ಆನ್ಲೈನ್ನಲ್ಲಿ ಮಹಿಳೆಯರ ಶೋಷಣೆ ದಿನೇ ದಿನೇ ಹೆಚ್ಚಾಗುತ್ತಿದೆ: ಇದರಿಂದ ಬಚಾವ್ ಆಗಲು ಮಹಿಳೆಯರು ಏನು ಮಾಡಬೇಕು??

0
552

ಪ್ರಾಚೀನ ಕಾಲದಿಂದಲೂ ಮಹಿಳೆಯರ ಮೇಲೆ ಶೋಷಣೆಗಳು ನಡೆಯುತ್ತಲೇ ಇದೆ. ಆದರೆ, ಇತ್ತೀಚೆಗೆ ಸೋಶಿಯಲ್ ಮೀಡಿಯಾಗಳಲ್ಲಿ ಯುವತಿಯರು ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಾಗಿದೆ. ಇದಕ್ಕೆ ಪ್ರಮುಖ ಕಾರಣ ಏನು ಗೊತ್ತಾ..?

ಪ್ರೀತಿ- ಸಾಂಸಾರಿಕ ಸಂಬಂಧಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಾಗಿ ನಡೆದಿರುವುದರಲ್ಲಿ ಅಚ್ಚರಿಯೇನಲ್ಲ. ಆದರೆ, ಈ ಅಂಕಿ-ಅಂಶಗಳಲ್ಲಿ ಕಾಣದ, ಹಿಡಿತಕ್ಕೆ ಸಿಗದ ಹಲವು ವಿಭಿನ್ನ ಅಂಶಗಳು ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಹಲವು ಆಯಾಮಗಳನ್ನು ನೀಡುತ್ತವೆ ಎಂಬುದು ಗಮನಾರ್ಹ. ಮಹಿಳೆಯರು ಉದ್ಯೋಗ ಸ್ಥಳದಲ್ಲಿ ಕಿರುಕುಳ ಒಳಗೊಂಡಂತೆ ವ್ಯಂಗ್ಯ ಮಾತು, ಟೀಕೆಗಳಿಂದ ಅಸಹನೀಯ ಎನಿಸುವ ಕಿರುಕುಳದವರೆಗೆ ಮಹಿಳೆಯರು ತಮ್ಮ ಮೇಲಧಿಕಾರಿ, ಸಹೋದ್ಯೋಗಿ, ತಮ್ಮ ಕೈಕೆಳಗೆ ಕೆಲಸ ಮಾಡುವ ನೌಕರರಿಂದ ದೌರ್ಜನ್ಯವನ್ನು ಎದುರಿಸುವುದು ಸಾಮಾನ್ಯ. ಆದರೆ, ಅಂಕಿ-ಅಂಶಗಳಿಗೆ ಸ್ಪಷ್ಟವಾಗಿ ಲಭ್ಯವಾಗದ ಮತ್ತೊಂದು ಬಗೆಯ ದೌರ್ಜನ್ಯವೆಂದರೆ ‘ಡಿಜಿಟಲ್ ದೌರ್ಜನ್ಯ’.

ಆದರೆ, ಅಧ್ಯಯನವೊಂದರ ಪ್ರಕಾರ, ಆನ್ಲೈನ್ನಲ್ಲಿ ದೌರ್ಜನ್ಯದ ಪ್ರಯತ್ನಗಳು ನಡೆದಾಗ ಪೊಲೀಸರನ್ನು ಸಂಪರ್ಕಿಸಿದ ಮಹಿಳೆಯರಿಗೆ ಬಂದ ಸಲಹೆ ‘ಬ್ಲಾಕ್ ಮಾಡಿ ಅಥವಾ ನಿರ್ಲಕ್ಷಿಸಿ’. ಆನ್ಲೈನ್ ದೌರ್ಜನ್ಯಗಳು ಬೆಳಕಿಗೆ ಬಾರದಿರುವುದಕ್ಕೆ ಕಾರಣಗಳೆಂದರೆ ಸಾಮಾಜಿಕ ಕಳಂಕದ ಭಯ, ಕಾನೂನಿನ ಬಗ್ಗೆ ಅಜ್ಞಾನ, ಶಾಲಾ ಕಾಲೇಜು ಹಾಗೂ ಕುಟುಂಬದಲ್ಲಿ ಬೆಂಬಲದ ಕೊರತೆ.

ತಂತ್ರಜ್ಞಾನ ಮುಂದುವರೆದಂತೆಲ್ಲಾ ಹೆಚ್ಚು ಹೆಚ್ಚು ದೌರ್ಜನ್ಯ, ಮೋಸ ಪ್ರಕರಣಗಳು ಬೆಳೆಯುತ್ತಲೇ ಸಾಗಿದೆ. ಅದರಲ್ಲಿಯೂ ಸಾಮಾಜಿಕ ಜಾಲತಾಣ ಇಡೀ ಜಗತ್ತನ್ನು ಎಷ್ಟು ಹತ್ತಿರ ಮಾಡುತ್ತಿದೆಯೋ, ಅಷ್ಟೇ ಅಪಾಯಕಾರಿಯಾಗಿಯೂ ಗುರುತಿಸ್ಪಡುತ್ತಿದೆ, ಸೈಬರ್ ಕ್ರೈಂಗಳ ಸಂಖ್ಯೆಯೂ ಹೆಚ್ಚುತ್ತಲೇ ಸಾಗಿದೆ.

ಅಂಥದ್ದೇ ಒಂದು ಆತಂಕದ ವಿಷಯವನ್ನು ವಿಶ್ವಸಂಸ್ಥೆ ಹಾಗೂ ಡಿಎನ್ಎ ಆ್ಯನಲಿಸೀಸ್ ನಡೆಸಿರುವ ಸಮೀಕ್ಷೆಯಿಂದ ಹೊರಬಂದಿದೆ. ಇದಕ್ಕಾಗಿಯೇ ವಿವಿಧ ಹೆಸರುಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಚಾಲೆಂಜ್ಗಳು, ಫೋಟೋ ಸ್ಪರ್ಧೆಗಳು ಇತ್ಯಾದಿಗಳಿಗೆ ಮಹಿಳೆಯರು ತನ್ನ ಫೋಟೋಗಳನ್ನು ಅಪ್ಲೋಡ್ ಮಾಡುವಾಗ 100 ಬಾರಿ ಯೋಚಿಸಿ ಎಂದು ಪದೇ ಪದೇ ಎಚ್ಚರಿಕೆ ಸಂದೇಶ ನೀಡಲಾಗುತ್ತಿದೆ. ತೀರಾ ವೈಯಕ್ತಿಯ ವಿವರಗಳನ್ನು ಫೀಲಿಂಗ್ ಬ್ಯಾಡ್, ಫೀಲಿಂಗ್ ಲೋನ್ಲಿ,ಇತ್ಯಾದಿ ಮೂಲಕ ಸಾರ್ವಜನಿಕವಾಗಿ ವ್ಯಕ್ತಪಡಿಸುವುದನ್ನೂ ನಿಲ್ಲಿಸಬೇಕಿದೆ ಎಂದು ಎಚ್ಚರಿಕೆಯನ್ನೂ ಕೊಡಲಾಗಿದೆ. ಇಂಥ ಮಹಿಳೆಯರ ಮೇಲೆ ಕಣ್ಣಿಡುವ ಕೆಲವರು ಅವರ ಭಾವನೆಗಳನ್ನು ತಿಳಿದುಕೊಂಡು ದೌರ್ಜನ್ಯ ಎಸಗುತ್ತಿರುವ ಬಗ್ಗೆ ಇದಾಗಲೇ ಹಲವಾರು ಮಂದಿ ಎಚ್ಚರಿಕೆ ನೀಡಿದ್ದಾರೆ.

ವಿಶ್ವ ಸಂಸ್ಥೆಯು, ಭಾರತ ಸೇರಿದಂತೆ ವಿಶ್ವದ 22 ರಾಷ್ಟ್ರಗಳಲ್ಲಿ ಈ ಸಮೀಕ್ಷೆ ನಡೆಸಿತ್ತು. ಇದಕ್ಕಾಗಿ ಪ್ರತಿ ರಾಷ್ಟ್ರದಿಂದ 15 ರಿಂದ 25 ವರ್ಷದೊಳಗಿನ 14 ಸಾವಿರಕ್ಕಿಂತ ಹೆಚ್ಚು ಮಹಿಳೆಯರನ್ನೂ ಆಯ್ಕೆ ಮಾಡಲಾಗಿತ್ತು. ಇದರ ವರದಿಯ ಪ್ರಕಾರ ಜಾಗತಿಕವಾಗಿ ಶೇ. 35ರಷ್ಟು ಮಹಿಳೆಯರು ವಿವಿಧ ತೆರೆನಾದ ಸೈಬರ್ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಇವರ ಪೈಕಿ ಶೇ.60ರಷ್ಟು ಮಂದಿಗೆ ಸಾಮಾಜಿಕ ಜಾಲತಾಣಗಳ ಮೂಲಕವೇ ಹಿಂಸೆ ನೀಡಲಾಗುತ್ತಿದೆ. ಈ ಕಾರಣದಿಂದ ಸುಮಾರು ಶೆ. 20ರಷ್ಟು ಮಹಿಳೆಯರು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ನಿಷ್ಕ್ರೀಯಗೊಳಿಸಿದ್ದಾರೆಂದು ತಿಳಿಸಿದೆ. ಆದರೆ ವಿಷಾದದ ಸಂಗತಿ ಎಂದರೆ ಶೇ. 25ರಷ್ಟು ಮಂದಿ ಮಾತ್ರ ಶಿಕ್ಷೆಗೊಳಗಾಗುತ್ತಿದ್ದಾರೆ.

ಜಗತ್ತಿನಾದ್ಯಂತ 400 ದಶಲಕ್ಷಕ್ಕಿಂತಲೂ ಹೆಚ್ಚಿನ ಮಹಿಳೆಯರು ಸೈಬರ್ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಈ ಎಲ್ಲಾ ವರದಿಗಳು ಹೇಳಿರುವ ಪ್ರಕಾರ ಶೇ. 39ರಷ್ಟು ಮಹಿಳೆಯರಿಗೆ ಫೇಸ್ಬುಕ್ ಮೂಲಕ ಬೇಡದ ಸಂದೇಶಗಳು, ಕರೆಗಳು ಬರುತ್ತಿವೆ, ಶೇ.29ರಷ್ಟು ಮಂದಿಗೆ ಇನ್ಸ್ಟಾಗ್ರಾಂ ಮೂಲಕ ಅನವಶ್ಯಕ ಹಿಂಸೆ ನೀಡಲಾಗುತ್ತಿದ್ದರೆ, ಮೆಸೇಜಿಂಗ್ ಆ್ಯಪ್, ವಾಟ್ಸ್ಆ್ಯಪ್ ಮೂಲಕ ಶೇ. 14ರಷ್ಟು ಮಹಿಳೆಯರು ಸೈಬಲ್ ಹಿಂಸೆಗೆ ಒಳಗಾಗುತ್ತಿದೆ. ಇನ್ನೂ ಶೇ. 10 ಸ್ನ್ಯಾಪ್ ಚಾಟ್, ಶೇ. 9 ಟ್ವಿಟ್ಟರ್, ಶೇ. 6 ಟಿಕ್ಟಾಕ್ ನಲ್ಲಿ ಮಹಿಳೆಯರು ಹಿಂಸೆಗೊಳಗಾಗುತ್ತಿದ್ದಾರೆ.

ಒಟ್ಟಿನಲ್ಲಿ ಆರ್ಥಿಕವಾಗಿ, ತಾಂತ್ರಿಕವಾಗಿ ನಾವೆಷ್ಟೇ ಮುಂದುವರಿದಿದ್ದರೂ ಮಹಿಳೆಯ ಮೇಲಿನ ದೌರ್ಜನ್ಯ ನಿಯಂತ್ರಣದಲ್ಲಿ ಮಾತ್ರ ಹಿಂದುಳಿದಿದ್ದೇವೆ ಎಂಬುದು ಸ್ಪಷ್ಟ.

Also read: ಸಮಾಜದಲ್ಲಿ ನಡೆಯುವ ಅನ್ಯಾಯದ ವಿರುದ್ಧ ನೀವೂ ಪ್ರತಿಭಟನೆ ಮಾಡಬೇಕಾ? ಹಾಗಾದ್ರೆ ಪ್ರತಿಭಟನೆಯ ಮೊದಲು ಈ ವಿಷಯ ತಿಳಿದಿರಲೇಬೇಕು.!