ಬಾಳಿ ಬದುಕುವ ಕನಸಿನ ದೋಣಿ ಏರಬೇಕಿದ್ದವರು ತೆಪ್ಪವೇರಿ ಸಾವಿನ ಲೋಕಕ್ಕೆ ಹೋದರು: ಇದು ಪ್ರೀ ವೆಡ್ಡಿಂಗ್ ಪಜೀತಿ..

0
361

ಇತ್ತೀಚಿನ ದಿನಗಳಲ್ಲಿ ಮದುವೆಗೆ ಮುಂಚೆ ಜೋಡಿಗಳ ಫ್ರಿವೆಡ್ಡಿಂಗ್​ ಶೂಟ್​ ಕಡ್ಡಾಯ ಎಂಬ ಅಲಿಖಿತ ನಿಯಮ ಜಾರಿಗೆ ಬಂದಿದೆ. ವಿಭಿನ್ನವಾಗಿ ಎಲ್ಲರ ಗಮನಸೆಳೆಯುವಂತೆ ಮದುವೆಗೆ ಮುಂಚೆ ಫೋಟೋಗೆ ಫೋಸ್​ ನೀಡದಿದ್ದರೆ, ಮದುವೆಯೇ ಸಂಪೂರ್ಣಗೊಂಡಿಲ್ಲ ಎಂಬ ಭಾವನೆ ಈಗಿನ ಯುವ ಜೋಡಿಗಳದ್ದು. ಇದರಿಂದಲೇ ಇತ್ತೀಚೆಗೆ ಫ್ರಿವೆಡ್ಡಿಂಗ್​ ಫೋಟೋಗ್ರಾಫಿಗೆ ಡಿಮ್ಯಾಂಡ್​ ಹೆಚ್ಚಿದೆ. ಅದರಲ್ಲಿಯೂ ಕ್ರಿಯಾತ್ಮಕವಾಗಿ ಜೋಡಿಗಳ ಫೋಟೋ ತೆಗೆಯುವ ಯೋಜನೆ ರೂಪಿಸುವುದನ್ನೇ ಅನೇಕರು ಕಸುಬು ಮಾಡಿಕೊಂಡಿದ್ದಾರೆ.

ಸತಿ-ಪತಿಗಳಾಗಿ ಬಾಳಿ ಬದುಕಬೇಕಿದ್ದ ನವ ಜೋಡಿಯೊಂದು ಪ್ರಿ ವೆಡ್ಡಿಂಗ್ ಫೋಟೋಶೂಟ್ ಮಾಡಿಸಲು ಹೋಗಿ ದುರಂತ ಅಂತ್ಯ ಕಂಡಿದ್ದಾರೆ.

ನವ ಜೋಡಿ ಮೈಸೂರಿನ ತಲಕಾಡಿನಲ್ಲಿ ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಲು ಮುಂದಾಗಿದ್ದು ತಲಕಾಡಿನ ಮುಡುಕುತೊರೆ ಗ್ರಾಮದಲ್ಲಿ ಹರಿಯುವ ಕಾವೇರಿ ನದಿಯಲ್ಲಿ ತೆಪ್ಪದಲ್ಲಿ ಫೋಟೋಶೂಟ್ ಮಾಡಿಸಲು ಮುಂದಾಗಿತ್ತು. ಆದರೆ ತೆಪ್ಪ ಮುಳುಗಿ ನವ ಜೋಡಿ ದುರಂತ ಸಾವು ಕಂಡಿದ್ದಾರೆ.

ಮೈಸೂರಿನ ಕ್ಯಾತಮಾರನಹಳ್ಳಿ ನಿವಾಸಿಗಳಾದ ಚಂದ್ರು ಮತ್ತು ಶಶಿಕಲಾ ಮೃತ ದುರ್ದೈವಿಗಳು. ಇವರ ಮದುವೆ ನವೆಂಬರ್ 22ಕ್ಕೆ ನಿಶ್ಚಯವಾಗಿತ್ತು. ಆದರೆ ಮದುವೆಗೂ ಮುನ್ನವೇ ನವ ಜೋಡಿ ಜಲಸಮಾಧಿಯಾಗಿದ್ದಾರೆ.

ಫೋಟೊಗ್ರಾಫರ್ ಹಾಗೂ ಇಬ್ಬರು ಸಂಬಂಧಿಕರೊಂದಿಗೆ ಫೋಟೊ ತೆಗೆಸಿಕೊಳ್ಳಲು ಇವರು ಇಲ್ಲಿಗೆ ಬಂದಿದ್ದರು. ಮೀನು ಹಿಡಿಯಲು ಬಳಸುವ ಸಣ್ಣದೊಂದು ತೆಪ್ಪದ ಮೇಲೆ ಕುಳಿತ ಇವರು ಅಂಬಿಗನೊಂದಿಗೆ 10 ಅಡಿ ದೂರಕ್ಕೆ ಹೋಗಿದ್ದಾರೆ. ಅಲ್ಲಿ ಅಕ್ಕಪಕ್ಕ ಕುಳಿತು ಪರಸ್ಪರ ಹೆಗಲ ಮೇಲೆ ಕೈ ಹಾಕಿಕೊಂಡ ರೀತಿಯಲ್ಲಿ ಕ್ಯಾಮೆರಾಗೆ ಫೋಸ್‌ ನೀಡುತ್ತಿದ್ದ ವೇಳೆ ಒಂದೇ ಕಡೆ ಭಾರ ಹೆಚ್ಚಾಗಿ ತೆಪ್ಪ ಮುಗುಚಿದೆ. ಕೂಡಲೇ ಅಂಬಿಗ ಈಜಿ ದಡ ಸೇರಿದ್ದಾನೆ. ಇವರಿಬ್ಬರೂ ಮುಳುಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.’

ಘಟನೆ ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರ ಶವಗಳನ್ನು ಹೊರಕ್ಕೆ ತೆಗೆದಿದ್ದಾರೆ. ಈ ಸಂಬಂಧ ತಲಕಾಡು ಪೊಲೀಸ್ ಠಾಣೆಯಲ್ಲಿ ತೆಪ್ಪ ಚಾಲನೆ ಮಾಡುತ್ತಿದ್ದ ಮೂಗಪ್ಪ ವಿರುದ್ಧ ಪ್ರಕರಣ ದಾಖಲಾಗಿದೆ. ನಂಜನಗೂಡು ಡಿವೈಎಸ್ಪಿ ಪ್ರಭಾಕರರಾವ್ ಶಿಂಧೆ, ಸರ್ಕಲ್ ಇನ್ಸ್‍ಪೆಕ್ಟರ್ ಲಕ್ಷ್ಮೀಕಾಂತ ತಳವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಇಷ್ಟರಲ್ಲೇ ಮದುವೆಯಾಗಬೇಕಿದ್ದವರು ದುರಂತದಲ್ಲಿ ಸಾವಿಗೀಡಾಗಿದ್ದು, ಇವರಿಬ್ಬರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಕ್ಯಾತಮಾರನಹಳ್ಳಿಯ ಶಿವಣ್ಣ ಮತ್ತು ರತ್ನ ದಂಪತಿಯ ಪುತ್ರ ಚಂದ್ರು ಕಾಂಕ್ರೀಟ್ ಮಿಕ್ಸಿಂಗ್ ಯಂತ್ರಗಳನ್ನಿಟ್ಟುಕೊಂಡು ವ್ಯವಹಾರ ನಡೆಸುತ್ತಿದ್ದರು. ಕುಟುಂಬಕ್ಕೆ ಈತನೇ ಆಧಾರಸ್ತಂಭವಾಗಿದ್ದು, ಈತನ ಸಾವಿನಿಂದಾಗಿ ಕುಟುಂಬಸ್ಥರು ದಿಕ್ಕು ತೋಚದಂತಾಗಿದ್ದಾರೆ.

Also read: ನಿವೃತ್ತ ಸಬ್ ಇನ್ಸ್ ಪೆಕ್ಟರ್ ಚಿಂದಿ ಆಯುತ್ತಿರೋದು ಯಾಕೆ ಗೊತ್ತ..??