ಕರ್ನಾಟಕದ ಜನರಿಗೆ ಕರೋನ ಜೊತೆಜೊತೆಗೇ ಇಲಿ ಜ್ವರ ಸಂಕಟ ಶುರುವಾಗಿದೆ, ಈಗ ಅತ್ಯಂತ ಎಚ್ಚರ ಅತ್ಯಗತ್ಯ!!

0
235

2020 ರಲ್ಲಿ ಇಡೀ ಜಗತ್ತನ್ನೇ ಆಳುತ್ತಿದೆ ಕೊರೊನಾ ಮಹಾಮಾರಿ. ಇದರೊಂದಿಗೆ ಇನ್ನಷ್ಟು ಹೊಸ ವೈರಸ್ ಗಳು ತಲೆದೂರುತ್ತಿವೆ. ಜನ ಸಾಮಾನ್ಯರು ಈ ಮಹಾ ಖಾಯಿಲೆಗೆ ತತ್ತರಿಸಿ ಹೋಗಿದ್ದಾರೆ. ಹೀಗಿರುವಾಗ ಕೊಪ್ಪಳದಲ್ಲಿ ಇಲಿ ಜ್ವರ ಶುರುವಾಗಿದ್ದು, ಜನರಲ್ಲಿ ಆತಂಕ ಹೆಚ್ಚಾಗಿದೆ.
ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಇಳಿ ಮುಖವಾಗುತ್ತಿರುವುದು ನೆಮ್ಮದಿ ತಂದಿರುವ ಮಧ್ಯೆಯೇ ಇದೀಗ ಕೆಲವು ದಿನಗಳಿಂದ ಇಲಿಜ್ವರಕ್ಕೆ ಸಂಬಂಧಿಸಿದ 6 ಪ್ರಕರಣಗಳು ಪತ್ತೆಯಾಗಿದ್ದು, ಜನತೆಯಲ್ಲಿ ತಲ್ಲಣವನ್ನುಂಟು ಮೂಡಿಸಿದೆ.

ಜಿಲ್ಲೆಯಲ್ಲಿ ಕಳೆದ ಒಂದು ವಾರದಲ್ಲಿ 6 ಜನರಲ್ಲಿ ಇಲಿ ಜ್ವರ ಕಾಣಿಸಿಕೊಂಡಿದೆ. ಇದರಿಂದ ಕೊಪ್ಪಳ ಜಿಲ್ಲೆಯ ಜನರು ಕಂಗಾಲಾಗಿದ್ದಾರೆ. ಕೊಪ್ಪಳ ತಾಲೂಕಿನ ಹೊಸಳ್ಳಿ, ಬಹದ್ದೂರಬಂಡಿ, ಕೆರೆಹಳ್ಳಿ, ಹೊಸಲಿಂಗಾಪುರ, ನರೇಗಲ್ ಹಾಗೂ ಕುಷ್ಟಗಿ ತಾಲೂಕಿನ ಶಾಖಾಪುರ, ಗ್ರಾಮದಲ್ಲಿ ತಲಾ ಒಬ್ಬರಲ್ಲಿ ಇಲಿ ಜ್ವರ ಕಾಣಿಸಿಕೊಂಡಿದೆ.

ಜಿಲ್ಲೆಯಲ್ಲಿ ಇಲಿ ಜ್ವರ ಪ್ರಕರಣಗಳು ಕಾಣಿಸಿಕೊಂಡಿರುವುದರಿಂದ ಸಹಜವಾಗಿಯೇ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಕೊರೊನಾ ಹೋಯಿತೆಂದು ನೆಮ್ಮದಿಯಿಂದ ಇರುವ ಮೊದಲೇ ಇಲಿ ಜ್ವರ ಕಾಣಿಸಿಕೊಂಡಿರುವುದು ಜನರ ನೆಮ್ಮದಿಯನ್ನೇ ಕಸಿದುಕೊಂಡಿದೆ. ಒಟ್ಟಿನಲ್ಲಿ ಮನೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಇಲಿಜ್ವರದಿಂದ ದೂರ ಇರಬೇಕಿದೆ.

ಇಲಿ ಜ್ವರ ಹರಡಲು ಸ್ಟ್ರೈರೋ ಕೀಟ ಎಂಬ ಸೂಕ್ಷ್ಮಾಣು ಜೀವಿ ಕಾರಣವಾಗಿದ್ದು, ಸಾಂಕ್ರಾಮಿಕ ರೋಗ ಸೋಂಕು ಹೊಂದಿರುವ ಇಲಿ, ಹೆಗ್ಗಣ, ಬೆಕ್ಕು, ನಾಯಿ ಹಾಗೂ ಇತರ ಕಾಡು ಪ್ರಾಣಿಗಳ ಮೂತ್ರ ವಿಸರ್ಜನೆಯಿಂದ ರೋಗಾಣು ನೀರಿನಲ್ಲಿ ಸೇರಿಕೊಳ್ಳುತ್ತದೆ. ಜೊತೆಗೆ ಚರಂಡಿ ಶುದ್ಧ ಇರದಿರುವುದು ಹಾಗೂ ಮೂತ್ರ ವಿಸರ್ಜನೆಯಂತಹ ನೀರು ಮನುಷ್ಯನ ದೇಹ ಸೇರಿದರೆ ಅಥವಾ ಗಾಯ ಅಥವಾ ಬಾಯಿ, ಮೂಗು, ಕಣ್ಣುಗಳ ಒಳ ಭಾಗದ ಮೂಲಕ ವೈರಸ್ ಕಣಗಳು ದೇಹ ಸೇರಿ ಇಲಿ ಜ್ವರ ಬರುತ್ತದೆ. ಹೀಗಾಗಿ ಜನರು ಜಾಗೃತರಾಗಿರಬೇಕು. ಆದರೆ ಭಯ ಪಡುವ ಅಗತ್ಯ ಇಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.