ದುಷ್ಟ ಬುದ್ದಿಗೆ ಮತ್ತೊಂದು ಹೆಸರು “ಕೈಕೇಯಿ”

0
1660

ಕೈಕೇಯಿ ಕೇಕಯ ದೇಶದ ರಾಜಕುಮಾರಿ. ಅಶ್ವಪತಿ ಮಹಾರಾಜನ ಮಗಳು. ಏಳು ಜನ ಅಣ್ಣಂದಿರ ನಡುವೆ ಬೆಳೆದ ಹೆಣ್ಣುಮಗಳು. ಗಂಡುಹುಡುಗರ ನಡುವೆ ಬೆಳೆದ ಇವಳು ಸುಂದರಿಯಾದರೂ ಹೆಣ್ಣಿನ ನಾಜೂಕುತನಕ್ಕಿಂತ ಗಂಡಿನ ಒರಟುತನವನ್ನು ಬೆಳೆಸಿಕೊಂಡಿದ್ದಳು. ಚಿಕ್ಕಂದಿನಿಂದ ಇವಳಿಗೆ ಯುದ್ಧಕಲೆಯಲ್ಲಿ ಆಸಕ್ತಿ. ಕತ್ತಿವರಸೆ, ಧನುರ್ವಿದ್ಯೆಯಲ್ಲಿ ಕೈಕೇಯಿ ನಿಷ್ಣಾತಳಾಗಿದ್ದಳು. ಅವಳು ಬಹಳ ಒಳ್ಳೆಯ ಸಾರಥಿ. ಯುದ್ಧಕಲೆಯಲ್ಲಿ ಎಷ್ಟು ಪರಿಣಿತಳ್ಳೋ ಅಷ್ಟೇ ಹಠಮಾರಿ ಸಹಾ ಆಗಿದ್ದಳು. ತಾನು ಹೇಳಿದ್ದು ಶತಾಯ ಗತಾಯ ಆಗಲೇ ಬೇಕೆಂಬ ಹಠ ಅವಳಲ್ಲಿತ್ತು.

ತಾಯಿಯಿಲ್ಲದ ಅವಳನ್ನು ಅಂತಃಪುರದ ದಾಸಿ ಮಂಥರೆಯೇ ಪೋಷಣೆ ಮಾಡಿದ್ದಳು. ಹೀಗಾಗಿ ಮಂಥರೆಗೆ ಇವಳ ಬಳಿ ಸಲುಗೆ ಮತ್ತು ಕೈಕೇಯಿಗೆ ಮಂಥರೆಯಲ್ಲಿ ತಾಯಿಯಷ್ಟೇ ಮಮತೆ.  ಅಶ್ವಪತಿ ಮಹಾರಾಜ ಒಮ್ಮೆ ಯಾವುದೋ ಯುದ್ಧಕ್ಕೆ ದಶರಥನ ಸಹಾಯ ಬೇಡಿರುತ್ತಾನೆ. ಆಗ ಯುದ್ಧಭೂಮಿಯಲ್ಲಿ ದಶರಥನಿಗೆ ಕೈಕೇಯಿ ಸಹಾಯಕಳಾಗಿರುತ್ತಾಳೆ. ಯುದ್ಧಕಲೆಯಲ್ಲಿ ಇವಳ ನಿಪುಣತೆಯನ್ನು ಮೆಚ್ಚಿದ ದಶರಥ ಇವಳನ್ನು ತನ್ನ ರಾಣಿಯನ್ನಾಗಿ ಮಾಡಿಕೊಳ್ಳುತ್ತಾನೆ. ದಶರಥನಿಗೆ ಈಗಾಗಲೇ ಕೌಸಲೆ, ಸುಮಿತ್ರೆ ಎಂಬ ಇಬ್ಬರು ರಾಣಿಯರಿರುತ್ತಾರೆ. ಕೈಕೇಯಿ ಮೂರನೆಯವಳಾಗುತ್ತಾಳೆ. ಕೈಕೇಯಿಯ ಜೊತೆ ಅವಳ ಸಾಕುತಾಯಿಯೂ ಅಯೋಧ್ಯೆಗೆ ಬರುತ್ತಾಳೆ.

manthara

ಶಂಬರಾಸುರನೆಂಬ ರಾಕ್ಷಸ, ದಶರಥನಿಗೂ ದೇವತೆಗಳ ರಾಜ ದೇವೇಂದ್ರನಿಗೂ ಶತ್ರುವಾಗಿರುತ್ತಾನೆ. ಇವನನ್ನು ಸಂಹರಿಸಲು ದೇವೇಂದ್ರ ದಶರಥನ ಸಹಾಯ ಕೋರುತ್ತಾನೆ. ದಶರಥನ ಜೊತೆ ಯುದ್ಧಕ್ಕೆ ಕೈಕೇಯಿಯೂ ಹೊರಡುತ್ತಾಳೆ. ಯುದ್ಧದಲ್ಲಿ ಕೈಕೇಯಿ ದಶರಥನ ರಥಕ್ಕೆ ಸಾರಥಿಯಾಗಿರುತ್ತಾಳೆ. ಬಹಳ ತೀವ್ರವಾದ ಯುದ್ಧ ನಡೆಯುತ್ತದೆ. ಯುದ್ಧದಲ್ಲಿ ಶಂಬರಾಸುರನ ಬಾಣಗಳಿಂದ ಗಾಯಗೊಂಡ ದಶರಥ ಎಚ್ಚರ ತಪ್ಪುತ್ತಾನೆ. ಕೈಕೇಯಿ ಜಾಣತನದಿಂದ ರಥವನ್ನು ಸುರಕ್ಷಿತವಾದ ಸ್ಥಳಕ್ಕೆ ಕೊಂಡೊಯ್ದು ಗಾಯಗಳಿಂದ ಖತಿಗೊಂಡ ದಶರಥನನ್ನು ಶೈತ್ಯೋಪಚಾರದಿಂದ ಉಪಚರಿಸುತ್ತಾಳೆ. ಎಚ್ಚರಗೊಂಡ ದಶರಥ ಕೈಕೇಯಿಯ ಧೈರ್ಯ ಸ್ಥೈರ್ಯಗಳನ್ನು ಮೆಚ್ಚಿ ಅವಳಿಗೆ ಎರಡು ವರಗಳನ್ನು ಕೊಡುತ್ತಾನೆ. ಆದರೆ ಕೈಕೇಯಿ ಆಗ ಆ ಎರಡು ವರಗಳನ್ನು ಉಪಯೋಗಿಸದೆ ತನಗೆ ಬೇಕಾದಾಗ ತೆಗೆದುಕೊಳ್ಳುತ್ತೇನೆಂದು ಹೇಳುತ್ತಾಳೆ. ಯಾವಾಗ ಅಗತ್ಯದ್ದರೂ ಕೇಳಿ ವರಗಳ ಉಪಯೋಗ ಪಡೆದುಕೊಳ್ಳಬಹುದು ಎಂದು ದಶರಥ ವಚನ ಕೊಡುತ್ತಾನೆ.

exile-of-ram

ಕಾಲಾನಂತರದಲ್ಲಿ ದಶರಥನಿಗೆ ಕೌಸಲೆಯಿಂದ ರಾಮ, ಸುಮಿತ್ರೆಯಿಂದ ಲಕ್ಷ್ಮಣ ಶತ್ರುಘ್ನ ಕೈಕೇಯಿಯಿಂದ ಭರತ ಜನಿಸುತ್ತಾರೆ. ಮಕ್ಕಳು ಪ್ರಾಪ್ತವಯಸ್ಕರಾದಾಗ ಅವರಿಗೆ ವಿದೇಹ ರಾಜ್ಯದ ಜನಕ ಮಹಾರಾಜನ ಮಕ್ಕಳಾದ ಸೀತೆ, ಊರ್ಮಿಳೆ, ಮಾಂಡವಿ, ಶ್ರುತಕೀರ್ತಿಯರೊಡನೆ ವಿವಾಹವಾಗುತ್ತದೆ. ದಶರಥ, ತನ್ನ ಹಿರಿಯ ಮಗ ರಾಮನಿಗೆ ಪಟ್ಟಾಭಿಷೇಕ ಮಾಡಲು ಯೋಚಿಸುತ್ತಾನೆ. ಇದನ್ನು ತಿಳಿದ ಮಂಥರೆ ಕೈಕೇಯಿಗೆ ಅವಳು ರಾಜನ ಬಳಿ ಪಡೆದಿದ್ದ ವರಗಳನ್ನು ನೆನಪಿಸಿ ಈಗ ಆ ವರಗಳನ್ನು ತನ್ನ ಸ್ವಾರ್ಥಕ್ಕಾಗಿ ಕೇಳಲು ಪ್ರೇರೇಪಿಸುತ್ತಾಳೆ. ಅದರಂತೆ ಕೈಕೇಯಿ ದಶರಥನ ಬಳಿ ರಾಮನು ಹದಿನಾಲ್ಕು ವರ್ಷ ಕಾಡಿಗೆ ಹೋಗಬೇಕೆಂದು , ತನ್ನ ಮಗ ಭರತನಿಗೆ ಪಟ್ಟಾಭಿಷೇಕ ಮಾಡಬೇಕೆಂದು ಆಗ್ರಹ ಪಡಿಸುತ್ತಾಳೆ. ವಚನ ಭ್ರಷ್ಟನಾಗಲು ಇಚ್ಛೆಯಿಲ್ಲದ ರಾಜ ರಾಮನನ್ನು ಕಾಡಿಗೆ ಕಳುಹಿಸಿ ಅದೇ ಕೊರಗಿನಲ್ಲಿ ಅಸುನೀಗುತ್ತಾನೆ. ಸ್ವಾರ್ಥಿಯಾದ ಕೈಕೇಯಿಯ ವಿವೇಚನಾರತ ಲಾಲಸೆಯಿಂದ ಅಯೋಧ್ಯೆ ಶೋಕಸಾಗರದಲ್ಲಿ ಮುಳುಗುತ್ತದೆ.

ವೀಣಾರಾವ್‌