ಜಗತ್ತಿನ ಅತಿದೊಡ್ಡ ಗಡಿಯಾರ, 2500 ಕೆಜಿ ದೊಡ್ಡದಾದ ಗಂಟೆ ನೋಡಬೇಕಂತಿದ್ರೆ ಬೆಂಗಳೂರಿನ ಸರ್ವಧರ್ಮಗಳ ಸಮನ್ವಯ ಕೇಂದ್ರವಾದ ಈ ಓಂಕಾರಗುಡ್ಡಕ್ಕೋಮ್ಮೆ ಭೇಟಿ ನೀಡಿ…

0
1044

ನಿಜಕ್ಕೂ ಇದು ಸರ್ವಧರ್ಮಗಳ ಸಮನ್ವಯ ಕೇಂದ್ರವೇ ಹೌದು. ಜಗತ್ತಿನ ದೊಡ್ಡ ಗಡಿಯಾರವನ್ನು ಹೊಂದಿರುವ ಗುಡ್ಡದ ಪರಿಸರದಲ್ಲಿ ಹಿಂದೂ, ಕ್ರೈಸ್ತ, ಮುಸಲ್ಮಾನ, ಭೌದ್ದ, ಜೈನ ಹೀಗೆ ಎಲ್ಲಾ ಧರ್ಮಗಳು ಇಲ್ಲಿ ಪ್ರತಿಷ್ಠಾಪಿತಗೊಂಡಿದ್ದು ಇವೆಲ್ಲಕ್ಕೂ ಕಳಶವಿಟ್ಟಂತೆ ದ್ವಾದಶ ಲಿಂಗಗಳ ಭವ್ಯ ದೇಗುಲ, ಮತ್ಸ್ಯನಾರಾಯಣ ಸ್ವಾಮೀ ದೇಗುಲಗಳನ್ನು ಒಳಗೊಂಡಂತೆ ಹಚ್ಚ ಹಸುರಿನ ರಮಣೀಯ ಪರಿಸರದಲ್ಲಿರುವ ಓಂಕಾರೇಶ್ವರನ ದಿವ್ಯ ಸನ್ನಿಧಿಯೂ ಬೆಂಗಳೂರಿನ ಉತ್ತರಹಳ್ಳಿ -ಕೆಂಗೇರಿ ಮುಖ್ಯರಸ್ತೆಯ ಎಡಭಾಗಕ್ಕಿದೆ.

ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಸದ್ಗುರು ಶ್ರೀಶಿವಪುರಿ ಮಾಹಾಸ್ವಾಮಿಗಳ ನೇತೃತ್ವದಲ್ಲಿ ನಿರ್ಮಿಸಲ್ಪಟ್ಟ, ಮೊದಲ ನೋಟದಲ್ಲೇ ಮನಸೂರೆಗೊಳ್ಳುವಂತಹ ಲಂಡನ್ನಿನ ಬಿಗ್ ಬೆನ್ ಗೋಪುರ ಗಡಿಯಾರಕ್ಕಿಂತಲೂ ದೊಡ್ಡದಾದ ೪೦ ಅಡಿ ಎತ್ತರದ ವಿಶ್ವದ ಬೃಹತ್ ಗಡಿಯಾರವು ತನ್ನ ಭವ್ಯತೆಯಿಂದ, ಭಿನ್ನತೆಯಿಂದ ಇಡೀ ದೈವಿಕ ಪರಿಸರಕ್ಕೆ ತನ್ನದೇ ಆದ ಶೋಭೆ ತಂದಿದೆ. ಹೆಚ್.ಎಂ.ಟಿ. ಯವರ ಬೃಹತ್ ಗಡಿಯಾರವನ್ನು ಕಣ್ತುಂಬಿಕೊಂಡು ಸುಮಾರು ೫೦ ಮೆಟ್ಟಿಲುಗಳನ್ನೇರಿ ನಿಂತಲ್ಲಿ ಎದುರಾಗುತ್ತದೆ ಸರ್ವಧರ್ಮಗಳ ಬೀಡು.
ಬೃಹತ್ ಆಲದ ಮರದ ಸಮೂಚ್ಚಯದಲ್ಲಿನ ಆವರಣದಲ್ಲಿ ಓಂಕಾರೇಶ್ವರ ಹಾಗು ವನದುರ್ಗೆಯರನ್ನು ಸುತ್ತುವರೆದಿರುವ ಬುದ್ಧರ ಗೌತಮಬುದ್ಧ, ಜೈನರ ಮಹಾವೀರ, ಕ್ರೈಸ್ತರ ಎಸು,ಮುಸಲ್ಮಾನರ ಮೊಹಮದ್ ಪೈಂಗಂಬರ, ಹಿಂದೂ ಧರ್ಮ ಪ್ರತಿಪಾದಕರಾದ ಜಗದ್ಗುರುಗಳಾದ ಶಂಕಾರಾಚಾರ್ಯ, ಮದ್ವಾಚಾರ್ಯ ಹಾಗು ರಾಮಾನುಜಾಚಾರ್ಯರ, ಸಿಖ್ಖರ ಗುರುಗ್ರಂಥ ಹೀಗೆ ಜಗತ್ತಿನ ಎಲ್ಲಾ ಧರ್ಮಗಳ ಪ್ರತೀಕವೆಂಬಂತೆ ಈ ಎಲ್ಲಾ ಪುಣ್ಯಪುರುಷರ ಸುಂದರ ಮೂರ್ತಿಗಳು ಆಸ್ತಿಕರನ್ನಲ್ಲದೆ ಅರಸಿ ಬರುವ ಪ್ರವಾಸಿಗರ ಕಣ್ಮನ ಸೆಳೆಯುತ್ತವೆ. ಪ್ರತಿಯೊಂದು ಮೂರ್ತಿಗಳನ್ನು ಒಂದೊಂದು ಪ್ರತ್ಯೇಕ ಮಂಟಪಗಳಲ್ಲಿ ಪ್ರತಿಷ್ಠಾಪಿಸಲಾಗಿದೆ. ಏಕಕಾಲದಲ್ಲಿ ಜಗತ್ತಿನ ಎಲ್ಲಾ ಧರ್ಮಗಳ ಪ್ರತೀಕದಂತಿರುವ ಈ ಮಹನೀಯರನ್ನು ಕಣ್ತುಂಬಿಕೊಳ್ಳುವುದೇ ಒಂದು ಭಾಗ್ಯ. ಇನ್ನು ಇಲ್ಲಿಂದ ಕಾಣುವ ಪರಿಸರದ ರಮಣೀಯತೆ ಕಣ್ಣಿಗೆ ಹಬ್ಬವನ್ನುಂಟುಮಾಡುತ್ತವೆ.

ಈ ಸರ್ವಧರ್ಮಗಳ ಬೀಡಿನ ಹಿಂಬದಿಯಲ್ಲೇ ನಿರ್ಮಾಣವಾಗಿರುವ ಭಾರತದ ಎರಡನೇ ಹಾಗು ರಾಜ್ಯದ ಮೊಟ್ಟಮೊದಲ ಬಹು ಸುಂದರವಾದ ಮತ್ಸ್ಯನಾರಾಯಣ ಸ್ವಾಮೀ ದೇಗುಲವು ಭಕ್ತಿ ಸೂದೆಯನ್ನು ಹರಿಸುತ್ತದೆ. ಬಹು ಆಕರ್ಷಣೀಯವಾದ ಆಳೆತ್ತರದ ಮತ್ಸ್ಯ ನಾರಾಯಣ ಮೂರ್ತಿಯ ಚೆಲುವನ್ನು ಕಣ್ತುಂಬಿಕೊಳ್ಳಲು ಎರಡು ಕಣ್ಣು ಸಾಲದು. ಇವೆಲ್ಲಕ್ಕೊ ಕಳಶವಿಟ್ಟಂತೆ ಇರುವುದೇ ಇತ್ತೀಚಿಗಷ್ಟೇ ನಿರ್ಮಾಣಗೊಂಡ ಬೃಹತ್ ದ್ವಾದಶಲಿಂಗ ದೇವಸ್ಥಾನ. ಹೊರಒಟದಲ್ಲಿ ಸೊಗಸಾದ ಶ್ವೇತವರ್ಣಗಳಿಂದ ಕಂಗೊಳಿಸುವ ದೇಗುಲದಲ್ಲಿ ಭರತಖಂಡದ ದ್ವಾದಶ ಲಿಂಗಗಳನ್ನು ಪ್ರತ್ಯೇಕ ಗರ್ಭಗುಡಿಯಲ್ಲಿ ಸ್ಥಾಪಿಸಲಾಗಿದೆ.

ದ್ವಾದಶಲಿಂಗದ ದರ್ಶನ ಮಾಡಿಕೊಂಡು ಕೆಳಗೆ ಬಂದಲ್ಲಿ ಶ್ರೀ ಶಿವಪುರ ಸ್ವಾಮಿಗಳ ಸಮಾಧಿ ಸ್ಥಳದ ಎದುರಿಗೆ ೧೨೦೦ ಕೆಜಿ ಭಾರವಿರುವ ಪಂಚಲೋಹದ ಅತಿ ದೊಡ್ಡ ಗಂಟೆ ಗಮನ ಸೆಳೆಯುತ್ತದೆ. ಮುಂದೆ ಕಲ್ಲಿನಲ್ಲಿ ಕಡೆದ ಕೇವಲ ಕೊಕ್ಕಿನ ಬಾಲೆನ್ಸ್ನನಿಂದ ಹಾರುವ ರೀತಿಯಲ್ಲಿ ಕೆತ್ತಲ್ಪಟ್ಟಿರುವ ಗರುಡ ಮತ್ತು ಇತರ ಶಿಲ್ಪಕಲಾಕೃತಿಗಳು ನೋಡುಗರನ್ನು ಮಂತ್ರ ಮುಗ್ದಗೊಳಿಸುತ್ತದೆ.

ಮೆಜೆಸ್ಟಿಕ್ ನಿಂದ ಪದ್ಮನಾಭನಗರ,ಉತ್ತರಹಳ್ಳಿ, ಚನ್ನಸಂದ್ರಮಾರ್ಗದಲ್ಲಿ ಕೆಂಗೇರಿಗೆ ಹೋಗುವ ಮಾರ್ಗದಲ್ಲಿ ಕೇವಲ ೨೦ ಕಿಮಿ ದೂರದಲ್ಲಿದೆ ಈ ರಮಣೀಯ ಪರಿಸರ.