ಪಕ್ಷದ ಚಿಹ್ನೆ ಆನೆಯ ಪುತ್ಥಳಿಯನ್ನು ಸಾರ್ವಜನಿಕ ಹಣದಲ್ಲಿ ಸ್ಥಾಪನೆ ಮಾಡಿದ್ದ ಮಾಯಾವತಿಗೆ ಸುಪ್ರೀಂ ಖಡಕ್ ಆದೇಶ..

0
415

ಸ್ವಂತ ಬಲದಿಂದ ಉತ್ತರ ಪ್ರದೇಶವನ್ನೇ ಆಳಿದ ಮಾಜಿ ಮುಖ್ಯಮಂತ್ರಿ ಮಾಯಾವತಿಗೆ ಸುಪ್ರಿಂ ಕೋರ್ಟ್ ಚಾಟಿ ಬಿಸಿದೆ. ಲಖನೌ ಹಾಗೂ ನೋಯ್ಡಾದಲ್ಲಿ ತಮ್ಮ ಬಹುಜನ ಸಮಾಜ ಪಕ್ಷದ ಚಿಹ್ನೆ ಆನೆಯ ಪುತ್ಥಳಿಯನ್ನು ಸಾರ್ವಜನಿಕ ಹಣದಲ್ಲಿ ಸ್ಥಾಪನೆ ಮಾಡಿದ್ದ ಮಾಯಾವತಿ, ಆ ಹಣವನ್ನು ಹಿಂತಿರುಗಿಸಬೇಕು ಎಂದು ಶುಕ್ರವಾರ ಸುಪ್ರೀಂ ಕೋರ್ಟ್ ಹೇಳಿದೆ. ತಮ್ಮ ಸ್ವಂತ ಪುತ್ಥಳಿ ಹಾಗೂ ಯಾವುದೇ ಪಕ್ಷದ ಚಿಹ್ನೆಯನ್ನು ಸಾರ್ವಜನಿಕ ಹಣದಲ್ಲಿ ನಿರ್ಮಿಸಬಾರದು ಎಂದು ವಕೀಲರೊಬ್ಬರು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯ ವಿಚಾರಣೆಯನ್ನು ಶುಕ್ರವಾರ ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡು. ಈ ಆದೇಶ ಹೊರಡಿಸಿದೆ.

ಏನಿದು ಪ್ರಕರಣ?:

ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿದ್ದ ಮಾಯಾವತಿ ಅವರು ಕೋಟ್ಯಂತರ ಹಣ ವೆಚ್ಚ ಮಾಡಿ ದಲಿತ್ ಪವರ್ ಹೌಸ್, ಬಿಎಸ್‍ಪಿ ಚಿಹ್ನೆ ಆನೆ ಹಾಗೂ ಪಕ್ಷ ಸಂಸ್ಥಾಪಕ ಕಾನ್ಶಿ ರಾಮ್ ಪ್ರತಿಮೆ ನಿರ್ಮಾಣ ಮಾಡಿದ್ದಾರೆ. ಬಡವರ ಹೆಸರಿನಲ್ಲಿ ಸಾರ್ವಜನಿಕ ಹಣವನ್ನು ದುರ್ಬಳಕೆ ಮಾಡಲಾಗಿದೆ ಎಂದು ಆರೋಪಿ ವಕೀಲರಾದ ರವಿಕಾಂತ್ ಹಾಗೂ ಸುಕುಮಾರ್ ಅವರು 2019ರಲ್ಲಿ ಕೋರ್ಟ್ ಮೆಟ್ಟಿಲೇರಿದ್ದರು. 2012ರ ಉತ್ತರ ವಿಧಾನಸಭಾ ಚುನಾವಣೆ ವೇಳೆ ಮಾಯಾವತಿ ಹಾಗೂ ಆನೆಯ ಪ್ರತಿಮೆಗಳಿಗೆ ಹೊದಿಕೆ ಹೊದಿಸಬೇಕು ಎಂದು ಚುನಾವಣಾ ಆಯೋಗ ಆದೇಶ ಹೊರಡಿಸಿತ್ತು. 2014ರಲ್ಲಿ ಸುಪ್ರೀಂಕೋರ್ಟ್ ವಿಚಾರಣೆ ನಡೆಸಿದಾಗ, ಪ್ರತಿಮೆ ನಿರ್ಮಾಣಕ್ಕೆ ಬಜೆಟ್‍ನಲ್ಲಿ ಅನುಮತಿ ಸಿಕ್ಕಿತ್ತು. ಹೀಗಾಗಿ ನಿರ್ಮಾಣ ಮಾಡಿದ್ದೇವೆ ಎಂದು ಬಿಎಸ್‍ಪಿ ತಿಳಿಸಿತ್ತು. ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನೋಯ್ಡಾ ಹಾಗೂ ಲಕ್ನೋ ಉದ್ಯಾನವನಗಳಲ್ಲಿ ಕಲ್ಲಿನ ಪ್ರತಿಮೆಯ ಕಲ್ಲಿನ ಸ್ಮಾರಕ ನಿರ್ಮಿಸಿದ್ದರು. ಇದರಲ್ಲಿ 40, 000 ಕೋಟಿ ರೂ ಅಕ್ರಮ ನಡೆದಿದೆ ಎಂದು ಕೂಡ ಎಸ್ಪಿ ನಾಯಕ ಅಖಿಲೇಶ್​ ಈ ಹಿಂದೆ ಆರೋಪಿಸಿದ್ದರು.

ಸುಪ್ರಿಂ ಆದೇಶದಲ್ಲಿ ಏನಿದೆ?

ಸ್ವತಃ ತಮ್ಮ ಪ್ರತಿಮೆಗಳು ಮತ್ತು ತಮ್ಮ ಪಕ್ಷದ ಚಿಹ್ನೆಯ ಪ್ರತಿಮೆಗಳನ್ನು ನಿರ್ಮಿಸಲು ಬಳಸಿರುವ ಅಷ್ಟೂ ಸಾರ್ವಜನಿಕ ಹಣವನ್ನು ಸ್ವತಃ ಮಾಯಾವತಿ ಅವರೇ ಖಜಾನೆಗೆ ತುಂಬಬೇಕು ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೋಯ್​​ ನೇತೃತ್ವದ ಸರ್ವೋಚ್ಛ ನ್ಯಾಯಪೀಠ ಆದೇಶ ನೀಡಿದೆ. ಯಾವುದೇ ವ್ಯಕ್ತಿ ತನ್ನ ಪ್ರತಿಮೆಗಳನ್ನು ನಿರ್ಮಿಸಲು ಮತ್ತು ರಾಜಕೀಯ ಪಕ್ಷದ ಪ್ರಚಾರಕ್ಕಾಗಿ ಸಾರ್ವಜನಿಕ ಹಣವನ್ನು ಪೋಲು ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ತನ್ನ​ ಆದೇಶದಲ್ಲಿ ಸ್ಪಷ್ಟಪಡಿಸಿದೆ. ಅದೇರೀತಿ ಬಿಎಸ್ ಪಿ ಚಿಹ್ನೆಯಾದ ಆನೆಯ ಪ್ರತಿಮೆಯನ್ನು ನಿರ್ಮಾಣ ಮಾಡಲು ಮಾಯಾವತಿ ಪಕ್ಷ ವೆಚ್ಚ ಮಾಡುತ್ತಿರುವ ಸಾರ್ವಜನಿಕ ಹಣವನ್ನು ಹಿಂದಿರುಗಿಸಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ.

ಸುಪ್ರಿಂ ಖಡಕ್ ವಾರ್ನಿಂಗ್:

ಮುಖ್ಯ ನ್ಯಾ. ರಂಜನ್ ಗೊಗೋಯ್ ನೇತೃತ್ವದ ದೀಪಕ್ ಗುಪ್ತಾ ಹಾಗೂ ಸಂಜೀವ್ ಖನ್ನಾ ಅವರ ತ್ರಿಸದಸ್ಯ ಪೀಠ ಈ ಅರ್ಜಿಯ ಮುಂದಿನ ವಿಚಾರಣೆಯನ್ನು ಎಪ್ರಿಲ್ 2ರಂದು ನಡೆಸಲಿದ್ದಾರೆ. ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಬಿಎಸ್‍ಪಿ ನಾಯಕಿ ಹಾಗೂ ಎಸ್‍ಪಿ ನಾಯಕ ಅಖಿಲೇಶ್ ಜಂಟಿಯಾಗಿ ಉತ್ತರಪ್ರದೇಶದಲ್ಲಿ ರಣತಂತ್ರ ರೂಪಿಸುತ್ತಿದ್ದಾರೆ. ಈ ಪ್ರಕರಣದ ವಿಚಾರಣೆ ಚುನಾವಣೆ ಮೇಲೆ ಪರಿಣಾಮ ಬೀರಬಹುದು ಎನ್ನುವ ಭೀತಿಯಲ್ಲಿ ಮುಂದಿನ ವಿಚಾರಣೆ ಮೇ ತಿಂಗಳಿನಲ್ಲಿ ಅಥವಾ ಲೋಕಸಭಾ ಚುನಾವಣೆಯ ನಂತರ ನಡೆಸಬಹುದೇ ಎಂದು ಬಿಎಸ್‍ಪಿ ನ್ಯಾಯಾಲಯದಲ್ಲಿ ಮನವಿ ಮಾಡಿತು. ಈ ಮನವಿಗೆ ಮುಖ್ಯ ನ್ಯಾಯಮೂರ್ತಿಗಳು, ನಮಗೆ ಯಾವುದು ಇಷ್ಟವಾಗುದಿಲ್ಲವೋ ಆ ವಿಚಾರವನ್ನು ಹೇಳಲು ಬರಬೇಡಿ ಎಂದು ಖಡಕ್ ಆಗಿ ಹೇಳಿದರು.

Also read: ಪೇ ಚಾನೆಲ್‌ ಆಯ್ಕೆ ಮಾಡಿಲ್ಲವೇ ? ಹಾಗಾದ್ರೆ ಇಂದೇ ಸ್ಥಗಿತವಾಗುತ್ತೆ ನಿಮ್ಮ ಟಿವಿ ಪ್ರಸಾರ..