ಪೌರಾಣಿಕ ಹಿನ್ನೆಲೆಯನ್ನು ಹೊಂದಿರುವ ಮುತ್ತತ್ತಿ ಗ್ರಾಮ.

0
3631

ಮುತ್ತತ್ತಿ. ಬೆಂಗಳೂರಿನಿಂದ 120 ಕಿ.ಮೀ. ದೂರದಲ್ಲಿ ಕಾವೇರಿ ತಟದಲ್ಲಿರುವ ಪ್ರೇಕ್ಷಣೀಯ ಮತ್ತು ಪುರಾಣ ಪ್ರಸಿದ್ಧ ಸ್ಥಳ. ಮಂಡ್ಯ ಜಿಲ್ಲೆ, ಮಳವಳ್ಳಿ ತಾಲೂಕಿನಲ್ಲಿ. ಕನಕಪುರ-ಮಳವಳ್ಳಿ ಹೆದ್ದಾರಿಯಲ್ಲಿರುವ ವ್ಯಾಪಾರ ಕೇಂದ್ರ ಹಲಗೂರಿನಿಂದ 22 ಕಿ.ಮೀ. ದೂರ ಅರಣ್ಯದೊಳಗೆ ಸಾಗಬೇಕು. ಅಲ್ಲಿ ಮುತ್ತೆತ್ತರಾಯ ಅಥವಾ ಆಂಜನೇಯನ ದೇವಸ್ಥಾನವಿದೆ. ಐತಿಹ್ಯದಂತೆ ಆಂಜನೇಯ ಇಲ್ಲಿ ಕಾವೇರಿ ನದಿಯಲ್ಲಿ ಬಿದ್ದುಹೋಗಿದ್ದ ಸೀತಾದೇವಿಯ ಮೂಗುತಿಯನ್ನು ತನ್ನ ಬಾಲದಿಂದ ನೀರಿನೊಳಗೆ ತಿರುವಿ ಹುಡುಕಿ ಮೇಲಕ್ಕೆತ್ತಿಕೊಟ್ಟನಂತೆ. ಹಾಗಾಗಿ ಅಂದಿನಿಂದ ಇದನ್ನು `ಮುತ್ತತ್ತಿ’ ಎಂದೇ ಕರೆಯಲಾಗುತ್ತದೆ. ಅವನು ಬಾಲವನ್ನು ನೀರಿನಲ್ಲಿ ತಿರುಗಿಸಿದ ರಭಸಕ್ಕೆ ಆ ಜಾಗವು ಇಂದಿಗೂ ತಿರುಗಣೆ ಮಡುವೆಂದು ಪ್ರಸಿದ್ದಿಯಾಗಿದೆ.

ಮೂಲ: thinkbangalore.blogspot.com

ಮುತ್ತತ್ತಿಗೆ ಬೆಂಗಳೂರು, ಮೈಸೂರು, ಮಂಡ್ಯ ಮತ್ತು ಕೊಳ್ಳೆಗಾಲ ನಾಲ್ಕೂ ಕಡೆಯಿಂದಲೂ ಬರಬಹುದು. ಹಲಗೂರಿನಿಂದ ಸ್ವಲ್ಪ ದೂರ ಸಾಗಿದರೆ ಕಾವೇರಿ ನದಿಯ ದರ್ಶನವಾಗುತ್ತದೆ. ನದಿಯ ಪಕ್ಕ ಸಾಗುವ ರಸ್ತೆ, ಸುತ್ತಲೂ ಕಾಡು ಮತ್ತು ಸಾಗುವಾಗ ದಾರಿಯಲ್ಲಿ ಸಿಗುವ ಕಾಡುಕೋಳಿ, ಕೋತಿ, ಜಿಂಕೆ, ಸಾರಂಗ, ಕಾಡುಹಂದಿ, ನರಿ ಮುಂತಾದವು ಮನಕ್ಕೆ ಮುದ ನೀಡುತ್ತವೆ. ಅದೃಷ್ಟವಿದ್ದರೆ ಆನೆ ನೋಡುವ ಭಾಗ್ಯವೂ ಒದಗಬಹುದು. ಮುತ್ತತ್ತಿಗೆ ಪ್ರಕೃತಿ ವೀಕ್ಷಣೆಗಿಂತ ಮೋಜು ಮಾಡಲು ಬರುವ ಜನರೇ ಹೆಚ್ಚು. ಇದರಿಂದಾಗಿ ಕಾವೇರಿ ನದಿತೀರ ಮಲಿನಗೊಳ್ಳುತ್ತಿದೆ. ಸ್ನೇಹಿತರ ಸಲಹೆಯಂತೆ ನಾವು ಮುತ್ತತ್ತಿಯಲ್ಲಿ ತಂಗದೆ ಅಲ್ಲಿಂದ ಇನ್ನೂ ಹಿಂದಕ್ಕೆ ಸುಮಾರು 8 ಕಿ.ಮೀ. ದೂರದಲ್ಲಿ ನದಿ ದಡದಲ್ಲಿದ್ದ ಅರಣ್ಯ ಇಲಾಖೆಯ ಪುಟ್ಟ ಅತಿಥಿ ಗೃಹದಲ್ಲಿ ಉಳಿದುಕೊಂಡೆವು.

ಮೂಲ: nandhanahotels.com

ಮುತ್ತತ್ತಿಯಲ್ಲಿ ಸುಳಿಯಿದ್ದು, ಈಜಲು ನೀರಿಗಿಳಿಯುವುದು ಅಪಾಯ. ಹಾಗಾಗಿ ಸುಂದರ ತಾಣದಲ್ಲಿ ದಿನಕಳೆದು ಸುರಕ್ಷಿತವಾಗಿ ಮರಳಿ ಬರುವುದು ಉತ್ತಮ. ನದಿಯ ಅಂಚಿನಲ್ಲೇ ಸಾಕಷ್ಟು ಆಳ-ದಡದಲ್ಲಿ ಸುಳಿಗಳಿದ್ದು `ಮೊಸಳೆ ಗಳಿವೆ’ ಎಂಬ ಎಚ್ಚರಿಕೆ ಫಲಕಗಳಿವೆ. ನದಿಯೊಳಗೆ ಮೈಚಾಚಿದಂತಿರುವ ಬಂಡೆಗಳ ಮೇಲೆ ರೆಕ್ಕೆ ಕಾಯಿಸುತ್ತಾ ಕುಳಿತಿರುವ ನೀರು ಕಾಗೆಗಳು, ನೀರಂಚಿನಲ್ಲಿ ಗಬಕ್ಕನೆ ನೆಗೆದು ಮೀನು ಹಿಡಿಯಲು ಹೊಂಚುಹಾಕಿ ಕುಳಿತಿರುವ ಮಿಂಚುಳ್ಳಿಗಳು ನದಿಯ ಸೌಂದರ್ಯಕ್ಕೆ ಮೆರಗನ್ನು ನೀಡುತ್ತವೆ. ನದಿಪಾತ್ರದ ಉದ್ದಕ್ಕೂ ಬೆಳೆದಿರುವ ಬೃಹದಾಕಾರದ ವೃಕ್ಷಗಳು, ಹಬ್ಬಿಕೊಂಡಿರುವ ಪೊದೆಗಳು ಕಾಡಿನ ಸಾಂದ್ರತೆಯನ್ನು ಹೆಚ್ಚಿಸಿವೆ. ಗಿಡುಗ, ಹದ್ದು, ಕಾಡುಹುಂಜನಂತಹ ಪಕ್ಷಿಗಳು ಮನುಷ್ಯರನ್ನು ಕಂಡೊಡನೆ ದೂರಕ್ಕೆ ಹಾರುತ್ತವೆ ಅಥವಾ ಕೂಗುವುದು ನಿಲ್ಲಿಸಿ ಮರೆಯಾಗುತ್ತವೆ. ಕೊಳ್ಳೇಗಾಲ ವನ್ಯಜೀವಿ ಅರಣ್ಯವಲಯಕ್ಕೆ ಸೇರುವ ಇಲ್ಲಿಯ ಕಾಡುಗಳಲ್ಲಿ ಆನೆಗಳ ಸಂಖ್ಯೆ ಹೇರಳವಾಗಿದೆ.

ಮೂಲ: youtube