ಕೊನೆಗೂ ಅಧಿಕೃತವಾಗಿ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಂಡ ರಾಜ್ಯದ ‘ತಳವಾರ’, ‘ಪರಿವಾರ’, ಮತ್ತು ‘ಸಿದ್ದಿ’ ಸಮುದಾಯ.!

0
280

ದಶಕಗಳ ಬೇಡಿಕೆ ಕೊನೆಗೂ ಸಾಕಾರ ಸಿಕ್ಕಿದ್ದು, ರಾಜ್ಯದ ‘ತಳವಾರ’, ‘ಪರಿವಾರ’, ಮತ್ತು ‘ಸಿದ್ದಿ’ ಸಮುದಾಯಗಳ ಜನರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ಕೊಟ್ಟಿದೇ, ರಾಜ್ಯದ ವಿವಿಧ ಭಾಗಗಳಲ್ಲಿ ನೆಲೆಸಿರುವ ಈ ಮೂರು ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಸಂವಿಧಾನದ (ಪರಿಶಿಷ್ಟ ಪಂಗಡ) ಆದೇಶ ತಿದ್ದುಪಡಿ ಮಸೂದೆಗೆ ರಾಜ್ಯಸಭೆಯಲ್ಲಿ ಅನುಮೋದನೆ ದೊರಕಿದೆ. ಅದರಂತೆ ಈ ಸಮುದಾಯಗಳ ಜನರಿಗೆ ಇನ್ಮುಂದೆ ಪರಿಶಿಷ್ಟ ಪಂಗಡಕ್ಕೆ ದೊರಕುವ ಎಲ್ಲ ಸೌಲಭ್ಯಗಳು ಲಭ್ಯವಾಗಲಿವೆ.

ಹೌದು ರಾಜ್ಯದ ಧಾರವಾಡ ಮತ್ತು ಬೆಳಗಾವಿ, ಉತ್ತರ ಕನ್ನಡ, ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಿದ್ದಿ ಸಮುದಾಯದ ಜನರಿದ್ದಾರೆ. ಗುಜರಾತ್, ಹೈದರಾಬಾದ್, ಲಕ್ನೋ, ದೆಹಲಿ ಮತ್ತು ಕೋಲ್ಕತಾದಲ್ಲಿ ಕೂಡ ನೆಲೆಸಿದ್ದಾರೆ. ನಾಯಕ ಸಮುದಾಯದ ‘ತಳವಾರ’ ಮತ್ತು ‘ಪರಿವಾರ’ ಪಂಗಡಗಳ ಜನರು ರಾಜ್ಯದ ಹಲವೆಡೆ ಇದ್ದಾರೆ. ಇವರನ್ನು ಪರಿಶಿಷ್ಟ ಪಂಗಡಕ್ಕೆ ಅಧಿಕೃತವಾಗಿ ಸೇರ್ಪಡೆಗೊಳಿಸಲು ಬುಡಕಟ್ಟು ವ್ಯವಹಾರಗಳ ಖಾತೆ ರಾಜ್ಯ ಸಚಿವೆ ರೇಣುಕಾ ಸಿಂಗ್ ಸರುತಾ ಈ ಮಸೂದೆಯನ್ನು ಮಂಡಿಸಿದರು. ಇದನ್ನು ಆಡಳಿತ ಪಕ್ಷದವರಲ್ಲದೆ ವಿರೋಧಪಕ್ಷದ ಸದಸ್ಯರು ಸ್ವಾಗತಿಸಿದರು.

ಮೂರು ದಶಕಗಳ ಹೋರಾಟಕ್ಕೆ ಜಯ?

ಸುಮಾರು ಮೂರು ದಶಕಗಳಿಂದ ನಾಯಕ ಸಮುದಾಯದ ತಳವಾರ ಮತ್ತು ಪರಿವಾರ ಪಂಗಡಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಲು ವರ್ಷದ ಆರಂಭದಲ್ಲಿಯೇ ಕೇಂದ್ರ ಸರ್ಕಾರದ ಸಚಿವ ಸಂಪುಟ ಅನುಮತಿ ನೀಡಿತ್ತು. ಈ ಎರಡೂ ಪಂಗಡಗಳನ್ನು ಎಸ್‌ಟಿಗೆ ಸೇರಿಸುವಂತೆ 1984ರಿಂದಲೂ ಕೇಂದ್ರ ಸರ್ಕಾರಗಳಿಗೆ ನಿರಂತರ ಬೇಡಿಕೆಗಳನ್ನು ಸಲ್ಲಿಸಲಾಗುತ್ತಿತ್ತು. ಅದೀಗ ಕೊನೆಗೂ ಈಡೇರಿದೆ. 1991ರಲ್ಲಿ ಪರಿಶಿಷ್ಟ ಪಂಗಡಕ್ಕೆ ನಾಯಕ, ವಾಲ್ಮೀಕಿ, ಬೇಡ ಮುಂತಾದ ಹೆಸರುಗಳಿಂದ ಗುರುತಿಸಿಕೊಂಡ ಸಮುದಾಯವನ್ನು 1991ರಲ್ಲಿ ಆಗಿನ ಪ್ರಧಾನಿ ಚಂದ್ರಶೇಖರ್ ನೇತೃತ್ವದ ಕೇಂದ್ರ ಸರ್ಕಾರವು ಸುಗ್ರೀವಾಜ್ಞೆ ಮೂಲಕ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಿತ್ತು. ಕಾಶ್ಮೀರದ ಗುಜ್ಜಾರ್ ಸಮುದಾಯದೊಂದಿಗೆ ಆಗ ನಾಯಕ ಸಮುದಾಯದ ಐದು ಪರ್ಯಾಯ ಪಂಗಡಗಳನ್ನು ಸೇರಿಸಲಾಗಿತ್ತು.

ಇನ್ನಷ್ಟು ಸಮುದಾಯಗಳನ್ನು ಸೇರ್ಪಡೆ ಮಾಡುವ ಸಾಧ್ಯತೆ?

ರಾಜ್ಯದ ಕೊಡಗಿನ ಕೊಡವ ಸಮುದಾಯ, ಉತ್ತರ ಕರ್ನಾಟಕದಲ್ಲಿರುವ ಹಲಬರ, ಗೋಂದಳಿ, ಗೊಲ್ಲ ಸಮುದಾಯಗಳನ್ನು ಕೂಡ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಬಿಜೆಪಿಯ ಪ್ರಭಾಕರ ಕೋರೆ ಮತ್ತು ಜೆಡಿಎಸ್ ಸದಸ್ಯ ಕುಪೇಂದ್ರ ರೆಡ್ಡಿ ಮನವಿ ಮಾಡಿದರು. ಮಸೂದೆ ಮಂಡನೆಯಾದ ಬಳಿಕ ಅದನ್ನು ಬಿಜೆಪಿಯ ಕೆ.ಸಿ. ರಾಮಮೂರ್ತಿ ಮತ್ತು ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್ ಸ್ವಾಗತಿಸಿದರು. ಒಡಿಶಾ, ತಮಿಳುನಾಡು, ತೆಲಂಗಾಣ, ಬಿಹಾರ ಮತ್ತು ಉತ್ತರ ಪ್ರದೇಶದ ಸದಸ್ಯರು ಕೂಡ ತಮ್ಮ ರಾಜ್ಯಗಳಲ್ಲಿನ ವಿವಿಧ ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವಂತೆ ಮನವಿ ಮಾಡಿದರು.