3.5 ಲಕ್ಷ ಜನರಿಂದ ಗಾಯನ: ರಾಷ್ಟ್ರಗೀತೆಗೆ ವಿಶ್ವದಾಖಲೆಯ ಗರಿ

0
725

ರಾಜಸ್ಥಾನ್‍ನ ರಾಜ್‍ಕೋಟ್‍ನ ಕಾಗ್ವಾಡ್‍ನಲ್ಲಿ 3.5 ಲಕ್ಷ ಜನರು ಒಂದೇ ಬಾರಿ ರಾಷ್ಟ್ರಗೀತೆ ಹಾಡಿದ್ದು,  ಗಿನ್ನಿಸ್‍ ದಾಖಲೆಗೆ ಪಾತ್ರವಾಗಿದೆ.

ಖೋಡಾಲ್ ಡ್ಯಾಂ ಬಳಿ ನಿರ್ಮಿಸಲಾದ ದೇವಸ್ಥಾನದಲ್ಲಿ ಖೋಡಿಯಾರ್‍ ದೇವರ ಪ್ರತಿಷ್ಠಾಪನಾ ಮಹೋತ್ಸವದ ವೇಳೆ ಹಮ್ಮಿಕೊಳ್ಳಲಾದ ಸಾಮೂಹಿಕವಾಗಿ ರಾಷ್ಟ್ರಗೀತೆ ಹಾಡುವ ಈ ಕಾರ್ಯಕ್ರಮಕ್ಕೆ ಅತ್ಯದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವಿಶ್ವದಾಖಲೆಯ ಗೌರವ ತಂದುಕೊಟ್ಟಿದೆ.

ಈ ಕಾರ್ಯಕ್ರಮದಲ್ಲಿ 3.5 ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಂಡು ಒಂದೇ ಬಾರಿ ರಾಷ್ಟ್ರಗೀತೆ ಹಾಡಿದರು. ಇಷ್ಟು ಜನರು ಒಂದು ಕಡೆ ಸೇರಿ ಹಾಡಿರುವುದು ವಿಶ್ವದಾಖಲೆಗೆ ಪಾತ್ರವಾಗಿದೆ ಎಂದು ಖೋಡಾಲ್‍ ದೇವಸ್ಥಾನದ ಸದಸ್ಯ ಹನ್ಸ್‍ ರಾಜ್ ಗಜೆರಾ ತಿಳಿಸಿದ್ದಾರೆ.

2014ರಲ್ಲಿ ಬಾಂಗ್ಲಾದೇಶದಲ್ಲಿ 2 ಲಕ್ಷದ 54 ಸಾವಿರದ 537 ಮಂದಿ ರಾಷ್ಟ್ರಗೀತೆ ಹಾಡಿದ್ದು ವಿಶ್ವದಾಖಲೆಯಾಗಿತ್ತು. ಈ ದಾಖಲೆ ಇದೀಗ ಭಾರತದ ರಾಷ್ಟ್ರಗೀತೆಗೆ ಸಂದಿದ್ದು, ವಿಶ್ವದಾಖಲೆ ಅಧಿಕಾರಿಗಳು ಪ್ರಮಾಣಪತ್ರವನ್ನು ನೀಡಿದ್ದಾರೆ ಎಂದು ಹನ್ಸ್‍ರಾಜ್‍ ತಿಳಿಸಿದರು.

ದೇವಸ್ಥಾನದ ವತಿಯಿಂದ ನಡೆದ ಶೋಭಾಯಾತ್ರೆ ಲಿಮ್ಕಾ ದಾಖಲೆಗೆ ಸೇರ್ಪಡೆಗೊಂಡಿದೆ. 1008 ಕುಂಭಗಳನ್ನು ಹೊತ್ತ ಶೋಭಾಯಾತ್ರೆಯು 40 ಕಿ.ಮೀ. ಉದ್ದವಿತ್ತು.

ಜನವರಿ 17ರಿಂದ ದೇವಸ್ಥಾನದ ಪ್ರತಿಷ್ಠಾಪನಾ ಮಹೋತ್ಸವ ನಡೆಯುತ್ತಿದ್ದು, ಕಳೆದ 5 ದಿನಗಳಲ್ಲಿ 50 ಲಕ್ಷಕ್ಕೂ ಅಧಿಕ ಭಕ್ತಾದಿಗಳು ಬೇಟಿ ನೀಡಿದ್ದಾರೆ. ಇದನ್ನು ಲಿಮ್ಕಾ ದಾಖಲೆಗೆ ಸೇರಿಸುವ ಕುರಿತು ದೇವಸ್ಥಾನದ ಟ್ರಸ್ಟ್‍ ಪ್ರಯತ್ನಿಸಿದೆ.

ಖೋಡಾಲ್‍ ದೇವಸ್ಥಾನವನ್ನು 60 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ದೇವಸ್ಥಾನದ ಟ್ರಸ್ಟ್‍ ವತಿಯಿಂದ ಕೃಷಿ ವಿಶ್ವವಿದ್ಯಾಲಯ ಸ್ಥಾಪಿಸುವ ಕುರಿತು ಚಿಂತನೆ ನಡೆದಿದೆ ಎಂದು ಗಜೆರಾ ವಿವರಿಸಿದರು.

ಪಟೇಲ್ ಸಮುದಾಯಕ್ಕೆ ಮೀಸಲಾತಿ ದೊರೆಯಬೇಕು ಎಂದು ಹೋರಾಟ ನಡೆಸುತ್ತಿರುವ ಹಾರ್ದಿಕ್‍ ಪಟೇಲ್‍, ಬಿಜೆಪಿ ಹಾಗೂ ಕಾಂಗ್ರೆಸ್‍ ಅಲ್ಲದೇ ವಿವಿಧ ಪಕ್ಷಗಳ ನಾಯಕರು ಈ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.