ಲಿಂಗಾಯತ ವಿವಾದ ಚುನಾವಣೆಗಾಗಿ ಅಷ್ಟೇ; ಎಲೆಕ್ಷನ್ ಮುಗಿದ ಮೇಲೆ ಈ ವಿವಾದ ಇರೋದಿಲ್ಲ: ಶಾಮನೂರು ಶಿವಶಂಕರಪ್ಪ

0
562

ಬೆಂಗಳೂರು: ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ವಿವಾದ ಚುನಾವಣೆ ಮುಗಿದ‌ ಬಳಿಕ ರಾಜ್ಯದಲ್ಲಿ ವೀರಶೈವ ಮತ್ತು ಲಿಂಗಾಯತ ವಿವಾದ ಇರುವುದೇ ಇಲ್ಲ. ಇದು ಕೇವಲ ಚುನಾವಣೆಗಾಗಿ ನಡೆಯುತ್ತಿರುವ ಕತೆ ಮಾತ್ರ. ಹಾಗಾಗಿ ಇದಕ್ಕೆ‌ ಹೆಚ್ಚು ಮಹತ್ವ ನೀಡಬೇಕಿಲ್ಲ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿವಾದ ಸಂಬಂಧ ರಾಜ್ಯ ಅಲ್ಪಸಂಖ್ಯಾತ ಆಯೋಗ ರಚಿಸಿರುವ ಲಿಂಗಾಯತ ಸ್ವತಂತ್ರ ಧರ್ಮ ತಜ್ಞರ ಸಮಿತಿ‌ ಸಭೆ ಇದೆ. ಅದು ಸರ್ಕಾರ ರಚಿಸಿರುವ ಸಮಿತಿ. ಸಮಿತಿ ರಚನೆ ಮಾಡಿದಾಗ ನ್ಯಾ.ನಾಗಮೋಹನದಾಸ್ ಮತ್ತು ಸಮಿತಿ ಸದಸ್ಯರು ಒಪ್ಪಿಕೊಳ್ಳಬಾರದಿತ್ತು. ಆ ಸಮಿತಿಗೆ ಏನೂ ಬೆಲೆ ಇಲ್ಲ. ಸಮಿತಿ ಏನೇ ವರದಿ ಕೊಟ್ಟರೂ ಅದನ್ನು ವೀರಶೈವ ಮಹಾಸಭಾ ಒಪ್ಪಿಕೊಳ್ಳಬೇಕಿಲ್ಲ. ಎಷ್ಟೋ ನ್ಯಾಯಾಧೀಶರು ಇಂತಹ ಸಂದರ್ಭದಲ್ಲಿ ಹುದ್ದೆ ಬಿಟ್ಟು ಕೆಳಗಿಳಿಯುತ್ತಾರೆ. ಆದರೆ ಇವರು ಮತ್ತು ಸಮಿತಿ ಸದಸ್ಯರು ಯಾಕೆ ಕುರ್ಚಿಗೆ ಅಂಟಿ ಕುಳಿತಿದ್ದಾರೋ ಗೊತ್ತಿಲ್ಲ ಎಂದು ಸಭೆ ಹಾಗೂ ಸಮಿತಿ ನಡೆಗೆ ಶಾಮನೂರು ಶಿವಶಂಕರಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ನಮ್ಮ ನಿಲುವು ಸ್ಪಷ್ಟವಾಗಿದೆ. ಸಮಿತಿಗೆ ಯಾವುದೇ ಪ್ರಾಮುಖ್ಯತೆ ಇಲ್ಲ. ಸಮಿತಿ ನಮ್ಮನ್ನು ಕರೆದರೂ ಹೋಗುವ ಬಗ್ಗೆ ನಾವು ಯೋಚನೆ ಮಾಡುತ್ತೇವೆ. ಸಮಿತಿ ಸದಸ್ಯರ ಬದಲಾವಣೆ ಆದರೆ ನಮ್ಮನ್ನು ಪರಿಗಣನೆಗೆ ತೆಗೆದುಕೊಂಡರೆ ಮಾತ್ರ ನಾವು ಸಭೆಗೆ ಹೋಗುವ ಬಗ್ಗೆ ಪರಿಶೀಲಿಸಬಹುದು ಎಂದು ಹೇಳಿದರು.

ಇನ್ನು ದಿಂಗಾಲೇಶ್ವರ ಸ್ವಾಮೀಜಿ ಹಾಗೂ ಬಸವರಾಜ ಹೊರಟ್ಟಿ ಏನೂ ಮಾಡೋಕೆ ಆಗಲ್ಲ. ಅವರು ತಿಪ್ಪರಲಾಗ ಹಾಕಿದರೂ ಸಮಿತಿಗೆ ನಾವು ಪ್ರಾಮುಖ್ಯತೆಯನ್ನೇ ಕೊಡಲ್ಲ ಸಮಿತಿ ಕರೆದಾಗ ನೋಡೋಣ‌ ಎಂದು ಶಾಮನೂರು ಶಿವಶಂಕರಪ್ಪ ವ್ಯಂಗ್ಯವಾಡಿದರು.

ಲಿಂಗಾಯತ ಧರ್ಮದ ಬಗ್ಗೆ ಮಾತಾಡುತ್ತಿದ್ದವರು ಈಗ ಯಾಕೋ ಸೈಲೆಂಟ್ ಆಗಿದ್ದಾರೆ. ಪೇಪರ್‌ನಲ್ಲಿ ಕೂಡಾ ಏನೂ ಅವರದ್ದು ಸುದ್ದಿ ಬರುತ್ತಿಲ್ಲ. ಎಲ್ಲೋ ಮಲಗಿರಬೇಕು. ಅಲ್ಲಿ ಜಾಮದಾರ್ ಬಿಟ್ಟರೆ ಬೇರೆ ಯಾರೂ ಏನೂ ಇಲ್ಲ. ಸಚಿವರಾದ ವಿನಯ್ ಕುಲಕರ್ಣಿ, ಎಂ.ಬಿ.ಪಾಟೀಲ್ ಮುಂದೆ ಸಿಎಂ ಆಗುವವರಲ್ಲವೇ ಎಂದು ಟಾಂಗ್ ನೀಡಿದರು.