ಬೆಂಗಳೂರಿನ ಹೊರವಲದಲ್ಲಿರುವ ಸಪ್ತ ಮಾತೃಕೆಯರ ದಿವ್ಯ ಸನ್ನಿಧಿ ಶ್ರೀ ಮಾರ್ಗದಾಂಬ ದೇಗುಲದ ಬಗ್ಗೆ ನಿಮಗೆಷ್ಟು ಗೊತ್ತು?

0
1530

ಅಲ್ಲಲ್ಲಿ ನಿಂತ ನೀರು, ಸುತ್ತಮುತ್ತಲಿನ ವಿಶಾಲವಾದ ಬಯಲನ್ನು ಆವರಿಸಿರುವ ಭತ್ತ, ರಾಗಿ,ಜೋಳ, ದ್ರಾಕ್ಷಿ ಹಾಗು ತೆಂಗಿನ ತೋಟಗಳು, ದೂರದ್ಲಲಿ ಕೈ ಬೀಸಿ ಕರೆಯುವಂತೆ ಗೋಚರಿಸುವ ನಂದಿಬೆಟ್ಟ,ಚಂದ್ರಗಿರಿ, ಹಾಗು ಪಾಪಾಗ್ನಿ ಬೆಟ್ಟಗಳ ಸಾಲು ಇಂತಹ ಪ್ರಾಕೃತಿಕ ಹಿನ್ನಲೆಯ ನಡುವೆ ಕೆರೆಯ ದಂಡೆಯ ಮೇಲೆ ಕಾಣಸಿಗುವುದೇ ಈ ಮಾರ್ಗದಾಂಬ ದೇವಾಲಯವು ಸಪ್ತಮಾತೃಕೆಯರ ವಾಸಸ್ಥಾನವಾಗಿದೆ.

ಬೆಂಗಳೂರಿನಿಂದ ೫೦ ಕಿಮೀ ದೂರದಲ್ಲಿರುವ ದೊಡ್ಡ ಬಳ್ಳಾಪುರದಿಂದ ದೇವನಹಳ್ಳಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಡಕ್ಕೆ ನಂದಿಬೆಟ್ಟಕ್ಕೆ ಸಾಗುವ ಹಾದಿಯಲ್ಲಿ ೫ ಕಿಮೀ ಕ್ರಮಿಸಿದರೆ ಕೋಡಿಹಳ್ಳಿ -ಕೊನಘಟ್ಟ ಹಳ್ಳಿಗಳ ನಡುವಿನ ಅಮಾನಿ ಕೆರೆಯ ಪಕ್ಕದಲ್ಲಿ ಒಂದರ್ಧ ಕಿಮೀ ಸಾಗಿದ್ದಲ್ಲಿ ಕಾಣಸಿಗುವ ಪೂರ್ವಾಭಿಮುಖವಾಗಿ ನಿಂತಿರುವ ಈ ಮಾರ್ಗದಾಂಬ ದೇವಿಯು ಸುತ್ತಮುತ್ತಲ ಗ್ರಾಮದವರ ಭಕ್ತಿಯ, ಸಂಪ್ರದಾಯದ, ಪರಂಪರೆಯ ಪ್ರತೀಕವಾಗಿದ್ದಾಳೆ.

ಚೋಳರ ಕಾಲದಲ್ಲಿ ನಿರ್ಮಿಸಲಾಗಿದೆ ಎನ್ನಲಾದ ಈ ದೇಗುಲವು ಸಪ್ತ ಮಾತೃಕೆಯರಾದ ಬ್ರಾಹ್ಮಿ, ಮಹೇಶ್ವರಿ, ಕೌಮಾರಿ,ವೈಷ್ಣವಿ, ವಾರಾಹಿ, ಇಂದ್ರಾಣಿ ಹಾಗು ಮಾರ್ಗದಾಂಬೆ ದೇವಿಯರ ಕಪ್ಪು ಶಿಲೆಯ ಸುಂದರ ವಿಗ್ರಹಗಳಿಂದ ಅಲಂಕರಿಸಲ್ಪಟ್ಟಿದೆ. ಈ ಏಳು ದೇವಿಯರು ಅಕ್ಕ ತಂಗಿಯರಂತೆ. ಹೀಗೆ ಗರ್ಭಗುಡಿಯಲ್ಲಿ ಸಪ್ತ ಮಾತೆಯರನ್ನೊಳಗೊಂಡ ದೇವಾಲಯವನ್ನು ಕಾಣುವುದು ಅತಿ ವಿರಳ.

ಈ ದೇವಿಯರು ಸುತ್ತಮುತ್ತಲ ಏಳು ಗ್ರಾಮಗಳಿಗೆ ಒಳಪಟ್ಟಿದ್ದು. ಆ ಏಳು ಗ್ರಾಮಗಳ ಗ್ರಾಮದೇವತೆಯಾಗಿರುವ ಈ ಸಪ್ತ ಮಾತೃಕೆಯರ ದೇಗುಲದಲ್ಲಿ ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯಲ್ಲಿ ಪ್ರಾಣಿಬಲಿ ಸರ್ವಥಾ ನಿಷಿದ್ಧವಾಗಿದೆ.ಈ ದೇಗುಲದ ಬಲಕ್ಕೆ ಸ್ವಲ್ಪ ಮುಂದೆ ಸಾಗಿದರೆ ಚೋಳರ ಕಾಲದ ಅರಮನೆ, ಪಟ್ಟಣಗಳ ಪುರಾವೆಗಳು ಲಭ್ಯವಾಗಿದೆ. ಇಲ್ಲಿಂದ ಕೇವಲ ೧೨ ಕಿಮೀ ಕ್ರಮಿಸಿದ್ದಲ್ಲಿ ನಂದಿ ಬೆಟ್ಟದ ಬುಡವನ್ನು ತಲುಪಬಹುದು.ಈ ದೇಗುಲದ ಬಲಕ್ಕೆ ನಾಗರ ಕಲ್ಲಿನಿಂದ ಕೂಡಿದ ಅಶ್ವಥ ಕಟ್ಟೆಯನ್ನು ಮತ್ತು ಕೆಲವು ವೀರಗಲ್ಲನ್ನು ಕಾಣಬಹುದು.

೧೯೯೦ ರ ವೇಳೆಗೆ ಸಂಪೂರ್ಣ ಶಿಥಿಲಗೊಂಡ ಈ ದೇಗುಲದ ಪುನರುತ್ಥಾನ ಮೇಲ್ವಿಚಾರಣೆಯನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ನ ಸಹಭಾಗಿತ್ವದಲ್ಲಿ ಕೋಡಿಹಳ್ಳಿ-ಕೊನಘಟ್ಟ ಗ್ರಾಮೀಣಾಭಿವೃದ್ಧಿ ಸೇವಾಸಂಸ್ಥೆಯು ಜೀರ್ಣೋದ್ದಾರ ಮಾಡಿದೆ.ಜೂನ್ ೩ ೨೦೦೪ ರಂದು ಧರ್ಮಸ್ಥಳ ಮತ್ತು ಸಿದ್ದಗಂಗಾ ಮಠದ ಧರ್ಮದರ್ಶಿಗಳ ನೇತೃತ್ವದಲ್ಲಿ ಸಕಲ ಪೂಜಾ ವಿಧಾನಗಳೊಂದಿಗೆ ಪುನರುತ್ಥಾನಗೊಂಡಿದೆ.