ಪ್ರಧಾನಿ ಮೋದಿಗೆ ರಾಹುಲ್ ಗಾಂಧಿಯಿಂದ ಪ್ರಶ್ನೆಗಳ ಸುರಿಮಳೆ

0
970

ನವದೆಹಲಿ, ಡಿ.28-ನೋಟು ರದ್ದತಿಯಿಂದ ದೇಶಾದ್ಯಂತ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಪ್ರಜೆಗಳ ನೆಮ್ಮದಿ ಹಾಳಾಗಿದೆ, ಈ ಬಗ್ಗೆ ಶ್ವೇತಪತ್ರ ಹೊರಡಿಸುವಂತೆ ಪ್ರಧಾನಿ ಮೋದಿ ಅವರನ್ನು ಆಗ್ರಹಿಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಪ್ರಶ್ನೆಗಳ ಸುರಿಮಳೆಯನ್ನು ಮುಂದಿಟ್ಟಿದ್ದಾರೆ. ಈ ಬಗ್ಗೆ ದೇಶದ ಜನರಿಗೆ ಉತ್ತರ ನೀಡಬೇಕೆಂದೂ ಅವರು ಆಗ್ರಹಿಸಿದ್ದಾರೆ.

ನೋಟ್ ನಿಷೇಧ ಮಾಡುವ ಮೂಲಕ ಬಡವರಿಂದ ಹಣವನ್ನು ಲೂಟಿ ಮಾಡಲಾಗುತ್ತಿದೆಯೇ ಹೊರತು, ಕಾಳಧನಿಕರನ್ನು ಆರಾಮವಾಗಿರಲು ಬಿಟ್ಟಿದ್ದಾರೆ ಎಂದು ರಾಹುಲ್ ಗಾಂಧಿ ವಿಷಾದಿಸಿದ್ದಾರೆ. ಕಾಂಗ್ರೆಸ್ ಪಕ್ಷದ 132ನೇ ಸಂಸ್ಥಾಪನಾ ದಿನದ ಸಮಾರಂಭದಲ್ಲಿ ಮಾತನಾಡುತ್ತಿದ್ದ ರಾಹುಲ್, ಎಷ್ಟು ಕಪ್ಪುಹಣವನ್ನು ವಾಪಸ್ ತರಿಸಿದ್ದೀರಿ ಎಂಬ ಲೆಕ್ಕ ಕೊಡಿ ಎಂದು ಪ್ರಧಾನಿಗಳನ್ನು ಆಗ್ರಹಿಸಿದ್ದಾರೆ.

ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷದ 132ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ಅವರು ಕೇಂದ್ರ ಸರ್ಕಾರದ ನೋಟು ರದ್ದತಿ ವಿರುದ್ಧ ವಾಗ್ಧಾಳಿ ಮುಂದುವರಿಸಿದರು.

ನವೆಂಬರ್ 8ರ ಬಳಿಕ ಎಷ್ಟು ಕಪ್ಪು ಹಣ ಹೊರಬಂದಿದೆ?

ನೋಟು ರದ್ದತಿಯಿಂದ ದೇಶಕ್ಕೆ ಈವರೆಗೆ ಉಂಟಾಗಿರುವ ನಷ್ಟ ಎಷ್ಟು?

ರಾಷ್ಟ್ರಾದ್ಯಂತ ಎಷ್ಟು ಜನರು ಉದ್ಯೋಗ ಕಳೆದುಕೊಂಡಿದ್ಧಾರೆ?

 

ನೋಟ್ ಬ್ಯಾನ್ ಬಳಿಕೆ ಎಷ್ಟು ಜನ ಜೀವ ಕಳೆದುಕೊಂಡಿದ್ದಾರೆ?

ಮೃತರ ಕುಟುಂಬಗಳಿಗೆ ಈವರೆಗೆ ಏಕೆ ಪರಿಹಾರ ನೀಡಿಲ್ಲ?

ನೋಟು ರದ್ದತಿ ಮುನ್ನ ಏನೇನು ಕ್ರಮಗಳನ್ನು ಕೈಗೊಳ್ಳಲಾಗಿತ್ತು?

ಈ ನಿರ್ಧಾರಕ್ಕೆ ಮುನ್ನ ತಜ್ಞರು ಮತ್ತು ಆರ್‍ಬಿಐ ಜೊತೆ ಚರ್ಚೆ ನಡೆಸಲಿಲ್ಲವೇಕೆ?

ನೋಟು ರದ್ದತಿ ಮುನ್ನ 25 ಲಕ್ಷ ರೂ.ಗಳಿಗೆ ಅಧಿಕ ಠೇವಣಿ ಇಟ್ಟಿರುವ ಹೆಸರುಗಳನ್ನು ಬಹಿರಂಗಗೊಳಿಸುವೀರಾ?

ಎಂಬಿತ್ಯಾದಿ ಪ್ರಶ್ನೆಗಳನ್ನು ಸರ್ಕಾರದ ಮುಂದಿಟ್ಟಿರುವ ರಾಹುಲ್ ಮೋದಿ ಅವರಿಂದ ಉತ್ತರ ಬಯಸಿದ್ದಾರೆ.

ಹೊಸ ಕರೆನ್ಸಿ ವಿತ್‍ಡ್ರಾ ಮಾಡುವುದರ ಮೇಲೆ ವಿಧಿಸಲಾಗಿರುವ ಎಲ್ಲ ನಿರ್ಬಂಧಗಳನ್ನು ಕೂಡಲೇ ಹಿಂದಕ್ಕೆ ಪಡೆಯಬೇಕು ಎಂದು ಕಾಂಗ್ರೆಸ್ ಉಪಾಧ್ಯಕ್ಷರು ಒತ್ತಾಯಿಸಿದ್ಧಾರೆ.