ಚಾಲುಕ್ಯರ ಗತಕಾಲದ ವ್ಯೆಭವದ ವಿರೂಪಾಕ್ಷ ದೇವಾಲಯ ಪಟ್ಟದ ಕಲ್ಲು

0
915

ಕರ್ನಾಟಕ ರಾಜ್ಯದಲ್ಲಿರುವ ಬಿಜಾಪುರ ಜಿಲ್ಲೆ ಎರಡು ಶತಮಾನಗಳು ಅಂದರೆ ಕ್ರಿ.ಶ. 543ರಿಂದ 757ರವರೆಗೆ ಚಾಳುಕ್ಯ ಸಾಮ್ರಾಜ್ಯದಲ್ಲಿ ಒಂದು ಅಂಗವಾಗಿದ್ದಿತು. ಚಾಳುಕ್ಯ ಅರಸರು ಬಾದಾಮಿಯಿಂದ ಆಳ್ವಿಕೆ ನಡೆಸಿದರು. ಕೆಲವು ವರ್ಷಗಳು ಅದು ಪಲ್ಲವರಿಂದ ಆಕ್ರಮಿಸಲ್ಪಟ್ಟಿತು. ಆದರೆ ವಿಕ್ರಮಾದಿತ್ಯ ಅರಸನು ಅವರನ್ನು ಸೋಲಿಸಿ, ಹೊಸ ರಾಜಧಾನಿಯನ್ನು ಸ್ಥಾಪಿಸಿದನು. ಅದನ್ನು ಪಟ್ಟದಕಲ್ಲು ಎಂದು ಕರೆಯಲಾಯಿತು.

ಕಲೆ ಮತ್ತು ಕೈಗಾರಿಕೆಗಳನ್ನು ಚಾಳುಕ್ಯರು ಪ್ರೋತ್ಸಾಹಿಸುತ್ತಿದ್ದರು. ಬಂಡೆಯಿಂದ ಶಿಲ್ಪರೂಪಕ್ಕೆ ಮಾರ್ಪಾಡಾಗುವ ಶಿಲ್ಪಕಲೆ ಅವರದಾಗಿತ್ತು. ಅವರ ದೇವಾಲಯಗಳು ರೇಖೆ, ನಾಗರ, ಪ್ರಾಸಾದ ಮತ್ತು ವಿಮಾನ ಪದ್ಧತಿಗಳ ಮಿಳಿತವಾಗಿದ್ದಿತು. ವಿಮಾನ ಪದ್ಧತಿ ಭಾರತಕ್ಕೆ ಸೇರಿದ್ದು, ನಾಗರವಿಧಾನವು ಉತ್ತರ ಭಾರತದ ಇಂಡೋ ಆರ್ಯನ್ ಶೈಲಿಯಾಗಿದ್ದಿತು.

ದಕ್ಷಿಣ ಭಾರತದ ಪ್ರದೇಶವನ್ನು ಅತ್ಯಂತ ವ್ಯೆಭವದಿಂದ ಆಳಿದ ಚಾಲುಕ್ಯ ಕಾಲದ ಜನಪ್ರಿಯ ನಗರ ಪಟ್ಟದಕಲ್ಲು ಇಲ್ಲಿಗೆ ಪ್ರವಾಸ ಹೋಗುವುದೆಂದರೆ ಒಮ್ಮೆ ಚಾಲುಕ್ಯರ ಗತಕಾಲದ ವ್ಯೆಭವನ್ನು ನೋಡಿ ಬರುವುದೇ ಆಗಿದೆ. ಪಟ್ಟದ ಕಲ್ಲು ಇದರ ಅರ್ಥ ವಜ್ರ ವೈಡೂರ್ಯಗಳಿಂದ ಅಲಂಕೃತಗೊಂಡು ಕಿರೀಟ ಧರಿಸಿರುವ ನಗರ ಹಾಗೂ ಚಾಲುಕ್ಯ ಸಾಮ್ರಾಜ್ಯದ ಅಂದಿನ ಕಾಲದ ರಾಜಧಾನಿಯಾಗಿದ್ದ ಪಟ್ಟದಕಲ್ಲಿನಲ್ಲಿ ವಜ್ರ ವೈಡೂರ್ಯಗಳು ಬೀದಿ ಬೀದಿಯಲ್ಲಿ ಮಾರಾಟವಾಗುತ್ತಿತ್ತು ಎಂದು ಚರಿತ್ರೆ ಹೇಳುತ್ತದೆ. ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಮಲಪ್ರಭ ನದಿಯ ದಡದಲ್ಲಿ ಈ ನಗರವಿದೆ.

ಸುಮಾರು 7ನೇ ಹಾಗೂ 8 ನೇ ಶತಮಾನದಲ್ಲಿ ಆಳಿದ ಚಾಲುಕ್ಯ ಸಾಮ್ರಾಜ್ಯರ ಅರಸರುಗಳು ಈ ನಗರದಲ್ಲಿ ಸುಮಾರು ಒಂಬತ್ತು ಹಿಂದೂ ದೇವಾಲಯಗಳು ಹಾಗೂ ಜೈನ ಬಸದಿಗಳನ್ನು ನಿರ್ಮಿಸಿದ್ದಾರೆ. ಈ ದೇವಾಲಯಗಳಲ್ಲಿರುವ ಅತ್ಯಂತ ಸುಂದರವಾದ ವಾಸ್ತುಶಿಲ್ಪ ಹಾಗೂ ಶಿಲ್ಪ ಕಲೆಯು ಬಹಳ ಮಹತ್ವವುಳ್ಳದ್ದಾಗಿದ್ದು ದೇವಾಲಯಗಳಿರುವ ಇಡೀ ಪ್ರದೇಶ ಯುನೆಸ್ಕೋದಿಂದ ವಿಶ್ವ ಪಾರಂಪರಿಕ ಸ್ಥಳ ಎಂಬುದಾಗಿ ಗುರುತಿಸಲ್ಪಟ್ಟಿದೆ.

ಪಟ್ಟದಕಲ್ಲಿನಲ್ಲಿರುವ ದೇವಾಲಯಗಳು ವಿಶೇಷವಾದವು ಏಕೆಂದರೆ ಇಲ್ಲಿ ಉತ್ತರ ಭಾರತ ಹಾಗೂ ದಕ್ಷಿಣ ಭಾರತ ಶೈಲಿಯ ವಾಸ್ತುಶಿಲ್ಪವನ್ನು ಅಳವಡಿಸಲಾಗಿದೆ. ಇದಕ್ಕೊಂದು ಉತ್ತಮ ಉದಾಹರಣೆ ಎಂದರೆ ಇಲ್ಲಿನ ವಿರೂಪಾಕ್ಷ ದೇವಾಲಯ. ಇದು ಇಡೀ ರಾಷ್ಟ್ರದ ಸದ್ಭಾವನೆಯ ಗುರುತಾಗಿದೆ. ಈ ದೇವಾಲಯವನ್ನು ಕ್ರಿ.ಶ.740 ರಲ್ಲಿ ಮಹಾರಾಣಿ ಲೋಕಮಹಾದೇವಿಯು ತನ್ನ ಪತಿ 2ನೇ ವಿಕ್ರಮಾದಿತ್ಯ ಪಲ್ಲವ ರಾಜರ ವಿರುದ್ಧ ಯುದ್ಧದಲ್ಲಿ ಜಯಿಸಿದ್ದರಿಂದ ನಿರ್ಮಿಸಿದ್ದು ಎಂದು ಇತಿಹಾಸ ಹೇಳುತ್ತದೆ.

ಪಟ್ಟದಕಲ್ಲು ಚಾಲುಕ್ಯರ ಶಿಲ್ಪಕಲೆಗೆ ಸಾಕ್ಷಿಯಾಗಿ ನಿಂತ ಮತ್ತೊಂದು ಸುಂದರ ತಾಣ. ವಿಶ್ವ ಪರಂಪರೆಯ ಕೇಂದ್ರ. ಮಲಪ್ರಭ ನದಿಯ ದಂಡೆಯಲ್ಲಿರುವ ಇಲ್ಲಿನ ದೇವಾಲಯಗಳ ಭಿತ್ತಿಗಳಲ್ಲಿ (ಗೋಡೆ) ಪುರಾಣದ ಕತೆಗಳ ಕೆತ್ತನೆಗಳಿವೆ. ಬಿಜಾಪುರದಿಂದ 134 ಕಿ.ಮೀಟರ್‌ಗಳ ದೂರದಲ್ಲಿರುವ ಪಟ್ಟದಕಲ್ಲು ನೋಡಲೇಬೇಕಾದ ಸ್ಥಳ.