ಮೈಸೂರು ರಾಜರಿಗೆ ಗಂಡು ಮಗು ಜನನ: ಅಲಮೇಲಮ್ಮನ ಶಾಪದಿಂದ ವಿಮುಕ್ತಿಯಾಯಿತಾ?

0
1278

ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪತ್ನಿ ತ್ರಿಷಿಕಾ ಕುಮಾರಿ ಬುಧವಾರ ರಾತ್ರಿ ಸುಮಾರು 9.50 ಕ್ಕೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಹೀಗಾಗಿ ಅಂಬಾ ವಿಲಾಸ ಅರಮನೆಯಲ್ಲಿ ಎಲ್ಲಿಲ್ಲದ ಸಂಭ್ರಮ ಮನೆಮಾಡಿದೆ.

ಮೈಸೂರು ಯದುವಂಶಕ್ಕೆ 1953ರಲ್ಲಿ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಜನನವಾದ ನಂತರ ಇಲ್ಲಿಯವರೆಗೆ ಯಾವುದೇ ಗಂಡು ಮಕ್ಕಳು ಜನಿಸಿರಲಿಲ್ಲ, ಈಗ 64 ವರ್ಷಗಳ ಬಳಿಕ ಮೈಸೂರಿನ ಯದುವಂಶಕ್ಕೆ ಗಂಡು ಮಗು ಜನಿಸಿದೆ. ಹಾಗಾದರೆ ಅಂದಿನ ಮೈಸೂರು ಮಹಾರಾಜ, ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತನ್ನ ಕುಟುಂಬಕ್ಕಿರುವ ಶಾಪದ ಬಗ್ಗೆ ಹೇಳಿಕೆಯನ್ನು ನೀಡಿದ್ದರು, ಅದು ಏನಾಯಿತು ಅಂತಾನಾ.

ಇದುವರೆಗಿನ ಇತಿಹಾಸವನ್ನು ಅವಲೋಕಿಸಿದರೆ, ರಾಜವಂಶಸ್ಥರು ದತ್ತು ಪಡೆದುಕೊಂಡವರಿಗೆ ಸಂತಾನದ ತೊಂದರೆಯಾದ ಉದಾಹರಣೆಗಳಿಲ್ಲ, ಮೈಸೂರು ಸಾಮ್ರಾಜ್ಯದ ಒಂಬತ್ತನೇ ಅರಸರವರೆಗೂ ಮಕ್ಕಳಾಗಿವೆ. ಯದುವೀರ್ ಅವರನ್ನು 2013ರಲ್ಲಿ ಸಂಬಂಧಿಕರಲ್ಲೇ ದತ್ತು ತೆಗೆದುಕೊಳ್ಳಲಾಗಿತ್ತು ಎಂಬುದು ಗಮನಿಸಬೇಕಾದ ವಿಷಯ.

ಹಾಗಾದರೆ, ಮೈಸೂರು ರಾಜ ಮನೆತನದ ಮೇಲಿದ್ದ ಅಲಮೇಲಮ್ಮನ ಶಾಪ ವಿಮೋಚನೆಯಾದಂತಾಗಿದೆಯೇ, ಖಂಡಿತ ಇಲ್ಲ ಎನ್ನುತ್ತದೆ ಇತಿಹಾಸ, ಹೌದು ಯದುವೀರ್ ದಂಪತಿಗಳಿಗೆ ಹುಟ್ಟಿದ ಮಗುವಿಗೆ ಸಂತಾನಪ್ರಾಪ್ತಿಯಾದಾಗ ಮಾತ್ರ ಅಲಮೇಲಮ್ಮನ ಶಾಪ ವಿಮೋಚನೆಯಾದಂತಾಗುತ್ತದೆ. ಅಲಮೇಲಮ್ಮ, “ತಲಕಾಡು ಮರಳಾಗಲಿ”, “ಮಾಲಿಂಗಿ ಮಡುವಾಗಲಿ”, “ಮೈಸೂರು ಅರಸರಿಗೆ ಮಕ್ಕಳಾಗದಿರಲಿ” ಎಂದು ಶಾಪ ಹಾಕಿ ಕಾವೇರಿ ನದಿಗೆ ಹಾರಿ ಸಾವನ್ನಪ್ಪುತ್ತಾಳೆ. ಅಲಮೇಲಮ್ಮನ ಶಾಪ ವಿಮೋಚನೆಗೋಸ್ಕರ ಮೈಸೂರು ಯದುವಂಶದವರು , ಪ್ರತಿವರ್ಷ ದಸರಾದ ಸಂದರ್ಭದಲ್ಲಿ ಆಕೆಗೆ ವಿಶೇಷ ಪೂಜೆಸಲ್ಲಿಸಲಾಗುತ್ತದೆ. ಇದೆ ಕಾರಣದಿಂದ ಇದುವರೆಗೆ ಮೈಸೂರು ರಾಜ ಮನೆತನಕ್ಕೆ ಗಂಡು ಮಕ್ಕಳಾಗಿರಲಿಲ್ಲ ಎಂದು ಅರಮನೆ ಇತಿಹಾಸಕಾರರು ಹೇಳುತ್ತಾರೆ.

ಇತ್ತ ಯದುವಂಶಕ್ಕೆ ಹೊಸ ಅತಿಥಿಯ ಆಗಮನದ ಕಾರಣ ಮನೆದೇವರಾದ ಶ್ರೀ ಚಾಮುಂಡೇಶ್ವರಿ ದೇವಿಗೆ, ಶೃಂಗೇರಿಯ ಶಾರದಾ ಪೀಠದಲ್ಲಿ, ಪರಕಾಲ ಸ್ವತಂತ್ರ ಮಠದಲ್ಲಿ ಹಾಗು ಅರಮನೆಯೊಳಗಿನ ದೇವಾಲಯಗಳಿಗೆ ವಿಶೇಷ ಪೂಜೆ ನೆರವೇರಿಸಿಲಾಗುತ್ತಿದೆ.

ಒಟ್ಟಿನಲ್ಲಿ ರಾಜ ಮನೆತನಕ್ಕೆ ಹೊಸ ಅತಿಥಿಯ ಆಗಮನದಿಂದ ಮೈಸೂರಿನೆಲ್ಲೆಡೆ ಹಬ್ಬದ ವಾತಾವರಣ ಮನೆಮಾಡಿದೆ.