ಹಿಂದಿನ ವರ್ಷವಷ್ಟೇ ಬಂಗಾಳಕೊಲ್ಲಿಯ ವಾಯುಭಾರ ಕುಸಿತದಿಂದ ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಗೆ ಆದ ರೌಧ್ರಾವತಾರಗಳು ಜನರ ಮನಸ್ಸಿಂದ ಇನ್ನೂ ಮಾಸಿಲ್ಲ. ಅಷ್ಟರಲ್ಲಾಗಲೇ ಮತ್ತೆ ಆಘಾತಕಾರಿ ಸಂಗತಿಯೊಂದು ಜನರೆಡೆಗೆ ಬೀಸಿದೆ.
ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಇನ್ನೊಂದು ವಾರದ ಕಾಲ ಅಲ್ಲಲ್ಲಿ ಮಳೆಯಾಗುವ ಮುನ್ಸೂಚನೆಗಳ ದಟ್ಟವಾಗಿವೆ. ರಾಜ್ಯದ ದಕ್ಷಿಣ ಒಳನಾಡು ಹಾಗೂ ಕರಾವಳಿಯ ಹಲವು ಭಾಗಗಳಲ್ಲಿ ಚದುರಿದಂತೆ ಗಾಳಿ ಮಿಶ್ರಿತ ಗುಡುಗು-ಮಿಂಚಿನಿಂದ ಕೂಡಿದ ಸಾಧಾರಣ ಮಳೆಯಾಗುವ ಸಾಧ್ಯಾಸಾದ್ಯತೆಯನ್ನು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕರು ಧೃಡೀಕರಿಸಿದ್ದಾರೆ.
ವಾಯುಭಾರ ಕುಸಿತದ ಪರಿಣಾಮ ಯುಗಾದಿ ಹಬ್ಬಕ್ಕೂ ಮುನ್ನವೇ ರಾಜ್ಯದಲ್ಲಿ ಮಳೆ ಆರಂಭವಾಗಲಿರುವ ಸೂಚನೆ ಹವಾಮಾನ ವರದಿ ಇಲಾಖೆ ನೀಡಿದೆ. ಹಬ್ಬದ ನಂತರವೂ ಮಳೆ ಮುಂದುವರಿಯುವ ಸಾಧ್ಯತೆಗಳನ್ನೂ ಅದು ಅಲ್ಲಗಳೆದಿಲ್ಲ. ಮಾ.19ರವರೆಗೆ ರಾಜ್ಯದ ಹಲವು ಭಾಗಗಳಲ್ಲಿ ಚದುರಿದಂತೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ. ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ಅಕಾಲಿಕ ಮಳೆ ಬರಲಿದೆ ಎಂದಿದೆ.
ಅಲ್ಲದೇ ಈಗಾಗಲೇ ಹವಾಮಾನ ಇಲಾಖೆಯ ವರದಿಯ ಮುನ್ಸೂಚನೆಯಂತೆ, ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲೊಂದಿಷ್ಟು ಮಳೆಯಾಗಿತ್ತು. ಬೆಂಗಳೂರು, ಉಡುಪಿ, ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು ಸೇರಿದಂತೆ ಹಳೆ ಮೈಸೂರು ಭಾಗದಲ್ಲಿ ಬೇಸಿಗೆ ಮಳೆಯಾಗಿದ್ದವು. ಹನಿ ಹನಿ ಮಳೆಗೆ ಅಂಜದ ಜನ ಸಧ್ಯದ ವಾಯುಭಾರ ಕುಸಿತದ ಕಾರಣಕ್ಕೆ ಬೆಚ್ಚಿ ಬಿದ್ದಿದ್ದಾರೆ..
ರಾಜಧಾನಿಯ ಮಂದಿಗಂತೂ ಮಳೆಯೆಂದರೆ ಜೀವ ಬಾಯಿಗೆ ಬಂದ ಅನುಭವ. ಕಳೆದ ವರ್ಷ ಅಕಾಲಿಕ ಸುರಿದ ಮಳೆ ಒಟ್ಟು ಎಂಟು ಮಂದಿಯನ್ನು ಬಲಿ ಪಡೆದಿತ್ತು. ಜವರಾಯನ ರೂಪದಲ್ಲಿ ಅಬ್ಬರಿಸಿದ ಗುಡುಗು ಸಹಿತ ಮಳೆಗೆ 8 ಮಂದಿ ಬಲಿಯಾಗಿದ್ದರು.. ಮೂವರು ಗಾಯಗೊಂಡಿದ್ದರು.