ಭಾರತದ ವಧುವನ್ನು ವರಿಸುವ ಕನಸು ಕಾಣುತ್ತಿರುವ ಎನ್’ಆರ್’ಐಗಳಿಗಾಗಿ ಬರುತ್ತಿದೆ ಹೊಸ ರೂಲ್ಸ್..!

0
866

ಹೆಣ್ಣು ಮಕ್ಕಳಿಗೆ ವರನನ್ನು ಹುಡುಕುವುದು ಪಾಲಕರ ಜವಾಬ್ದಾರಿ ಕೆಲಸಗಳಲ್ಲೊಂದು. ಗುಣವಂತ, ವಿದ್ಯಾವಂತ ಹಾಗೂ ಶ್ರೀಮಂತ ವರ ಬೇಕೆಂಬುದು ಎಲ್ಲರ ಬೇಡಿಕೆ. ಎನ್ ಆರ್ ಐ ವರ ಬೇಕು ಎನ್ನುವ ಬೇಡಿಕೆ ಕೂಡ ದಿನ ಕಳೆದಂತೆ ಹೆಚ್ಚಾಗ್ತಾ ಇದೆ.  ಎನ್ ಆರ್ ಐ ವರನಿಗಾಗಿ ಮ್ಯಾಟ್ರಿಮೋನಿಯಾ ಮೊರೆ ಹೋಗ್ತಾರೆ.

ಅವರ ಆಸೆಯಂತೆ ಉತ್ತಮ ಉದ್ಯೋಗದಲ್ಲಿರುವ ವರ ಕೂಡ ಸಿಗ್ತಾನೆ. ಆತನ ಪೂರ್ವಾಪರ ವಿಚಾರಿಸಿ, ಅದ್ಧೂರಿಯಾಗಿ ಮಗಳ ಮದುವೆಯನ್ನೂ ಮಾಡಿ ಕೊಡ್ತಾರೆ. ಮಗಳು ವಿದೇಶಕ್ಕೆ ಹೋಗ್ತಿದ್ದಾಳೆಂಬ ನೋವಿನ ನಡುವೆಯೂ, ಸುಖವಾಗಿ ಬದುಕಲಿ ಎಂಬ ಹಾರೈಕೆ ಅವರದ್ದು. ವಿದೇಶದಲ್ಲಿರುವ ವರನನ್ನು ಪಡೆಯುವುದು ಹುಡುಗಿಯರ ಕನಸು ಕೂಡ. ಅದೊಂದು ಪ್ರೆಸ್ಟೀಜ್ ವಿಚಾರ. ಹಾಗಾಗಿಯೇ ಅನೇಕ ಹುಡುಗಿಯರು ಎನ್ ಆರ್ ಐ ವರ ಎಂದ್ರೆ ತಕ್ಷಣ ಒಪ್ಪಿಕೊಳ್ತಾರೆ.

ಮಗಳ ಮದುವೆಗಾಗಿ ಸಾಕಷ್ಟು ಹಣ ಖರ್ಚು ಮಾಡುವ ಪಾಲಕರು ಮದುವೆಯಾದ ಕೆಲವೇ ತಿಂಗಳ ನಂತ್ರ ಪಶ್ಚಾತಾಪ ಪಡ್ತಾರೆ. ಮೋಸಗಾರನ ಜೊತೆ ಮಗಳ ಮದುವೆ ಮಾಡಿದ್ದೇವೆಂಬ ಸತ್ಯ ಗೊತ್ತಾಗುತ್ತದೆ. ಇತ್ತೀಚಗಂತೂ ಇಂತ ಸುದ್ದಿಗಳು ಹೆಚ್ಚಾಗೆ ಕೇಳಿ ಬರ್ತಿವೆ.

ಮದುವೆಯಾಗಿ ಗಂಡನ ಜೊತೆ ವಿದೇಶಕ್ಕೆ ತೆರಳುವ ಕನಸು ಹೊತ್ತ ಹುಡುಗಿಯರಿಗೆ, ಮತ್ತೆ ಬಂದು ಕರೆದುಕೊಂಡು ಹೋಗ್ತೀನಿ ಅಂತ ಸುಳ್ಳು ಹೇಳಿ ಮೋಸ ಮಾಡುವ ಎನ್ ಆರ್ ಐಗಳ ಸಂಖ್ಯೆ ಹೆಚ್ಚಾಗಿದೆ. ದಿನದಿಂದ ದಿನಕ್ಕೆ ಮೋಸ ಹೋಗುವ ಭಾರತೀಯ ಮಹಿಳೆಯರ ಸಂಖ್ಯೆ ಹೆಚ್ಚಾಗ್ತಾ ಇದೆ. ದೇಶದಲ್ಲಿ ಈಗಾಗಲೆ ಮಹಿಳೆಯರನ್ನು ಬಿಟ್ಟುಬಿಟ್ಟ ಅಂತಹ ಎನ್‌ಆರ್‌ಐ ಪ್ರಕರಣಗಳು 3328ರವೆಗೂ ಇವೆ. ವಿದೇಶಾಂಗ ಸಚಿವಾಲಯ ಕೂಡ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸ್ತಾ ಇದೆ. ಎನ್ ಆರ್ ಐ ಅಥವಾ ಬೇರೆ ಯಾವುದೇ ವರನನ್ನು ಮದುವೆಯಾಗಿ ಮೋಸ ಹೋದ ಭಾರತೀಯ ಮಹಿಳೆಯರ ನೋವಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಮುಂದಾಗಿದೆ. ಹೊಸ ರೂಲ್ಸ್ ಕೂಡ ಜಾರಿಗೆ ಬರಲಿದೆ.

ಇನ್ನು ಮುಂದೆ ಭಾರತೀಯ ಮಹಿಳೆಯರನ್ನು ವರಿಸಿ ವಿದೇಶಕ್ಕೆ ಹಾರಿ ಹೋಗಿ ಮೋಸ ಮಾಡುವ ವರನ ಆಸ್ತಿ ಕೇಂದ್ರ ಸರ್ಕಾರದ ಪಾಲಾಗಲಿದೆ. ಹೌದು.. ಭಾರತೀಯ ಮಹಿಳೆಯರಿಗೆ ವಂಚಿದ ಎನ್ ಆರ್ ಐಗಳಿಗೆ ಕೇಂದ್ರ ಸರ್ಕಾರ ಮೊದಲು ಮೂರು ನೋಟಿಸ್ ಗಳನ್ನು ಕಳುಸುತ್ತದೆ. ಯಾವುದಕ್ಕೂ ಉತ್ತರ ಬರದಿದ್ದಾಗ ಆತನ ಮೇಲೆ ದೂರು ದಾಖಲಿಸುತ್ತದೆ. ನಂತರ ಆತನ ಒಡೆತನದ ಆಸ್ತಿಯನ್ನು ಸ್ವಾಧೀನ ಪಡಿಸಿಕೊಳ್ಳುತ್ತದೆ.

ಈಗಾಗಲೇ ಕೇಂದ್ರ ಮಹಿಳಾ ಶಿಶು ಸಂರಕ್ಷಣಾ ಇಲಾಖೆ ಸಚಿವೆ ಮೇನಕಾ ಗಾಂಧಿ ನೇತೃತ್ವದಲ್ಲಿ ಈ ಕಾನೂನನ್ನು ಜಾರಿಗೆ ತರುವ ಕೆಲಸಗಳು ನಡೆಯುತ್ತಿವೆ. ಶೀಘ್ರದಲ್ಲೇ ಈ ಕಾನೂನು ಜಾರಿಗೆ ಬರಲಿದೆ.