ಕಾಂಕ್ರೀಟ್ ಕಾಡಿನಲ್ಲೊಂದು ಆಧ್ಯಾತ್ಮಿಕ ತಾಣ ಅದುವೇ ಶ್ರೀ ರಮಣ ಮಹರ್ಷಿ ಆಶ್ರಮ..!!

0
1734

ಬೆಂಗಳೂರಿನಿಂದ ಹೊಸೂರಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ೨೮ ಕಿಮೀ ದೂರದಲ್ಲಿರುವ, ಚಂದಾಪುರದಿಂದ ಕೇವಲ ೨ ಕಿಮೀ ದೂರದಲ್ಲಿ ಹೆದ್ದಾರಿಯ ಬಲಕ್ಕೆ ತಿರುಮಗೊಂಡನ ಹಳ್ಳಿ ಎಂಬಲ್ಲಿ ಕೇರಳದ ದೇಗುಲಗಳಂತೆ ಹೆಂಚುಗಳಿಂದ ಅಲಂಕರಿಸಲ್ಪಟ್ಟ ರಮಣ ಮಹರ್ಷಿಗಳ ಆಶ್ರಮವು ಏಕಾಂತತೆಯ, ಆಧ್ಯಾತ್ಮಿಕತೆಯ, ಸ್ವಾಧ್ಯಾಯದ ಕೇಂದ್ರವಾಗಿ ಆಸ್ತಿಕರನ್ನು, ದಾರಿ ಹೋಕರನ್ನು ಒಮ್ಮೆ ಬಂದು ಹೋಗುವಂತೆ ಪ್ರಚೋದಿಸುತ್ತದೆ.

ದ್ರಾವಿಡ ಶೈಲಿಯ ಕೇರಳ ದೇಗುಲಗಳ ಮಾದರಿಯಲ್ಲಿ ನಿರ್ಮಿತವಾಗಿರುವ ಭಗವಾನ್ ಶ್ರೀ ರಮಣ ಮಹರ್ಷಿ ಸೇವಾ ಟ್ರಸ್ಟ್ ಎಂಬ ನಾಮ ಫಲಕ ಹೊತ್ತ ಆಶ್ರಮವನ್ನು ಪ್ರವೇಶಿಸಿದ್ದಲ್ಲಿ ಅಲ್ಲಿರುವ ಪ್ರಶಾಂತ ವಾತಾವರಣ, ಹಸಿರು ಹೂಗಿಡಗಳಿಂದ ಆವೃತವಾದ ಪ್ರದೇಶವು ಇಂತಹ ಭಾರವಾದ ಹೃದಯಗಳು ಸಹ ಕರಗುವಂತೆ ಮಾಡುತ್ತವೆ.

ಹಸಿರ ಹುಲ್ಲುಹಾಸಿಗೆಯ ನಡುವೆ ವ್ಯವಸ್ಥಿತ ಹಾಸು ಬಂಡೆಗಳಿಂದ ಕೂಡಿದ ಈ ಆಶ್ರಮದ ಗೋಡೆಗಳ ಮೇಲೆ ಪಂಚಭೂತಗಳಾದ ಭೂಮಿ, ಅಗ್ನಿ, ನೀರು, ಗಾಳಿ ಹಾಗು ಆಕಾಶಗಳನ್ನು ಕುರಿತಾದ ಸಂಕ್ಷಿಪ್ತ ವಿವರಣಾ ಪಟ್ಟಿಯನ್ನು ಕಾಣಬಹುದು. ಇಲ್ಲಿರುವ ಪುಟ್ಟ ಗಣಪತಿ ಹಾಗು ನವಗ್ರಹ ಮಂದಿರಗಳ ದರ್ಶನಗಳ ನಂತರ ಅಮೃತ ಶಿಲೆಯಿಂದ ಕೆತ್ತಲ್ಪಟ್ಟ, ದಿವ್ಯ ತೇಜಸ್ಸನ್ನು ಹೊಂದಿದ, ಪ್ರೀತಿ ಮಮಕಾರಗಳ ಸಾಕಾರಮೂರ್ತಿಯಂತೆ ಕಣ್ಣುಗಳಲ್ಲೇ ಸರ್ವರನ್ನೂ ತನ್ನತ್ತ ಬರಮಾಡಿಕೊಳ್ಳುವ ಪ್ರಜ್ವಲ ಕಾಂತಿಯನ್ನೊಳಗೊಂಡ ಭವ್ಯವಾದ ಭಗವಾನ್ ಶ್ರೀ ರಮಣ ಮಹರ್ಷಿಗಳ ಸುಂದರ ವಿಗ್ರಹವನ್ನು ಕಾಣಬಹುದು.

ಮುಗಿಲಿಗೆ ಮೈಯೊಡ್ದಿನಿಂತ ಈ ಧ್ಯಾನಮಂದಿರವು ಎಂತಹವರನ್ನೂ ಮೌನಕ್ಕೆ ಶರಣಾಗಿಸುತ್ತದೆ. ಧ್ಯಾನಕ್ಕೆ ಮೊದಲಾಗಿಸಿ ಓಂಕಾರದಲ್ಲಿ ಒಂದಾಗುವಂತೆ ಮಾಡುತ್ತದೆ. ಇಲ್ಲಿನ ಪೂಜ್ಯ ವಾತಾವರಣವೂ ಪ್ರತಿಯೊಬ್ಬರ ಮನಸ್ಸನ್ನೂ ಆಧ್ಯಾತ್ಮದತ್ತ ಹೊರಳುವಂತೆ ಮಾಡುತ್ತದೆ.

೨೦೦೩ ರ ನವೆಂಬರ್ ನಲ್ಲಿ ಸಿದ್ದಗಂಗಾ ಮಠದ ಪರಮ ಪೂಜ್ಯ ಶ್ರೀ ಡಾ. ಶಿವಕುಮಾರ ಸ್ವಾಮೀಜಿ ಹಾಗು ಚಿನ್ಮಯ ಮಿಷನ್ ನ ಶ್ರೀ ಬ್ರಹ್ಮಾನಂದಾಜಿಯವರ ದಿವ್ಯ ಸಮ್ಮುಖದಲ್ಲಿ ಈ ಆಶ್ರಮದ ಉದ್ಘಾಟನೆಯಾಯಿತು. ಈ ಸೇವಾ ಟ್ರಸ್ಟ್ ನ ಅಡಿಯಲ್ಲಿ ಯೋಗ ಮತ್ತು ಧ್ಯಾನ ಕೇಂದ್ರ, ಶಾಲಾ ಕಾಲೇಜುಗಳು, ವಿದ್ಯಾರ್ಥಿ ನಿಲಯ, ವಾಚನಾಲಯ, ಔಷಧಾಲಯ, ವೃದ್ದಾಶ್ರಮ ಮತ್ತು ಅಬಲಾಶ್ರಮಗಳ ನಿರ್ಮಾಣ ಯೋಜನೆಗಳಿದ್ದು ಸಮಾಜಮುಖಿ ಕಾರ್ಯವನ್ನು ಮಾಡಿಕೊಳ್ಳುತ್ತ ಬಂದಿದೆ.

ನಗರದ ಯಾಂತ್ರಿಕ ಬದುಕಿಗೆ ಕೆಲ ಕಾಲ ಬಿಡುವು ನೀಡಿ ಒಮ್ಮೆ ಈ ದಿವ್ಯ ಸನ್ನಿಧಿಗೆ ಬನ್ನಿ, ಏಕಾಂತತೆಯ ಅನುಭವದಲ್ಲಿ ಒಂದಾಗಿ ಧ್ಯಾನದಲ್ಲಿ ತಲ್ಲೀನರಾಗಿ, ತಮ್ಮೊಳಗಿನ ತಮ್ಮನ್ನು ಕಂಡುಕೊಳ್ಳಿ…