸೂರ್ಯನನ್ನು ಕಾಣದೇ ಉಪವಾಸ ಬೀಳುತ್ತಾಳೆ. ಮೂರನೇಯ ದಿನವು ಸೂರ್ಯನು ಕಾಣದಾಗ ‘ಸೂರ್ಯನು ನೋಡಲು ಸಿಕ್ಕರೆ ತಾನು ಸೂರ್ಯದೇವನಿಗೆ ದೇವಸ್ಥಾನ ಕಟ್ಟುವೆನು’ ಎಂಬ ಹರಕೆ ಕಟ್ಟಿಕೊಂಡಾಗ ಸೂರ್ಯನ ದರ್ಶನ ಭಾಗ್ಯವು ರಾಣಿಗೆ ಸೀಗುತ್ತದೆ.

ಮುಂದೆ ರಾಣಿಯ ಕನಸಿನಲ್ಲಿ ಸೂರ್ಯದೇವನು ಪ್ರತ್ಯಕ್ಷನಾಗಿ ತಾನು ಬೆಂಕಿಯ ರೂಪದಲ್ಲಿ ಕಾಣಸೀಗಲಿದ್ದು ಅಲ್ಲಿ ದೇವಸ್ಥಾನ ನಿರ್ಮಿಸುವಂತೆ ಸಲಹೆ ನೀಡುವನು. ಮರುದಿನ ರಾಣಿಯು ತನ್ನ ಪರಿವಾರದೊಂದಿಗೆ ‘ಕುಡುಪು ಅನಂತ ಪದ್ಮನಾಭ’ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮರಳುವಾಗ ಮರೋಳಿಯ ಕೇದಗೆ ಹೂವಿನ ಪರಿಸರದಲ್ಲಿ ಬೆಂಕಿ ಜಾಲ್ವೆಗಳು ಕಾಣಸೀಗುತ್ತವೆ. ರಾಣಿಯು ಅಲ್ಲಿ ಹೋಗಿ ವೀಕ್ಷಿಸಿದಾಗ ಅಲ್ಲಿ ಹಳೆಯ ದೇವಾಲಯದ ಕುರುಹುಗಳು ಕಂಡು ಬರುತ್ತವೆ. ಅಲ್ಲೇ ವಾಸವಿದ್ದ ಋಷಿಗಳಿಂದ ಸ್ಥಳದ ಮಹಿಮೆಯನ್ನು ಅರಿತು ಶ್ರೀಸೂರ್ಯನಾರಾಯಣ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವನ್ನು ಮಾಡುವಳು. ಈ ಸಂದರ್ಭದಲ್ಲಿ ಏಳು ಮಾಗಣೆಯ ಜನರು ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದಲ್ಲಿ ನೆರವಾಗಿ ಸುಂದರವಾದ ದೇವಸ್ಥಾನವನ್ನು ಕಟ್ಟುವರು. ದೇವಸ್ಥಾನದ ಮರುನಿರ್ಮಾಣವಾದ ನಂತರ ರಾಣಿಯು ಶ್ರೀ ಸೂರ್ಯನಾರಾಯಣ ಮತ್ತು ಶ್ರೀ ಮಹಾಗಣಪತಿ ದೇವರ ವಿಗ್ರಹಗಳನ್ನು ಪ್ರತಿಷ್ಠೆ ಮಾಡುವಳು.

ಶ್ರೀ ಕ್ಷೇತ್ರದ ವೈಶಿಷ್ಟತೆ:

ಕ್ಷೇತ್ರದಲ್ಲಿ ಪರಬಹ್ಮನ ಸ್ವರೂಪಗಳಾದ ಪರಶಿವೆ, ಪರಾಶಕ್ತಿ, ಮಹಾವಿಷ್ಣು ಹಾಗೂ ಚತುರ್ಮುಖ ಬ್ರಹ್ಮ ದೇವರನ್ನು ಒಟ್ಟಾಗಿ ಶ್ರೀಸೂರ್ಯನಾರಾಯಣ ಎಂದು ಆರಾಧಿಸುವ ಜೊತೆಗೆ ಮಹಾಗಣಪತಿ ಹಾಗೂ ನಾಗಬ್ರಹ್ಮನ ಸಾನಿಧ್ಯವು ಇರುವುದರಿಂದ ದೇವಸ್ಥಾನ ವಿಶಿಷ್ಟವಾಗಿದ್ದು ಪ್ರಾಮುಖ್ಯತೆಯನ್ನು ಪಡೆದಿದೆ. ಶ್ರೀ ಶಿವ, ಶ್ರೀ ವಿಷ್ಣು, ಶ್ರೀ ದೇವಿ, ಶ್ರೀ ಗಣಪತಿಯೊಂದಿಗೆ ಐದನೆಯವರಾಗಿ ಆರಾಧಿಸಲ್ಪಡುವವರು ಶ್ರೀ ಸೂರ್ಯನಾರಾಯಣ ದೇವರು. ಜ್ಯೋತಿಶಾಸ್ತ್ರವು ನವಗ್ರಹಗಳ ಮೇಲೆ ಚಿಂತನೆ ಮಾಡುವುದಾದರೂ ನವಗ್ರಹಗಳಲ್ಲಿ ರಾಜ ಗ್ರಹ ಸೂರ್ಯ ಆಗಿದೆ.

ಒಂದು ಕಾಲದಲ್ಲಿ ಈ ಕ್ಷೇತ್ರವು ತುಂಬ ಶ್ರೀಮಂತ ದೇವಸ್ಥಾನವಾಗಿತ್ತೆಂದು, ಇಲ್ಲಿಂದಲೇ ಕದ್ರಿ ಮುಂತಾದ ಕ್ಷೇತ್ರಗಳಿಗೆ ಜಾತ್ರಾಸಮಯದಲ್ಲಿ ಆಭರಣಾದಿಗಳು ಹೋಗುತ್ತಿದ್ದವು ಎಂದು ಹಿರಿಯರು ತಿಳಿಸುತ್ತಾರೆ. ಹಾಗೇಯೆ ನಮ್ಮಮಂಗಳೂರಿಗೆ ಇದೊಂದೆ ಸೀಮೆ ದೇವಸ್ಛಾನ ಆದ ಕಾರಣ ಶ್ರೀ ಮಂಗಳಾದೇವಿ ದೇವಸ್ಛಾನ ದವರು ಕೂಡಾ ಇಲ್ಲಿ ಪ್ರಾರ್ಥನೆ ಮಾಡಿ ದೊಡ್ಡ ದೊಡ್ಡ ಕೆಲಸಗಳನ್ನು ಪ್ರಾರಂಭಿಸುತ್ತಿದ್ದರು ಎಂದು ಬಲ್ಲವರಿಂದ ತಿಳಿದುಬರುತ್ತದೆ.

ಗ್ರಾಮಗಳಲ್ಲಿ ಮಳೆ ಬರದೇ ಇದ್ದಲ್ಲಿ ಶ್ರೀ ಸೂರ್ಯನಾರಾಯಣ ದೇವರಿಗೆ ಪೂಜೆ, ಸೀಯಾಳಾಭಿಷೇಕ ಮಾಡುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದ್ದು ಅಭಿಷೇಕದ ಬಳಿಕ ಮಳೆಯಾಗಿರುವ ನಿದರ್ಶನಗಳಿವೆ. ಸಂತಾನ ಭಾಗ್ಯವಿಲ್ಲದವರು ಈ ಕ್ಷೇತ್ರದಲ್ಲಿ ಪೂಜೆ ಸಲ್ಲಿಸಿ ಸಂತಾನ ಭಾಗ್ಯ ಪಡೆದ ಅದೆಷ್ಟೋ ಉದಾಹರಣೆ ಇಲ್ಲಿವೆ. ಅಷ್ಟೇ ಅಲ್ಲ ಅತೀಯಾದ ತಲೆ ನೋವಿನಿಂದ ಬಳಲುವರು ಕೂಡ ಈ ಕ್ಷೇತ್ರಕ್ಕೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿದಲ್ಲಿ ನೋವು ಶಮನವಾಗುತ್ತದೆ. ದೃಷ್ಟಿ ದೋಷಕ್ಕೂ ಇಲ್ಲಿ ಪರಿಹಾರವನ್ನು ಕಾಣಬಹುದಾಗಿದೆ. ಇಲ್ಲಿ ಪ್ರಾರ್ಥಿಸಿ ಕೊಂಡವರಲ್ಲಿ ಯಾವುದಾದರು ವಿಶೇಷ ಅಭಿವ್ಯಕ್ತಿ ಸಾಮಥ್ಯವಿದ್ದಲ್ಲಿ ಅದು ನೂರುಪಟ್ಟು ವೃದ್ಧಿಸುತ್ತದೆ ಎಂಬ ಪ್ರತೀತಿಯಿದೆ. ಪ್ರತಿ ವರ್ಷ ಜನವರಿ ತಿಂಗಳ ರಥಸಪ್ತಮಿಯಂದು ಶ್ರೀ ದೇವರ ರಥೋತ್ಸವ ಅದ್ಧೂರಿಯಲ್ಲಿ ನಡೆಯುತ್ತದೆ.

ದೇವಸ್ಥಾನದ ವಿಳಾಸ:
ಶ್ರೀ ಸೂರ್ಯನಾರಾಯಣ ದೇವಸ್ಥಾನ,
ಮರೋಳಿ, ಮಂಗಳೂರು 575 005
ದಕ್ಷಿಣ ಕನ್ನಡ ಜಿಲ್ಲೆ,
ಕರ್ನಾಟಕ ರಾಜ್ಯ

ಪೂಜಾ ಸಮಯ:
ಬೆಳಿಗ್ಗೆ : 6:00 ಗಂಟೆಗೆ
ಮದ್ಯಾಹ್ನ : 12:00 ಗಂಟೆಗೆ
ಸಾಯಂಕಾಲ : 8:00 ಗಂಟೆಗೆ

ಕೃಪೆ: rcmysore-portal.kar.nic.in