ಈ ಗಂಗಾಧರೇಶ್ವರ ಸ್ವಾಮಿ ದೇಗುಲದಲ್ಲಿ ನೀವು ಎಂದೂ ಊಹಿಸಲಾಗದ ರಹಸ್ಯಗಳಿವೆ. ತಪ್ಪದೆ ಒಮ್ಮೆ ಭೇಟಿ ಕೊಡಿ

0
2411

“ಶಿವಗಂಗೆ” ಅಗಸ್ತ್ಯರು ತಪಸ್ಸು ಮಾಡಿದ ಪುಣ್ಯ ಕ್ಷೇತ್ರ

ಭಾರತದಲ್ಲಿರುವ ಬಹುತೇಕ ತೀರ್ಥಕ್ಷೇತ್ರಗಳು ಒಂದೊಂದು ವಿಭಿನ್ನ ಇತಿಹಾಸಗಳನ್ನು ಹೊಂದಿವೆ. ಅಲ್ಲಿರುವ ಹಲವು ನಿಗೂಢತೆಗಳು ವಿಜ್ಞಾನಕ್ಕೆ ಸವಾಲಾಗಿವೆ. ವಿಜ್ಞಾನಕ್ಕೆ ಇಂಥದ್ದೇ ಸವಾಲು ಎಸೆಗಿರುವ ದೇವಾಲಯ ಶಿವಗಂಗೆಯ ಗಂಗಾಧರೇಶ್ವರ ಸ್ವಾಮಿ ದೇಗುಲ. ಇಲ್ಲಿ ಒಂದಲ್ಲ ಎರಡಲ್ಲ ನಾನಾ ವಿಶೇಷತೆಗಳ ಬಗ್ಗೆ ಕೇಳಬಹುದು. ಇಲ್ಲಿರುವ ಪವಿತ್ರ ಪುಣ್ಯ ಸ್ಥಳದಲ್ಲಿರುವ ಈಶ್ವರ ಲಿಂಗಕ್ಕೆ ತುಪ್ಪವನ್ನು ಹಚ್ಚಿದರೆ ಅದು ಬೆಣ್ಣೆಯಾಗಿ ಬದಲಾಗುತ್ತದೆ. ಬೇಸಿಗೆ ಕಾಲದಲ್ಲಿ ಬಹುತೇಕ ಕಲ್ಯಾಣಿಗಳು, ನೀರಿನ ಸೆಲೆಗಳು ಒಣಗಿದರೆ, ಇಲ್ಲಿರುವ ನಿರಿನ ಸೆಲೆ ಸದಾ ತುಂಬಿ ತುಳುಕುತ್ತಿರುತ್ತದೆ. ಆ ನೀರಿನ ಮೂಲ ಎಲ್ಲಿದೆ ಎಂಬುದೇ ಅರ್ಥವಾಗದ ಸಂಗತಿಯಾಗಿದೆ.

ದಕ್ಷಿಣ ಕಾಶಿ

ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾದ ಶಿವಗಂಗೆಯಲ್ಲಿರುವ ಗಂಗಾಧರೇಶ್ವರ ದೇಗುಲವನ್ನು ಅಗಸ್ತ್ಯರು ಪ್ರತಿಷ್ಠಾಪಿಸಿದರು ಎಂಬ ಐತಿಹ್ಯವಿದೆ. ಒಂದೊಂದು ದಿಕ್ಕಿನಿಂದ ಒಂದೊಂದು ಆಕಾರದಲ್ಲಿ ಗೋಚರಿಸುವ ಶಿವಗಂಗೆಯ ಬೆಟ್ಟ, ಸಕಲ ಚರಾಚರಗಳಲ್ಲಿಯೂ ಸೃಷ್ಠಿಕರ್ತನ ಸಾನಿಧ್ಯವಿದೆ ಎಂಬ ಭಗವದ್ಗೀತೆಯನ್ನು ನೆನಪಿಸುವುದು ಶಿವಗಂಗೆಯ ಮತ್ತೊಂದು ವೈಶಿಷ್ಟ್ಯ. ಶಿವಗಂಗೆ ಬೆಟ್ಟವನ್ನು ಉತ್ತರದಿಂದ ನೋಡಿದರೆ ಸರ್ಪದಂತೆಯೂ, ದಕ್ಷಿಣದಿಂದ ಗಣೇಶನಂತೆಯೂ, ಪೂರ್ವದಿಂದ ನಂದಿಯಂತೆ, ಪಶ್ಚಿಮದಿಂದ ಲಿಂಗದಂತೆ ಕಾಣುತ್ತದೆ. ಈ ಬೆಟ್ಟದ ಮೇಲೆ ಅಷ್ಟಲಿಂಗ, ಅಷ್ಟಗಣಪ, ಅಷ್ಟ ವೃಷಭ, ಅಷ್ಟತೀರ್ಥಗಳಿವೆ. ಗಣಪನ ದೇವಾಲಯವೂ ಇದೆ.

ಶಿವಗಂಗೆ ಇತಿಹಾಸ

ಶಿವಗಂಗೆಯ ಪ್ರಸ್ತಾಪ ಪುರಾಣ ಹಾಗೂ ಗುರುಚರಿತ್ರೆಯಲ್ಲಿ ಕಾಣುತ್ತದೆ. ಹೊಯ್ಸಳರ ಕಾಲಸ ವಿಷ್ಣುವರ್ಧನ ನಂತರ ಬೆಂಗಳೂರು ನಿರ್ಮಾತೃ ಕೆಂಪೇಗೌಡರು ಈ ದೇವಾಯಲವನ್ನು ಜೀರ್ಣೋದ್ಧಾರ ಮಾಡಿದ್ದಾರೆ. ಗುಡಿ ಗೋಪುರ ನಿರ್ಮಿಸಿದ್ದಾರೆ. ಇಲ್ಲಿ ಸ್ವರ್ಣಾಂಭ ಸಹಿತ ಗಂಗಾಧರೇಶ್ವರ, ಶಾಂತೇಶ್ವರ, ಓಂಕಾರೇಶ್ವರ, ರೇವಣ ಸಿದ್ದೇಶ್ವರ, ಕುಂಬೇಶ್ವರ, ಸೋಮೇಶ್ವರ, ಮುದ್ದು ವೀರೇಶ್ವರನೆಂಬ ಅಷ್ಟ ಲಿಂಗಗಳಿವೆ. ಅಗಸ್ತ್ಯತೀರ್ಥ, ಶಂಕರತೀರ್ಥ, ಕಣ್ವತೀರ್ಥ, ಕದಂಬತೀರ್ಥ, ಮೈತ್ಲಾ ತೀರ್ಥ, ಪಾತಾಳಗಂಗೆ, ಒಳಕಲ್ ತೀರ್ಥ, ಕಪಿಲತೀರ್ಥ ಎಂಬ ಅಷ್ಟ ತೀರ್ಥಗಳಿವೆ.

ಅಗಸ್ತ್ಯಋಷಿಗಳು ಇಲ್ಲಿ ತಪಸ್ಸು ಮಾಡಿದ ಸ್ಥಳ ಎನ್ನಲಾದ ಅಗಸ್ತ್ಯ ತೀರ್ಥ ಸುತ್ತ ನೂರೆಂಟು ಶಿವಲಿಂಗಳಿವೆ. ಸಮೀಪದಲ್ಲಿ ಕಮಲ ತೀರ್ಥ, ಉತ್ತರಕ್ಕೆ ಶೃಂಗೇರಿ ಶಾರದಾ ಪೀಠ ಮತ್ತು ವಹ್ನಿ ಕುಲದ ಮಹಾಲಕ್ಷ್ಮಿ ಪೀಠ, ಪೂರ್ವಕ್ಕೆ ಬೃಹದಾಕಾರದ ರಾಚೋಟಿ ವೀರಭದ್ರಾಲಯದ ಎತ್ತರದ ಗಂಟೆ ಕಂಬ, ಹರಕೆ ಗಣಪ, ಪಾತಾಳಗಂಗೆಗೆ ಹೋಗುವ ಮಾರ್ಗದಲ್ಲಿ ಕ್ಷೇತ್ರದ ಅಧಿ ದೇವತೆ ಹೊನ್ನಾದೇವಿ ದೇವಸ್ಥಾನವಿದೆ.

ಶಿವಗಂಗೆ ಕಡಿದಾದ ಬೆಟ್ಟದ ಮೇಲಿರುವ ಕಾರಣ ಇದು ಚಾರಣ ಪ್ರೀಯರಿಗೆ ಅತ್ಯುತ್ತಮ ಗಿರಿಶಿಖರ. ಇದೆ ಬೆಟ್ಟದಲ್ಲಿ ನಾಟ್ಯರಾಣಿ ಶಾಂತಲೆ ಆತ್ಮಹತ್ಯೆ ಮಾಡಿಕೊಂಡಿದ್ದು ಎಂಬ ಮಾತುಗಳು ಕೇಳಿಬಂದಿವೆ. ಬೆಂಗಳೂರಿನಿಂದ 54 ಕಿ.ಮೀ ದೂರದಲ್ಲಿರುವ ಶಿವಗಂಗೆ ಬೆಟ್ಟ, ದಾಬಸ್‍ಪೇಟೆಯಿಂದ ತುಮಕೂರು ಕಡೆಗೆ ಹೋಗುವ ಮಾರ್ಗದಲ್ಲಿ ಸಿಗುತ್ತದೆ. ಬೆಂಗಳೂರಿನಿಂದ ದಾಬಸ್‍ಪೇಟೆಯವರಗೂ ಬಸ್ ಅಥವಾ ರೈಲಿನಲ್ಲಿ ಹೋಗಿ ಅಲ್ಲಿಂದ ಬೇರೆ ವಾಹನಗಳಿಂದ ಶಿವಗಂಗೆ ತಲುಪಬಹುದು.