ಕಸ ಸಂಗ್ರಹಕ್ಕೂ ಇನ್ಮೇಲಿಂದ ಬರಲಿದೆ ಕ್ಯೂ ಆರ್ ಕೋಡ್ ವ್ಯವಸ್ಥೆ; ಇದೆಲ್ಲಾ ನಿಜಕ್ಕೂ ಬೇಕಾ??

0
269

ಕಳೆದ ವಾರವಷ್ಟೇ ಕಸ ಸಂಗ್ರಹಕ್ಕೆ ಈಗ ಸಾರ್ವಜನಿಕರು ಹೆಚ್ಚು ಶುಲ್ಕವನ್ನು ಪಾವತಿ ಮಾಡಬೇಕು ಎಂದಿದ್ದ ಬಿಬಿಎಂಪಿ, ಶುಲ್ಕವನ್ನು 200 ಕ್ಕೆ ಹೆಚ್ಚಿಸಿದೆ. ಇದರ ಬೆನ್ನಲ್ಲೇ ಈಗ ಕ್ಯು ಆರ್ ಕೋಡ್ ವ್ಯವಸ್ಥೆಯನ್ನು ಜಾರಿಗೆ ತರಲು ಬಿಬಿಎಂಪಿ ಮುಂದಾಗಿದೆ.

ಕಸ ಸಂಗ್ರಹಕ್ಕೂ ಡಿಜಿಟಲ್ ಸ್ಪರ್ಷ ನೀಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಂದಾಗಿದೆ. ಬಿಬಿಎಂಪಿ ಅಂದುಕೊಂಡಂತೆ ಎಲ್ಲವೂ ನಡೆದರೆ ಬೆಂಗಳೂರಿನ ಎಲ್ಲ ಮನೆಗಳ ಮುಂದೆ ಕ್ಯು ಆರ್ ಕೋಡ್ ಫಲಕಗಳು ರಾರಾಜಿಸಲಿವೆ.

ಕಸ ಸಂಗ್ರಹಕ್ಕೆ ಕ್ಯು ಆರ್ ಕೋಡ್ ವ್ಯವಸ್ಥೆ ಪರಿಚಯಿಸಲು ಪ್ರತ್ಯೇಕ ಶುಲ್ಕ ವಸೂಲಿ ಮಾಡಲು ಬಿಬಿಎಂಪಿ ನಿರ್ಧರಿಸಿದೆ. ಕ್ಯು ಆರ್ ಕೋಡ್ ವ್ಯವಸ್ಥೆ ಮೂಲಕ ಶುಲ್ಕ ಹಾಗೂ ಕಸ ಸಂಗ್ರಹಕ್ಕೂ ಅನುಕೂಲವಾಗುವಂತೆ ವ್ಯವಸ್ಥೆ ರೂಪಿಸಲು ಚಿಂತನೆ ನಡೆಸಿದೆ. ಕಸ ಸಂಗ್ರಹಿಸುವ ಪೌರ ಕಾರ್ಮಿಕರಿಗೆ ಬಿಬಿಎಂಪಿ ಕ್ಯು ಆರ್ ಕೋಡ್ ರೀಡಿಂಗ್ ಯಂತ್ರ ನೀಡಲಿದೆ. ಕ್ಯು ಆರ್ ಕೋಡ್ ರೀಡ್ ಮಾಡಿದ ಬಳಿಕವೇ ಕಸ ಸಂಗ್ರಹಿಸಲು ನಿರ್ದೇಶನ ನೀಡಲಿದೆ.
ಆರಂಭದಲ್ಲಿ ಪ್ರಾಯೋಗಿಕವಾಗಿ ನಗರದ ಒಂದು ವಾರ್ಡ್’ನಲ್ಲಿ ಕ್ಯು ಆರ್ ಕೋಡ್ ವ್ಯವಸ್ಥೆ ಜಾರಿಗೊಳಿಸಲು ಬಿಬಿಎಂಪಿ ನಿರ್ಧರಿಸಿದ್ದು , ಇಲ್ಲಿನ ಸಾಧಕ ಬಾಧಕಗಳ ಬಗ್ಗೆ ಅಧ್ಯಯನ ನಡೆಸಿದ ಬಳಿಕವೇ ಇತರ ವಾರ್ಡ್’ಗಳಿಗೂ ವಿಸ್ತರಿಸಲು ಚಿಂತನೆ ನಡೆಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ರಂದೀಪ್ ತಿಳಿಸಿದ್ದಾರೆ .

ಜನವರಿಯಿಂದ ಪ್ರತಿ ತಿಂಗಳು 200 ರೂ.ನಂತೆ ಸಾರ್ವಜನಿಕರು ಶುಲ್ಕವನ್ನು ಪಾವತಿಸಬೇಕಾಗಿದ್ದು, ಖಾಸಗಿ ಒಡೆತನಕ್ಕೆ ಒಳಪಟ್ಟ ಸಂಸ್ಥೆಗಳು ಕಸ ಸಂಗ್ರಹಣೆಗೆ 10,000 ರೂ. ಪಾವತಿಸಬೇಕು. ಸಾವಿರಾರು ಪೌರ ಕಾರ್ಮಿಕರು ಈ ಕೆಲಸದಲ್ಲಿ ನಿರತರಾಗಿದ್ದು , ಕಸ ವಿಲೇವಾರಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇಂತಹ ಕಸ ಸಂಗ್ರಹಕ್ಕೆ ಈಗ ಸಾರ್ವಜನಿಕರು ಹೆಚ್ಚು ಶುಲ್ಕವನ್ನು ಪಾವತಿ ಮಾಡಬೇಕಿದೆ. ಬೆಂಗಳೂರಿನ ಪತ್ರಿಯೊಂದು ಮನೆಗೂ ತೆರಳಿ ಕಸವನ್ನು ಸಂಗ್ರಹಿಸುವುದಷ್ಟೇ ಅಲ್ಲದೆ ಅವುಗಳಲ್ಲಿ ಹಸಿ ಕಸ-ಒಣ ಕಸವನ್ನು ಬೇರ್ಪಡಿಸುವ ಕಾರ್ಯವನ್ನು ಪೌರಕಾರ್ಮಿಕರು ಮಾಡುತ್ತಾರೆ. ಈ ನಿಟ್ಟಿನಲ್ಲಿ ಅವರ ವೇತನವನ್ನು ಹೆಚ್ಚಿಸುವ ನಿರ್ಧಾರವನ್ನು ಬಿಬಿಎಂಪಿ ತೆಗೆದುಕೊಂಡಿದ್ದು, ಕಸ ಸಂಗ್ರಹದ ಶುಲ್ಕವನ್ನು 200 ಕ್ಕೆ ಹೆಚ್ಚಿಸಿದೆ.

Also read: ಮೂರನೇ ಹಂತದ ಪರೀಕ್ಷೆಗೆ ಸಜ್ಜಾದ ಕೋವ್ಯಾಕ್ಸಿನ್, ಇನ್ನೇನು ಬರಲಿದೆಯೇ ಲಸಿಕೆ??